More

    ಬಸ್ ಸೌಕರ್ಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

    ಹನೂರು : ತಾಲೂಕಿನ ಅರೆಕಡುವಿನದೊಡ್ಡಿ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


    ಗ್ರಾಮದಲ್ಲಿ 100ಕ್ಕೂ ಹೆಚ್ಚು ಗಿರಿಜನ ಕುಟುಂಬಗಳಿದ್ದು, ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಇಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, 30ಕ್ಕೂ ಹೆಚ್ಚು ಮಕ್ಕಳು 3 ಕಿ.ಮೀ. ದೂರಲ್ಲಿರುವ ಬೈಲೂರು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಬಸ್ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಮಕ್ಕಳು ನಿತ್ಯ ನಡೆದುಕೊಂಡೇ ಹೋಗಬೇಕಿದೆ. ಈ ವೇಳೆ ಮಳೆ ಬಂದರೆ ತುಂಬ ತೊಂದರೆ ಆಗಲಿದೆ. ಅಲ್ಲದೆ, ಕೆಲವೊಂದು ದಿನಗಳಲ್ಲಿ ಮಳೆಯಿಂದಾಗಿ ಮಕ್ಕಳು ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇತ್ತ ಇಲ್ಲಿನ ಜನರು ಕೆಲಸ ಕಾರ್ಯಗಳ ನಿಮಿತ್ತ ಒಡೆಯರಪಾಳ್ಯ, ಬೈಲೂರು ಇನ್ನಿತರ ಕಡೆಗಳಿಗೆ ತೆರಳಬೇಕಾದರೆ ಆಟೋಗಳಿಗೆ ಹೆಚ್ಚಿನ ಹಣ ನೀಡಬೇಕಿದೆ. ರಸ್ತೆ ಉತ್ತಮವಾಗಿದ್ದರೂ ಬಸ್ ಸೌಕರ್ಯ ಕಲ್ಪಿಸಿಲ್ಲ. ಪರಿಣಾಮ, ಬೇರೆಡೆಗೆ ತೆರಳಬೇಕಾದರೆ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ ಎಂದು ಗ್ರಾಮಸ್ಥರು ಹೇಳಿದರು.


    ಬಸ್ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಮೂರ‌್ನಾಲ್ಕು ವರ್ಷದಿಂದ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ತುಂಬ ತೊಂದರೆ ಪಡುವಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


    ಬೈಲೂರಿನಿಂದ ಗ್ರಾಮಕ್ಕೆ ರಸ್ತೆ ಉತ್ತಮವಾಗಿದೆ. ಆದರೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ನಿತ್ಯ 6 ಕಿ.ಮೀ. ನಡೆದೇ ಶಾಲೆಗೆ ತೆರಳಬೇಕಿದೆ. ಜತೆಗೆ ಕಾಡು ಹಂದಿಗಳ ಕಾಟವಿದ್ದು, ಭಯದಿಂದ ಸಂಚರಿಸಬೇಕಿದೆ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವುದರ ಮೂಲಕ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಗ್ರಾಮಸ್ಥರಾದ ಗುರುಮಲ್ಲಪ್ಪ, ಮಾದೇವ, ಜಡೇಸ್ವಾಮಿ, ಜಡೇಯಾ, ಜ್ಯೋತಿ, ದುಂಡಮ್ಮ, ನಾಗಮಣಿ, ಹಾಲಮಣಿ, ಮಸಣಮ್ಮ, ವಿದ್ಯಾರ್ಥಿಗಳಾದ ಪಲ್ಲವಿ, ಭೂಮಿಕಾ, ಹರ್ಷಿಣಿ ಹಾಗೂ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts