More

    ಇಬ್ಬರು ಹಾಲಿ, ಒಬ್ಬ ಮಾಜಿ ಶಾಸಕಗೆ ಕೈ ಟಿಕೆಟ್ – ಕೂಡ್ಲಿಗಿ, ಹರಪನಹಳ್ಳಿಯಲ್ಲಿ ಕಗ್ಗಂಟು ವಿಜಯನಗರದಲ್ಲಿ ಗವಿಯಪ್ಪಗೆ ಮಣೆ

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ರಾಜ್ಯ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಹೊರಬಿದ್ದಿದ್ದು, ಇನ್ನುಳಿದ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಉಳಿದಿದೆ.

    ನಿರೀಕ್ಷೆಯಂತೆ ಜಿಲ್ಲೆಯ ಹಗಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ಕ್ಷೇತ್ರದ ಹಾಲಿ ಶಾಸಕರಾದ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಕಾಂಗ್ರೆಸ್ ಹುರಿಯಾಳುಗಳನ್ನಾಗಿ ಘೋಷಿಸಲಾಗಿದೆ. ಉಭಯ ಕ್ಷೇತ್ರಗಳಲ್ಲಿ ಒಂದನ್ನು ಪರಿಶಿಷ್ಟ ಜಾತಿಗೆ ಬಿಟ್ಟುಕೊಡಬೇಕು ಎಂಬ ಪಕ್ಷದ ಆಂತರಿಕ ಬೇಡಿಕೆಗೆ ಹಿನ್ನಡೆಯಾಗಿದೆ.
    ವಿಜಯನಗರದಲ್ಲಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪಗೆ ಮತ್ತೊಮ್ಮೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕಿದೆ. ಶನಿವಾರ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಬೆರಳೆಣಿಕೆಯಷ್ಟು ಮಾಜಿ ಶಾಸಕರು ಮತ್ತು ಚುನಾವಣಾ ಸ್ಪರ್ಧೆಯಿಂದ ದೂರ ಉಳಿದವರ ಪೈಕಿ ಎಚ್.ಆರ್.ಗವಿಯಪ್ಪ ಕೂಡ ಒಬ್ಬರು ಎಂಬುದು ಗಮನಾರ್ಹ.

    ಇಬ್ಬರು ಹಾಲಿ, ಒಬ್ಬ ಮಾಜಿ ಶಾಸಕಗೆ ಕೈ ಟಿಕೆಟ್ - ಕೂಡ್ಲಿಗಿ, ಹರಪನಹಳ್ಳಿಯಲ್ಲಿ ಕಗ್ಗಂಟು ವಿಜಯನಗರದಲ್ಲಿ ಗವಿಯಪ್ಪಗೆ ಮಣೆ
    ಪಿ.ಟಿ.ಪರಮೇಶ್ವರ ನಾಯ್ಕ

    2004ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಗೆಲುವು ದಾಖಲಿಸಿದ್ದ ಎಚ್.ಆರ್.ಗವಿಯಪ್ಪ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಆನಂದ ಸಿಂಗ್ ಎದುರು ಮುಗ್ಗರಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಬದಲಾದ ರಾಜಕೀಯ ಸನ್ನಿವೇಶನದಲ್ಲಿ 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳದಿದ್ದ ಗವಿಯಪ್ಪ, ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿಂಗ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಸಿಂಗ್ ವಿರುದ್ಧ ಕೇವಲ 8,228 ಮತಗಳ ಅಂತರದಿಂದ ಪರಾಭಾವಗೊಂಡಿದ್ದರು. ಆನಂತರ 2019ರಲ್ಲಿ ಆನಂದ ಸಿಂಗ್ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯಿಂದ ಉಪ ಚುನಾವಣೆ ಎದುರಿಸಿದಾಗ ಗವಿಯಪ್ಪ ಬಿಜೆಪಿಯಲ್ಲೇ ತಟಸ್ಥರಾಗಿ ಉಳಿದಿದ್ದು ಈಗ ಇತಿಹಾಸ. ಕ್ಷೇತ್ರದಲ್ಲಿ ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಎಫ್. ಇಮಾಮ್ ನಿಯಾಜಿ, ಮಹಮ್ಮದ್ ಮತ್ತಿತರರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

    ಇಬ್ಬರು ಹಾಲಿ, ಒಬ್ಬ ಮಾಜಿ ಶಾಸಕಗೆ ಕೈ ಟಿಕೆಟ್ - ಕೂಡ್ಲಿಗಿ, ಹರಪನಹಳ್ಳಿಯಲ್ಲಿ ಕಗ್ಗಂಟು ವಿಜಯನಗರದಲ್ಲಿ ಗವಿಯಪ್ಪಗೆ ಮಣೆ
    ಭೀಮಾ ನಾಯ್ಕ

    ಜಿಲ್ಲೆಯ ಎಚ್.ಬಿ. ಹಳ್ಳಿ ಮತ್ತು ಹಡಗಲಿ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕರ ವಿರುದ್ಧ ಸ್ವಪಕ್ಷೀಯರೇ ಧ್ವನಿ ಎತ್ತಿದ್ದರಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಎಚ್.ಬಿ.ಹಳ್ಳಿಯಲ್ಲಿ ಸಾಮಾಜಿಕ ನ್ಯಾಯದಡಿ ಪರಿಶಿಷ್ಟ ಜಾತಿ ಅಸ್ಪಶ್ಯರಿಗೆ ಅವಕಾಶ ನೀಡಬೇಕೆಂಬ ಕೂಗು ಜೋರಾಗಿತ್ತು. ಹಡಗಲಿಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸಿ ಹಿರಿಯ ನಾಯಕ ಕೆ.ಸಿ.ಕೊಂಡಯ್ಯ ಸೇರಿ ಸ್ಥಳೀಯ ನಾಯಕರು ಬಹಿರಂಗ ಹೇಳಿಕೆ ನೀಡುವ ಜತೆಗೆ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಈ ಬಾರಿ ಶಾಸಕರನ್ನು ಜನರೇ ಸೋಲಿಸುತ್ತಾರೆಂಬ ಸ್ಥಳೀಯ ನಾಯಕರ ಎಚ್ಚರಿಕೆ ನಡುವೆಯೂ ಹಾಲಿ ಶಾಸಕರನ್ನು ಮತ್ತೊಮ್ಮೆ ಕಣಕ್ಕಿಳಿಸಲು ನಿರ್ಧರಿಸಿದ್ದು ವಿಶೇಷ.
    ಹರಪನಹಳ್ಳಿ ಮತ್ತು ಕೂಡ್ಲಿಗಿಗೆ ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್ ಟಿಕೆಟ್‌ಗಾಗಿ ವಿಜಯಪುರದಿಂದ 25 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಅತೀ ಹೆಚ್ಚು ಎನಿಸಿದರೆ, 17 ಅರ್ಜಿ ಸಲ್ಲಿಕೆಯಾಗಿರುವ ಹರಪನಹಳ್ಳಿಗೆ ಎರಡನೇ ಸ್ಥಾನ ಲಭಿಸಿದೆ. ಹರಪನಹಳ್ಳಿ ಸಾಮಾನ್ಯ ಕ್ಷೇತ್ರವಾಗಿದ್ದು, ಲಿಂಗಾಯತ ಸಮುದಾಯದ ಪಂಚಮಸಾಲಿ, ಸದು, ಕುರುಬ ಸಮುದಾಯದ ಆಕಾಂಕ್ಷಿಗಳನ್ನು ಅಳೆದು ತೂಗಿ ನಿರ್ಣಯಿಸಲಾಗುತ್ತಿದೆ. ಅದರಂತೆ ಕೂಡ್ಲಿಗಿಯಲ್ಲಿ ನಾಲ್ಕಾರು ಜನರು ಅರ್ಜಿ ಸಲ್ಲಿಸಿದ್ದರೂ, ಎಸ್ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಬಿಜೆಪಿ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವ ಸಾಧ್ಯತೆಯಿರುವುದರಿಂದ ಕಾದು ನಡುವ ತಂತ್ರ ಅನುಸರಿಸುತ್ತಿದೆ.

    ಈ ಬಾರಿ ಶತಾಯಗತಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಣಯಿಸಿದ್ದರಿಂದ ಚುನಾವಣಾ ಘೋಷಣೆಗೂ ಮುನ್ನವೇ ಅರ್ಧದಷ್ಟು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
    ಬಿ.ವಿ.ಶಿವಯೋಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರು ನನ್ನ ವೈರಿಯಲ್ಲ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿಯೇ ಸ್ವೀಕರಿಸುವೆ. ಸ್ಥಳೀಯ ಶಾಸಕ ಹಾಗೂ ಸರ್ಕಾರದ ವಿರೋಧಿ ಅಲೆ ಇರುವುದು ಕಾಂಗ್ರೆಸ್ ಗೆಲುವಿಗೆ ಮತ್ತಷ್ಟು ಅನುಕೂಲ.
    ಎಚ್.ಆರ್.ಗವಿಯಪ್ಪ, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts