More

    ಕರ್ತವ್ಯ ನಿರ್ವಹಣೆ ವೇಳೆ ಬೇಡ ಒತ್ತಡ

    ಹರಿಹರ: ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಯಾರೂ ಒತ್ತಡಕ್ಕೆ ಒಳಗಾಗದೇ ಸಂಯಮದಿಂದ ಕೆಲಸ ಮಾಡಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ತಿಳಿಸಿದರು.

    ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಸ್ಕಿಜೋಪ್ರೀನಿಯಾ (ಮಾನಸಿಕ) ರೋಗಿಗಳನ್ನು ಮನೆಯಲ್ಲಿಟ್ಟು ಕೊಳ್ಳುವುದು ಅಸಾಧ್ಯ. ಅಪಾಯ ಎಂಬ ಕಾಲವಿತ್ತು. ಆದರೆ ಹಲವು ಆವಿಷ್ಕಾರದ ಫಲವಾಗಿ ಸರಳ ಹಾಗೂ ಪರಿಣಾಮಕಾರಿ ಔಷಧ ಬಳಕೆ ಮತ್ತು ಚಿಕಿತ್ಸೆಯಿಂದ ಅನೇಕ ರೋಗಿಗಳು ಗುಣಮುಖರಾಗಿದ್ದಾರೆ ಎಂದರು.

    ಸಾಮಾನ್ಯವಾಗಿ 15ರಿಂದ 25 ವರ್ಷದೊಳಗಿನ, ಪದೇಪದೆ ತೀವ್ರ ತರಹದ ಸಂಕಷ್ಟ ಎದುರಿಸುವ ಹಾಗೂ ಒತ್ತಡದಲ್ಲಿ ಕೆಲಸ ಮಾಡುವವರಿಗೆ ಸ್ಕಿಜೋಪ್ರೀನಿಯಾ ರೋಗ ಬರುತ್ತದೆ ಎಂದರು.

    ಜಿಲ್ಲಾ ಮನೋವೈದ್ಯ ಡಾ.ಗಂಗಂ ಸಿದ್ದಾರೆಡ್ಡಿ ಮಾತನಾಡಿ, ಮಾನಸಿಕ ಕಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು. ಇದು ಯಾವುದೋ ಪೂರ್ವಜನ್ಮದ ಪಾಪ-ಪುಣ್ಯದಿಂದ, ಗ್ರಹ ದೋಷದಿಂದ, ದೆವ್ವ ಭೂತದಿಂದ ಬರುವ ಕಾಯಿಲೆಯಲ್ಲ. ಮೆದುಳಿನಲ್ಲಿ ಉಂಟಾಗುವ ರಾಸಾಯನಿಕ ಏರು-ಪೇರು ಈ ರೋಗ ಉಲ್ಬಣಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು.

    ರಾಜ್ಯದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಯಾರು ಖಿನ್ನತೆ ಅಥವಾ ಡಿಪ್ರೆಶನ್‌ಗೆ ಒಳಗಾಗಿರುತ್ತಾರೋ ಅಂತವರು ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಮುಖ್ಯವಾಗಿ ಇಂತಹ ವ್ಯಕ್ತಿಗಳಿಗೆ ಪ್ರೀತಿ ಹಾಗೂ ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಚ್.ಪಾಟೀಲ್, ಸಂತೋಷ್ ಕುಮಾರ್, ವಿಜಯಕುಮಾರ್, ಶಶಿಕಾಂತ್, ರಾಘವೇಂದ್ರ, ಆಶಾ, ಸ್ಮಿತಾ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts