More

    ಲಿಂಗರಾಜ ನಗರದಲ್ಲಿ ಹ್ಯಾಪಿ ಹಾಮೋನ್

    ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

    ಲಿಂಗರಾಜ ನಗರ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಬಡಾವಣೆ. ಇಲ್ಲಿರುವವರಲ್ಲಿ ಬಹುತೇಕರು ವಿದ್ಯಾವಂತರು, ಒಳ್ಳೆಯ ಉದ್ಯೋಗದಲ್ಲಿರುವವರು. ಅದರಲ್ಲೂ 55ರಿಂದ 60 ವಯಸ್ಸಿನ ಆಸುಪಾಸಿನವರೇ ಹೆಚ್ಚು. ಇವರ ಬಹುತೇಕ ಮಕ್ಕಳು ಬೆಂಗಳೂರಿನಂತಹ ನಗರ ಅಥವಾ ವಿದೇಶದಲ್ಲಿ ನೆಲೆಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಹಿರಿಜೀವಗಳಿಗೆ ಒಂಟಿತನ ಕಾಡದಿರಲಿ ಎನ್ನುವ ಕಾರಣಕ್ಕೆ ಬಡಾವಣೆಯ ಸಮಾನ ಮನಸ್ಕರು ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದುವೇ ಪೂಜೆ-ಪುನಸ್ಕಾರ, ಸಂಗೀತ, ನೃತ್ಯದ ಮುಖೇನ ಸಂತೋಷದ ಹಾಮೋನ್ ಎಂದೇ ಕರೆಯಲಾಗುವ ಡೋಪಮೈನ್ ಉತ್ಪತ್ತಿ ಮಾಡಿಸುವುದು.

    ಲಿಂಗರಾಜ ನಗರ ಸುಸಜ್ಜಿತ ಬಡಾವಣೆಯಾಗಿದ್ದು, ಇಲ್ಲಿ ಸ್ವಂತ ಮನೆಗಳಿರುವುದೇ ಹೆಚ್ಚು. ಅಪಾರ್ಟ್​ವೆುಂಟ್ ಕಡಿಮೆ. ಗಂಡ-ಹೆಂಡತಿ ಇಬ್ಬರೇ ಇರುವ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಕ್ಕಳು-ಸೊಸೆ, ಮೊಮ್ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಅಜ್ಜ-ಅಜ್ಜಿ ಅಲ್ಲಿಗೆ ಹೋಗಲು ಮನಸ್ಸಿಲ್ಲದೆಯೋ ಅಥವಾ ಸಾಧ್ಯವಾಗದೆಯೋ ಇಲ್ಲಿಯೇ ಉಳಿದುಕೊಂಡಿದ್ದಾರೆ. ತಾವಿಬ್ಬರೇ ಇರುವುದರ ಲಾಭ ಪಡೆದು ಯಾರಾದರೂ ಏನಾದರೂ ಮಾಡಿಯಾರು ಎನ್ನುವ ಭಯದಿಂದಲೋ ಅಥವಾ ಬೆರೆಯಲಾಗದ ಸ್ವಭಾವದಿಂದಾಗಿ ಜನಸಖ್ಯದಿಂದ ದೂರ ಉಳಿಯಲು ಬಯಸುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಇಂಥವರು ನಿಧಾನಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಒಂಟಿತನ ಕಾಡಿ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಸಂಗತಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಡಾವಣೆಯ ಸಮಾನ ಮನಸ್ಕರು ಸೇರಿ ಇದಕ್ಕೆ ಮದ್ದು ಕಂಡು ಹಿಡಿದಿದ್ದಾರೆ. ಅದುವೇ ಸಂತೋಷದ ಹಾಮೋನ್ ಜನರಲ್ಲಿ ಉತ್ಪತ್ತಿ ಮಾಡುವುದು.

    ಡೋಪಮೈನ್ ಮಾರ್ಗ:

    ಜನ ಒಂಟಿತನದಿಂದ ಕಾಯಿಲೆಗೆ ತುತ್ತಾಗುತ್ತಿರುವುದನ್ನು ಗಮನಿಸಿದ ಶಿಕ್ಷಣ ತಜ್ಞ ಜಿ.ವಿ. ಒಳಸಂಗ, ಲಿಂಗರಾಜ ಅಂಗಡಿ, ವೀರು ಉಪ್ಪಿನ, ಸಂಗಮೇಶ ಮೆಣಸಿನಕಾಯಿ, ಮಹೇಶ ಪಾಟೀಲ, ಸಾಹೇಬ್​ಗೌಡ ಪೋಲಿಸಪಾಟೀಲ, ಕೆ.ಎಸ್. ಕೌಜಲಗಿ, ಶರಣಪ್ಪ ಕೊಟಗಿ, ಶಾಂತೇಶ ಕೆಂಚಣ್ಣವರ, ನಾಗೇಂದ್ರ ಮನಗೂಳಿ, ನಾಗರಾಜ ಕಲಾಲ ಮತ್ತಿತರು ಈ ಬಗ್ಗೆ ಅಧ್ಯಯನ ಮಾಡಿ ಜನರಲ್ಲಿ ಡೋಪಮೈನ್ ಉತ್ಪತ್ತಿ ಮಾಡಿಸಬೇಕು ಎಂದು ನಿರ್ಧರಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

    ಲಿಂಗರಾಜ ನಗರದಲ್ಲಿರುವ ಕಟ್ಟಿಮಂಗಳಾ ದೇವಿ ದೇವಸ್ಥಾನವನ್ನು ಕಳೆದ ಏಪ್ರಿಲ್​ನಲ್ಲಿ ಜೀಣೋದ್ಧಾರ ಮಾಡಲಾಯಿತು. ಅಂದಿನಿಂದ ಪ್ರತಿ ಮಂಗಳವಾರ ಮಹಾಮಂಗಳಾರತಿ ಮಾಡುವ ಪರಂಪರೆ ಶುರುವಾಯಿತು. ವಿಶೇಷವಾಗಿ ಹಿರಿಯರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಜತೆಗೆ ಬಡಾವಣೆಯಲ್ಲಿಯೇ ಇರುವ ವೀರಾಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರ ಮಹಾಮಂಗಳಾರತಿ ಆರಂಭಿಸಿದರು. ಒಂಟಿಯಾಗಿ ಮನೆಯಲ್ಲಿದ್ದವರು ಈ ಎರಡೂ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡು ಪ್ರಸನ್ನರಾಗುತ್ತಿದ್ದಾರೆ. ಜನರೊಂದಿಗೆ ಬೆರೆತು, ಹರಟೆ ಹೊಡೆದು ನೆಮ್ಮದಿ ಕಾಣುತ್ತಿದ್ದಾರೆ. ಇಂಥ ಬದಲಾವಣೆಯಿಂದ ಪ್ರೇರೇಪಿತರಾದ ಸಮಾನ ಮನಸ್ಕರು ದಸರಾ ಹಬ್ಬದ ಅಂಗವಾಗಿ ಅದ್ದೂರಿಯಾಗಿ ದಾಂಡಿಯಾ ಹಮ್ಮಿಕೊಂಡಿದ್ದರು. 60, 70 ವರ್ಷ ವಯಸ್ಸಿನ ಮಹಿಳೆಯರು ಮತ್ತು ಪುರುಷರು ಸೇರಿ ನೃತ್ಯ ಮಾಡಿದರು. ವಿಶೇಷವಾಗಿ 87ರ ಹಿರಿಯ ಶಿವಶಂಕರಯ್ಯ ಹಿರೇಮಠ ಅವರೂ ಹೆಜ್ಜೆ ಹಾಕಿ ಖುಷಿ ವ್ಯಕ್ತ ಪಡಿಸಿದರು. ಕನ್ನಡ ರಾಜ್ಯೋತ್ಸವದ ಬೈಕ್ ರ್ಯಾಲಿಯಲ್ಲಿಯೂ ಮಿಂಚಿದ್ದು 60 ವರ್ಷ ಮೇಲ್ಪಟ್ಟವರೇ. ಇಂಥ ಅನೇಕ ವಿದಾಯಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ.

    ‘ಇಂಥ ಸುಂದರ ಬದಲಾವಣೆಯಿಂದಾಗಿ ವೃದ್ಧಾಶ್ರಮ ಸೇರಬೇಕೆಂದುಕೊಂಡವರೂ ಲಿಂಗರಾಜ ನಗರದಲ್ಲಿಯೇ ಇರಬಯಸುತ್ತಿದ್ದಾರೆ. ಇಡೀ ಲಿಂಗರಾಜ ನಗರವನ್ನು ಖಿನ್ನತೆಯಿಂದ ಮುಕ್ತವಾಗಿಸಬೇಕು. ಸದಾ ಲವಲವಿಕೆಯಿಂದ, ಉತ್ಸಾಹದಿಂದಿರುವಂತೆ, ನಾವು-ನಮ್ಮವರೆಂದು ಕೂಡಿರುವಂತೆ ಮಾಡಬೇಕೆನ್ನುವ ಇರಾದೆ ಸಮಾನ ಮನಸ್ಕರದ್ದು’ ಎನ್ನುತ್ತಾರೆ ಜಿ.ವಿ. ಒಳಸಂಗ.

    ಏನಿದು ಡೋಪಮೈನ್?

    ನಮ್ಮ ದೇಹವು ಹಾಮೋನುಗಳನ್ನು ಹೊಂದಿದೆ. ಅದು ನಮ್ಮನ್ನು ಸಂತೋಷ ಮತ್ತು ಸಕಾರಾತ್ಮಕವಾಗಿಡುತ್ತದೆ. ಡೋಪಮೈನ್ ಒಂದು ರಾಸಾಯನಿಕ ಸಂದೇಶ ವಾಹಕವಾಗಿದ್ದು, ಇದು ಮೆದುಳನ್ನು ಅನೇಕ ಉತ್ತಮ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಮೆದುಳಿನಲ್ಲಿ ಹೆಚ್ಚು ಡೋಪಮೈನ್ ರಾಸಾಯನಿಕಗಳು ಬಿಡುಗಡೆಯಾದಾಗ ಸ್ಪೂರ್ತಿ, ಸಂತೋಷ ಮತ್ತು ಸಕಾರಾತ್ಮಕ ಭಾವನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತದೆ. ಡೋಪಮೈನ್ ಅನ್ನು ಹ್ಯಾಪಿ ಹಾಮೋನ್, ಲವ್ ಹಾಮೋನ್ ಎಂದೂ ಕರೆಯಲಾಗುತ್ತದೆ. ಸಂಗೀತ ಕೇಳುವುದು ಮಿದುಳಿನಲ್ಲಿ ಶೇ. 9ರಷ್ಟು ಡೋಪಮೈನ್ ಉತ್ಪಾದನೆಗೆ ಕಾರಣವಾಗುತ್ತದೆ ಎಂದು ಒಂದು ಸಂಶೋಧನೆಯು ಹೇಳಿದರೆ, ಮತ್ತೊಂದು ಸಂಶೋಧನೆಯು ಒಂದು ಗಂಟೆಯ ಧ್ಯಾನವು ಶೇ. 64ರಷ್ಟು ಡೋಪಮೈನ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts