More

    ದನ ಕಾಯೋಳ ಜತೆ ಪಾಂಡ್ಯ ನಿಶ್ಚಿತಾರ್ಥ!: ನಟಿ ನತಾಶಾಗೆ ಕ್ರಿಕೆಟಿಗ ಬೌಲ್ಡ್

    ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದ ಸಂಭ್ರಮದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕನ್ನಡದ ‘ದನ ಕಾಯೋನು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಜತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಪಾಂಡ್ಯ ಹೊಸ ವರ್ಷಾರಂಭದಲ್ಲೇ ಅಭಿಮಾನಿಗಳಿಗೆ ವಿಶೇಷ ಸುದ್ದಿ ನೀಡಿದ್ದಾರೆ.

    ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ್ಪಂಗೇಜ್ಡ್’ ಎಂದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದಿದೆ. ದುಬೈನಲ್ಲಿ ವಿಹಾರ ದೋಣಿಯೊಂದರಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಪಾಂಡ್ಯ-ನತಾಶಾ ಆಪ್ತರು ಮಾತ್ರ ಸಮಾರಂಭದಲ್ಲಿದ್ದರು. ಇದರ ಬೆನ್ನಲ್ಲೇ, ದೋಣಿಯಲ್ಲಿ ಪಾಂಡ್ಯ ಮೊಣಕಾಲೂರಿ ಪ್ರಪೋಸ್ ಮಾಡಿರುವ ಮತ್ತು ಪಾಂಡ್ಯ ತುಟಿಗೆ ಮುತ್ತಿಟ್ಟು ನತಾಶಾ ಒಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಂಡ್ಯ ತೊಡಿಸಿದ ಉಂಗುರದ ಜತೆಗೆ ನತಾಶಾ ಸೆಲ್ಪಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

    ಇದಕ್ಕೆ ಮುನ್ನ ಮಂಗಳವಾರ ರಾತ್ರಿ ನತಾಶಾ ಜತೆ ಪೋಸ್ ನೀಡಿರುವ ಚಿತ್ರದೊಂದಿಗೆ ಪಾಂಡ್ಯ, ‘ಹೊಸ ವರ್ಷವನ್ನು ನನ್ನ ಪಟಾಕಿಯೊಂದಿಗೆ ಆರಂಭಿಸುತ್ತಿರುವೆ’ ಎಂದು ಬರೆದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಗಳ ಪ್ರಕಾರ 26 ವರ್ಷದ ಹಾರ್ದಿಕ್ ಪಾಂಡ್ಯ, 27 ವರ್ಷ ನತಾಶಾಗಿಂತ ಒಂದು ವರ್ಷ ಕಿರಿಯರಾಗಿದ್ದಾರೆ. ಕಳೆದ ಕೆಲಸಮಯದಿಂದ ನತಾಶಾ, ಪಾಂಡ್ಯಗೆ ಆಪ್ತರಾಗಿದ್ದರು ಎನ್ನಲಾಗಿದೆ.

    ಭಾರತ ಪರ 11 ಟೆಸ್ಟ್, 54 ಏಕದಿನ, 40 ಟಿ20 ಪಂದ್ಯಗಳನ್ನು ಆಡಿರುವ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ಕಳೆದ ಸೆಪ್ಟೆಂಬರ್​ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿದ್ದಾರೆ. ಅಕ್ಟೋಬರ್​ನಲ್ಲಿ ಬೆನ್ನುನೋವಿನ ಸಮಸ್ಯೆಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ನ್ಯೂಜಿಲೆಂಡ್ ಪ್ರವಾಸದ ವೇಳೆ ಪಾಂಡ್ಯ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಗುಜರಾತ್ ಆಟಗಾರನಾಗಿರುವ ಪಾಂಡ್ಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದಾರೆ.

    ಕಳೆದ ವರ್ಷಾರಂಭ ವಿವಾದ

    ಕಳೆದ ವರ್ಷಾರಂಭದಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಜತೆಗೆ ಕಾಣಿಸಿಕೊಂಡಿದ್ದ ಪಾಂಡ್ಯ, ಮಹಿಳೆಯರ ಬಗೆಗಿನ ಅಸಭ್ಯ ಹೇಳಿಕೆಯಿಂದ ವಿವಾದಕ್ಕೀಡಾಗಿದ್ದರು. ಆದರೆ ಈ ವರ್ಷರಂಭದಲ್ಲಿ ಸಂಸಾರಿಯಾಗುವತ್ತ ಮೊದಲ ಹೆಜ್ಜೆ ಇಟ್ಟಿರುವ ಹಾರ್ದಿಕ್, ಸವಿಸುದ್ದಿಯೊಂದಿಗೆ ಗಮನಸೆಳೆದಿರುವುದು ವಿಶೇಷ.

    ಅಭಿನಂದನೆಗಳು ಹಾರ್ದಿಕ್. ಎಂಥಾ ಆಹ್ಲಾದಕರ ಅಚ್ಚರಿ. ಇಬ್ಬರಿಗೂ ಮುಂದಿನ ದಿನಗಳು ಅತ್ಯುತ್ತಮವಾಗಿರಲಿ. ದೇವರು ಹಾರೈಸಲಿ.

    | ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

    ದನ ಕಾಯೋನು ಸಿನಿಮಾದಲ್ಲಿ ನಟನೆ!

    2014ರಲ್ಲಿ ಹಿಂದಿ ಬಿಗ್​ಬಾಸ್ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದ ನತಾಶಾ ಸ್ಟಾಂಕೋವಿಕ್, ‘ದನ ಕಾಯೋನು’ ಕನ್ನಡ ಸಿನಿಮಾದ ಹಾಡೊಂದರಲ್ಲೂ ಕುಣಿದಿದ್ದರು. ಸೆರ್ಬಿಯಾ ಪ್ರಜೆಯಾಗಿದ್ದರೂ 2012ರಿಂದ ಮುಂಬೈನಲ್ಲಿ ನೆಲೆಸಿರುವ ನತಾಶಾ, ಆರಂಭದಲ್ಲಿ ರೂಪದರ್ಶಿಯಾಗಿದ್ದರು. 2013ರಲ್ಲಿ ಸತ್ಯಾಗ್ರಹ ಸಿನಿಮಾದ ಹಾಡಿನಲ್ಲಿ ಕುಣಿಯುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. 2014ರಲ್ಲಿ ಆಕ್ಷನ್ ಜಾಕ್ಸನ್ ಸಿನಿಮಾದಲ್ಲಿ ನಟಿಸಿದ್ದರು. ನಂತರ ಫುಕ್ರೆ ರಿಟರ್ನ್ಸ್, ಡ್ಯಾಡಿ, ಫ್ರೆ ೖಡೇ, ಜೂಟಾ ಕಹಾನಿ ಕಾ, ದಿ ಬಾಡಿ ಸಿನಿಮಾದ ಹಾಡುಗಳ ಐಟಂ ಸಾಂಗ್​ಗಳಲ್ಲಿ ಕುಣಿದಿದ್ದಾರೆ. 2018ರಲ್ಲಿ ಶಾರುಖ್ ಖಾನ್-ಅನುಷ್ಕಾ ಶರ್ಮ ನಟನೆಯ ಝೀರೋ ಸಿನಿಮಾದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು. ಕಳೆದ ವರ್ಷ ನಚ್​ಬಲಿಯೇ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts