More

    ಚುನಾವಣೆಗೆ ವಿರೋಧ ವ್ಯಕ್ತಪಡಿಸಿದ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕ್‌ನ ಮತದಾನ ವಂಚಿತ ಷೇರುದಾರರು

    ಹನುಮಸಾಗರ: ಪಟ್ಟಣದ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಚುನಾವಣೆ ವಿರೋಧಿಸಿ ಮತದಾನ ವಂಚಿತ ಷೇರುದಾರರು ಮಂಗಳವಾರ ಕಚೇರಿ ಮುತ್ತಿಗೆ ಹಾಕಿ, ಸಿಇಒ ಜತೆ ವಾಗ್ವಾದ ನಡೆಸಿದರು.

    20 ವರ್ಷಗಳಿಂದ ಸಾವಿರಾರು ಜನ ಷೇರುದಾರರಿದ್ದಾರೆ. ಆದರೆ, ಕೆಲವರಿಗೆ ಮಾತ್ರ ಮಾಹಿತಿ ನೀಡಿ ಚುನಾವಣೆ ಪ್ರಾರಂಭಿಸಲಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ನಮಗೆ ಮತದಾನದ ಹಕ್ಕು ನೀಡಿಲ್ಲ. ವಾರ್ಷಿಕ ಸಭೆಗೆ ಹಾಜರಾದ ಷೇರುದಾರರನ್ನು ಬಿಟ್ಟು, ಗೈರಾದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆ ಬಗ್ಗೆ ನ.4 ರಂದು ಅಧಿಸೂಚನೆ ಬಂದಿದೆ. ಆದರೆ, ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ಷೇರುದಾರರಿಗೆ ಚುನಾವಣೆ ಬಗ್ಗೆ ಮಾಹಿತಿ ನೀಡಿಲ್ಲ. ಸದ್ಯ ಇರುವ ನಿರ್ದೇಶಕ ಮಂಡಳಿಯವರು ತಮಗೆ ಬೇಕಾದವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

    ನಿರ್ದೇಶಕ ಮಂಡಳಿ ವಜಾಗೊಳಿಸಿ ಹೊಸ ಮಂಡಳಿ ರಚನೆ ಮಾಡಬೇಕು. ನಮಗೆ ಮತದಾನದ ಹಕ್ಕು ಯಾಕೆ ನೀಡಿಲ್ಲ ಎಂಬ ಸೂಕ್ತ ಕಾರಣ ನೀಡಬೇಕು. ಇಲ್ಲದಿದ್ದರೆ ಚುನಾವಣೆ ನಡೆಯಲು ಬಿಡುವುದಿಲ್ಲ. ಸುಮಾರು 2 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದೇವೆ. ಆದರೆ, 500 ಜನರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದರ ಹಿಂದೆ ರಾಜಕೀಯ ದುರುದೇಶವಿದೆ ಎಂದು ಆರೋಪಿಸಿದರು.

    ಮತದಾನದಿಂದ ವಂಚಿತರಾದ ಷೇರುದಾರರಾದ ಶಿವಪ್ಪ ಕಂಪ್ಲಿ, ಶ್ರೀಶೈಲ್ ಮೋಟಗಿ, ಹನುಮಂತಪ್ಪ ರಾಠೋಡ, ಮಹಾಂತೇಶ ಅಗಸಿಮುಂದಿನ, ಚಂದಪ್ಪ ತಳವಾರ, ಆನಂದ ಮೆಹರವಾಡೆ, ಶರಣಪ್ಪ ಬಾಚಲಾಪೂರ, ಸೂಚಪ್ಪ ದೇವರಮನಿ ಇತರರು ಇದ್ದರು.

    ವಾರ್ಷಿಕ ಸಭೆಗೆ ಹಾಜರಾದವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದೇವೆಂದು ಹೇಳುತ್ತಾರೆ. ಆದರೆ, ನಾಲ್ಕು ವರ್ಷದಿಂದ ಒಂದು ಬಾರಿಯೂ ಸಭೆಗೆ ಹಾಜರಾಗಿಲ್ಲ. ಬ್ಯಾಂಕ್‌ನಲ್ಲಿ ಸ್ವಲ್ಪ ವ್ಯವಹಾರ ನಡೆಸಿದ್ದೇನೆ. ಆದರೂ ನನ್ನ ಹೆಸರು ಮತದಾರರ ಪಟ್ಟಿಯಲ್ಲಿರುವುದು ನನಗೆ ಆಶ್ಚರ್ಯವಾಗಿದೆ.
    | ಈಶಪ್ಪ ಹಡಪದ ಷೇರುದಾರ

    ಪಟ್ಟಣದಲ್ಲಿ ಬ್ಯಾಂಕ್ ಪ್ರಾರಂಭವಾದಾಗಿನಿಂದ ವ್ಯವಹಾರ ನಡೆಸಿದ್ದೇನೆ. ಪ್ರತಿ ಬಾರಿಯೂ ವಾರ್ಷಿಕ ಸಭೆಗೆ ಹಾಜರಾಗಿದ್ದೇನೆ. ಆದರೆ, ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಕಾರಣ ನೀಡುವವರೆಗೆ ಚುನಾವಣೆ ನಡೆಯಲು ಬಿಡುವುದಿಲ್ಲ.
    | ಭವಾನಿಸಾ ಪಾಟೀಲ್ ಷೇರುದಾರ

    ಚುನಾವಣೆ ಬಗ್ಗೆ ನವೆಂಬರ್‌ನಲ್ಲಿ ಅಧಿಸೂಚನೆ ಬಂದಿದೆ. ಆದರೆ, ಆಡಳಿತ ಮಂಡಳಿ ಮತ್ತು ಚುನಾವಣಾ ಆಯೋಗ ಜ. 4ರ ನಂತರ ಮತದಾರರ ಪಟ್ಟಿ ಬಿಡುಗಡೆ ಮಾಡುವಂತೆ ತಿಳಿಸಿದ್ದರಿಂದ ಷೇರುದಾರರಿಗೆ ತಿಳಿಸಿಲ್ಲ. ಮತದಾನದಿಂದ ವಂಚಿತರಾದ ಷೇರುದಾರರು ಮಾಡುತ್ತಿರುವ ಆರೋಪದ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು.
    | ರಾಘವೇಂದ್ರ ಜಮಖಂಡಿಕರ ಅರ್ಬನ್ ಕೋ- ಆಪರೇಟಿವ್ಹ್ ಬ್ಯಾಂಕ್ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts