More

    ಕಟ್ಟದಿಂದ ಸೀತಾನದಿ ಜಲ ಸಮೃದ್ಧಿ

    ಅನಂತ ನಾಯಕ್ ಕೊಕ್ಕರ್ಣೆ
    ಕಾರ್ಕಳ ತಾಲೂಕು ಚಾರ ಗ್ರಾಮದ ಹಂದಿಕಲ್ಲು ಸೀತಾನದಿಯು ಇತ್ತೀಚೆಗಿನ ದಿನಗಳಲ್ಲಿ ಬಿರುಬಿಸಿಲಿನ ಪ್ರಖರತೆಗೆ ನೀರಿಲ್ಲದೆ ಸೊರಗುತ್ತಿದೆ. ಪ್ರತಿ ವರ್ಷ ಕೂಡ ನೀರು ಬತ್ತುತ್ತಿದ್ದು ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ನೀರಿನ ಮಟ್ಟ ಕ್ಷೀಣಗೊಂಡಿದೆ. ಈ ನೆಲೆಯಲ್ಲಿ ಚಾರ ಗ್ರಾಮದ ಪ್ರಗತಿಪರ ಯುವರೈತರು ಸ್ವಯಂ ಪ್ರೇರಿತರಾಗಿ ನದಿಗೆ ಕಟ್ಟ ಕಟ್ಟಿ ಅಂತರ್ಜಲ ವೃದ್ಧಿಸುವುದರೊಂದಿಗೆ ತಮಗೆ ಬೇಕಾದ ಜೀವಜಲ ಪಡೆಯುತ್ತಿದ್ದಾರೆ.

    12ವರ್ಷದಿಂದ ಸಾಧನೆ: ಇಲ್ಲಿನ ಜನರಲ್ಲಿ ಹೆಚ್ಚಿನವರು ಕೃಷಿ ಮತ್ತು ಹೈನುಗಾರಿಕೆ ನೆಚ್ಚಿಕೊಂಡಿದ್ದಾರೆ. ಇವರಿಗೆ ನೀರಿನ ಉಪಯೋಗ ಅಧಿಕ. ತೋಟ, ತರಕಾರಿ ಕೃಷಿಗೆ ವರ್ಷದುದ್ದಕ್ಕೂ ನೀರು ಅವಶ್ಯ. ಆದ್ದರಿಂದ ಈ ಪರಿಸರದ ಜನರು ನೀರಿನ ಬವಣೆ ಇಂಗಿಸಲು 12 ವರ್ಷದಿಂದ ಜನರೆಲ್ಲ ಸೇರಿಕೊಂಡು ಸ್ಥಳೀಯರು ನೀರಿನ ಅಭಾವ ನೀಗಿಸಲು ಈ ಮಾರ್ಗವನ್ನು ಕಂಡುಕೊಂಡು ಯಶಸ್ವಿ ಆಗಿದ್ದಾರೆ.
    ಇದು ತಾತ್ಕಾಲಿಕ ಕಾರ್ಯವಾಗಿದ್ದು, ಇಲ್ಲೊಂದು ಶಾಶ್ವತ ಕಿಂಡಿಅಣೆಕಟ್ಟು ನಿರ್ಮಾಣಕ್ಕಾಗಿ ಜನರು ಬೇಡಿಕೆ ಇಟ್ಟಿದ್ದು, ಜನಪ್ರತಿನಿಧಿಗಳು, ಶಾಸಕರು, ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದ್ದು ಯಾವುದೇ ರೀತಿಯ ಕ್ರಮಗಳನ್ನು ಇಲ್ಲಿಯ ತನಕ ಕೈಗೊಂಡಿಲ್ಲ.

    2500ಕ್ಕೂ ಅಧಿಕ ಮರಳು ಚೀಲ ಬಳಕೆ: ಜನವರಿ ತಿಂಗಳಲ್ಲಿ ನೀರಿನ ಹರಿವು ಕಡಿಮೆಯಾಗುವುದನ್ನು ಗಮನಿಸಿ ಸ್ಥಳೀಯ ಸುಮಾರು 35 ಜನ ರೈತರು 2 ದಿನಗಳಲ್ಲಿ ಸುಮಾರು 2500ಕ್ಕೂ ಅಧಿಕ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ಸಂಗ್ರಹಿಸಿ, ನೀರಿನ ಹರಿವಿಗೆ ಅಡ್ಡಲಾಗಿ ಇಟ್ಟು ನೀರು ಸಂಗ್ರಹಿಸುತ್ತಾರೆ. ದೊಡ್ಡ ಗುಂಡಿಗಳಲ್ಲಿ ಸಂಗ್ರಹವಾಗಿ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಹೆಚ್ಚಿದ್ದು, ಹಲವು ರೈತರಿಗೆ ಅನುಕೂಲವಾಗಿದೆ. ಅಕ್ಕ ಪಕ್ಕದಲ್ಲಿರುವ ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ರೀತಿ ಸಂಗ್ರಹವಾದ ನೀರು ಸುಮಾರು 150 ಎಕರೆಗೂ ಅಧಿಕ ಕೃಷಿ ಭೂಮಿಗೆ ಬಳಕೆಯಾಗುತ್ತದೆ.

    ಚಾರ ಗ್ರಾಮದ ಹಂದಿಕಲ್ಲು ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಸುತ್ತಮುತ್ತಲಿನ ಗ್ರಾಮಗಳಾದ ನಾಲ್ಕೂರು, 38ನೇ ಕಳ್ತೂರು ಚಾರ ಮತ್ತಿತರರ ಗ್ರಾಮಗಳಿಗೆ ಪ್ರಯೋಜನವಾಗಲಿದೆ. ಈಗಾಗಲೇ ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಉಡುಪಿ ಅದಮಾರು ಶ್ರೀಗಳ ಮುಖಾಂತರ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಒಳಿತು.
    -ಸಾಧು ಶೆಟ್ಟಿ, ಚಾರಬಾವಿಗದ್ದೆ, ಹಿರಿಯ ಪ್ರಗತಿಪರ ರೈತ

    ವಿವೇಕಾನಂದಯುವ ವೇದಿಕೆ ಚಾರ ಹಂದಿಕಲ್ಲು, ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ, ಸ್ಥಳೀಯ ಉದ್ಯಮಿ ಸತೀಶ್ ಪೈ ಸಂತೆಕಟ್ಟೆ ಮತ್ತು ಸ್ಥಳೀಯ ರೈತರನ್ನು ಸೇರಿಸಿಕೊಂಡು ಸತತ 12 ವರ್ಷದಿಂದ ಮರಳು ಚೀಲಗಳ ಮೂಲಕ ನೀರನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಶಾಶ್ವತವಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದರೆ ಸ್ಥಳಿಯರ ಸಮಸ್ಯೆ ನೀಗುತ್ತದೆ. ಕಳೆದೆ ಬಾರಿ ಶಾಸಕರು 3 ಕೋಟಿ ರೂ.ಅನುದಾನದ ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕ ಕಿಂಡಿ ಅಣೆಕಟ್ಟು ರಚನೆಯ ಪ್ರಸ್ತಾವನೆ ಇಲ್ಲ.
    -ರವೀಂದ್ರನಾಥ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರು ವಿವೇಕಾನಂದ ಯುವವೇದಿಕೆ ಚಾರ ಹಂದಿಕಲ್ಲು

    ಬೇಸಿಗೆಯಲ್ಲಿ ಬೆಳೆಯುವ ಬೆಳೆಗಳಿಗೆ ನೀರಿನ ಅಗತ್ಯತೆ ಹೆಚ್ಚಿದ್ದು ಇಲ್ಲಿನ ರೈತರು ಮರಳಿನ ಕಿಂಡಿಅಣೆಕಟ್ಟು ನಿರ್ಮಿಸಿ ನೀರನ್ನು ಪಡೆಯುತ್ತಿದ್ದೇವೆ. ಉಡುಪಿ ಮಠಕ್ಕೆ ಪ್ರತಿನಿತ್ಯ ಬಾಳೆ ಎಲೆಯನ್ನು ಪೂರೈಸಲು ಬೆಳೆಸುತ್ತಿದ್ದೇವೆ. ಈ ಭಾಗಕ್ಕೆ ಅಗತ್ಯವಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಬೇಕಿದೆ.
    -ರಾಜೇಶ್ ಪೂಜಾರಿ, ಹಂದಿಕಲ್ಲು ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts