More

    ಬಾಡಾ ಕ್ರಾಸ್ ಬಳಿ ಶೀಘ್ರವೇ ಮೆಗಾ ಡೇರಿ ಸ್ಥಾಪನೆ

    ಹರಿಹರ: ದಾವಣಗೆರೆ ಬಾಡಾ ಕ್ರಾಸ್‌ನ ಕಲ್ಪನಹಳ್ಳಿ ಸರ್ವೆ ಜಮೀನಿನಲ್ಲಿ ಶೀಘ್ರವೇ ಮೆಗಾ ಡೇರಿ ಸ್ಥಾಪನೆ ಮಾಡಲಾಗುವುದೆಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್ ಹೇಳಿದರು.

    ನಗರದ ಶಿವಮೊಗ್ಗ ರಸ್ತೆ ಮಹಜೇನಹಳ್ಳಿ ಊರಮ್ಮ ದೇವಸ್ಥಾನದ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ನಂದಿನಿ ಹಾಲು ಉತ್ಪನ್ನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.

    ಆ ಭಾಗದಲ್ಲಿ ಒಕ್ಕೂಟಕ್ಕೆ ಸೇರಿದ 14 ಎಕರೆ ಜಮೀನಿದ್ದರಿಂದ ಮೆಗಾ ಡೇರಿ ಆರಂಭಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಅವಧಿ ನಂತರ ಕಾಮಗಾರಿ ಕೈಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

    ಒಕ್ಕೂಟದ ಉಪ ವ್ಯವಸ್ಥಾಪಕ ಸುರೇಶ್ ಹುಳ್ಳಿ ಮಾತನಾಡಿ, ಮೂರು ಜಿಲ್ಲೆಗಳಿಂದ ಪ್ರತಿ ದಿನ 6.03 ಲಕ್ಷ ಲೀಟರ್ ಹಾಲು ಸಂಗ್ರಹಣೆ, 2.20 ಲಕ್ಷ ಲೀ. ಮಾರಾಟವಿದೆ. ದೇಶದಲ್ಲಿ ಅಮೂಲ್ 1ನೇ ಸ್ಥಾನದಲ್ಲಿದ್ದರೆ, ರಾಜ್ಯದ ಕೆಎಂಎಫ್ 2ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ 1ನೇ ಸ್ಥಾನದಲ್ಲಿದೆ ಎಂದರು.

    ಹಾಲು ಖರೀದಿಸುವಾಗ ಕೈಗೊಳ್ಳುವ ಎಚ್ಚರಿಕೆಯೇ ನಂದಿನಿ ಹಾಲಿನ ಹೆಚ್ಚಿನ ಮಾರಾಟಕ್ಕೆ ಕಾರಣ. ಆಂಧ್ರ, ಮಹಾರಾಷ್ಟ್ರ, ಕೇರಳದಿಂದ ಶಿವಮೊಗ್ಗ ಒಕ್ಕೂಟದ ಹಾಲಿಗೆ ಬೇಡಿಕೆ ಇದೆ. ಸರ್ಕಾರದ 5 ರೂ. ಪ್ರೋತ್ಸಾಹಧನ ಸೇರಿದಂತೆ ರೈತರಿಂದ ಪ್ರತಿ ಲೀ.ಗೆ 27.50 ರೂ.ನಂತೆ ಹಾಲನ್ನು ಖರೀದಿಸಲಾಗುತ್ತಿದೆ ಎಂದರು.

    ಮಾರಾಟ ಅಧೀಕ್ಷಕ ಜೆ.ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಇದು 44ನೇ ಮಾರಾಟ ಮಳಿಗೆಯಾಗಿದೆ. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಪೇಡಾ, ರಸಗುಲ್ಲಾ, ಗುಡ್‌ಲೈಫ್ ಸೇರಿ 100ಕ್ಕೂ ಅಧಿಕ ಬಗೆಯ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಮಳಿಗೆ ಮಾಲೀಕ ಎಸ್.ಅನಂತರಾಮ ಶೆಟ್ರು, ನಿವೃತ್ತ ಶಿಕ್ಷಕ ಎಸ್.ಕೃಷ್ಣಮೂರ್ತಿ ಶೆಟ್ರು, ಆರ‌್ಯ ವೈಶ್ಯ ಮಂಡಳಿ ಕಾರ್ಯದರ್ಶಿ ಆರ್.ಎಲ್.ರಮೇಶ್, ನಾಗರಾಜ್ ಶೆಟ್ರು, ಗೃಹ ರಕ್ಷಕ ದಳದ ಘಟಕಾಧಿಕಾರಿ ವೈ.ಆರ್.ಗುರುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts