More

    ದಿನಸಿ ಅಂಗಡಿ ತೆಗೆಯಲು ಅವಕಾಶ ಕೊಡಿ; ಹನುಮಸಾಗರದಲ್ಲಿ ವರ್ತಕರಿಂದ ಪಿಎಸ್‌ಐಗೆ ಮನವಿ


    ಹನುಮಸಾಗರ: ಒಂದು ವಾರದಲ್ಲಿ ಎರಡು ದಿನ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಪಟ್ಟಣದ ವರ್ತಕರು ಸೋಮವಾರ ಪಿಎಸ್‌ಐ ಅಶೋಕ ಬೇವೂರುಗೆ ಮನವಿ ಮಾಡಿದರು.

    ಪಟ್ಟಣದ ಹಳೆಯ ಪೊಲೀಸ್ ಠಾಣೆ ಆವರಣದಲ್ಲಿ ಸೇರಿದ್ದ ವರ್ತಕರು, ಕಳೆದ ಒಂದು ವಾರದಿಂದ ಅಂಗಡಿಗಳನ್ನು ಮುಚ್ಚಿದ್ದೇವೆ. ಅಗತ್ಯ ವಸ್ತುಗಳಿಗಾಗಿ ಜನರು ಮನೆ ಬಾಗಿಲಿಗೆ ಬರುತ್ತಿದ್ದಾರೆ. 15 ದಿನ ನಿರಂತರ ಅಂಗಡಿಗಳನ್ನು ಮುಚ್ಚಿದರೆ ವರ್ತಕರು ಹಾಗೂ ಜನರ ಜೀವನಕ್ಕೆ ತೊಂದರೆಯಾಗಲಿದೆ. ಪ್ರತಿ ವಾರ ಎರಡು ದಿನ ಇಂತಿಷ್ಟು ಸಮಯ ನಿಗದಿ ಮಾಡಿ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಕೋರಿದರು.

    ವರ್ತಕರ ಬೇಡಿಕೆ ಬಗ್ಗೆ ಪಿಎಸ್‌ಐ ಬೇವೂರು, ತಹಸೀಲ್ದಾರ್ ಎಂ.ಸಿದ್ದೇಶ ಜತೆ ದೂರವಾಣಿ ಮೂಲಕ ಚರ್ಚಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಗ್ರಾಹಕರ ಮನೆಗಳಿಗೆ ಹೋಗಿ ದಿನಸಿ ತಲುಪಿಸಬಹುದು ಎಂದು ತಿಳಿಸಿದರು. ಪ್ರೊಬೇಷನರಿ ಪಿಎಸ್‌ಐ ನಾಗರಾಜ, ಪಿಡಿಒ ನಿಂಗಪ್ಪ ಮೂಲಿಮನಿ ಹಾಗೂ ಸಿಬ್ಬಂದಿ ಇದ್ದರು.

    ನಿರಾಶೆಯಿಂದ ಹಿಂದಿರುಗಿದರು: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. ಸೋಮವಾರ ಅಂಗಡಿಗಳನ್ನು ತೆರೆಯಬಹುದು ಎಂಬುದು ಜನರ ನಿರೀಕ್ಷೆಯಾಗಿತ್ತು. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಸೋಮವಾರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಜನರು ಬರಿಗೈಯಲ್ಲಿ ನಿರಾಶರಾಗಿ ಊರುಗಳಿಗೆ ಹಿಂದಿರುಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts