More

    ಪಚ್ಚೆದೊಡ್ಡಿಯ ವಿದ್ಯಾರ್ಥಿಗಳಿಗೆ ವಾಹನ ಸೌಲಭ್ಯ

    ಹನೂರು: ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ನೀಡಿದ್ದ ಭರವಸೆಯಂತೆ ಶುಕ್ರವಾರದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನ ಸೌಕರ್ಯ ಕಲ್ಪಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಾಲ್ನಡಿಗೆ ತಪ್ಪಿದಂತಾಗಿದೆ.

    ಪಚ್ಚೆದೊಡ್ಡಿ ಗ್ರಾಮವು ಅರಣ್ಯ ಪ್ರದೇಶದೊಳಗಡೆ ಇದ್ದು, ಇಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳಿವೆ. ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, 1ರಿಂದ 5ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ಮುಂದಿನ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಕಾಂಚಳ್ಳಿ, ಅಜ್ಜೀಪುರ, ರಾಮಾಪುರ ಕಡೆಗಳಿಗೆ ಅರಣ್ಯ ಪ್ರದೇಶದ ನಡುವೆ ಹಾದುಹೋಗಿರುವ 4 ಕಿ.ಮೀ ಮಣ್ಣಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ಕಾಡು ಪ್ರಾಣಿಗಳ ಭಯ ಕಾಡುತ್ತಿತ್ತು. ಇದರಿಂದ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದರು.

    ಈ ಬಗ್ಗೆ ತಿಳಿದ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಫೆ.10ರಂದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವಿದ್ಯಾರ್ಥಿಗಳು ಸಾರಿಗೆ ಸೌಕರ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು. ಬಳಿಕ ಸಚಿವರು ವಾಹನ ಸೌಕರ್ಯ ಕಲ್ಪಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆ ಗ್ರಾಮದಿಂದ ಇತರೆಡೆಯ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡ ಅರಣ್ಯ ಇಲಾಖೆ ಶುಕ್ರವಾರದಿಂದ ವಾಹನ ಸೌಕರ್ಯ ಕಲ್ಪಿಸಿದೆ.

    ವೆಚ್ಚ ಭರಿಸಲಿದೆ ಅರಣ್ಯ ಇಲಾಖೆ: ಗುರುವಾರ ಸಂಜೆ ಗ್ರಾಮದ ಶಾಲೆಯಲ್ಲಿ ಅರಣ್ಯ ಅಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಸಭೆ ನಡೆಸಿದರು. ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಕಲ್ಪಿಸಿದ್ದು, ನಿಗದಿತ ಸಮಯಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು. ಈ ಬಗ್ಗೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು. ವಾಹನ ಸೌಕರ್ಯದ ನಿರ್ವಹಣೆಯ ಜವಾಬ್ದಾರಿಯನ್ನು ಪರಿಸರ ಅಭಿವೃದ್ಧಿಗೆ ವಹಿಸಲಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು ಎಂದು ಹೇಳಿದರು.

    ಸಂಚಾರ ಯಾವಾಗ?: ಗ್ರಾಮದಿಂದ ಅಜ್ಜೀಪುರದವರೆಗೆ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಕಲ್ಪಿಸಲಾಗಿದ್ದು, ಬೆಳಗ್ಗೆ 7ಕ್ಕೆ ಗ್ರಾಮದಿಂದ ಹೊರಡಲಿದೆ. ಸಂಜೆ 4.30ಕ್ಕೆ ಕಾಂಚಳ್ಳಿಯಿಂದ ಹಾಗೂ 5.30ಕ್ಕೆ ಅಜ್ಜೀಪುರದಿಂದ ವಾಹನವು ಸಂಚರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts