More

    ಗರ್ಭಕೋಶ ಶಸ್ತ್ರಚಿಕಿತ್ಸೆ ಪ್ರಕರಣ ಸಿಬಿಐಗೆ ವಹಿಸಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ಇಲ್ಲಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 2016ರಲ್ಲಿ ನಡೆದ ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಮಾಸಾಶನ ನೀಡಬೇಕು ಎಂದು ಬಂಜಾರ ಸೇವಾಲಾಲ ಪೀಠದ ಸರ್ದಾರ್ ಸೇವಾಲಾಲ ಸ್ವಾಮೀಜಿ ಒತ್ತಾಯಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಅಂದಿನ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಪಿ. ಶಾಂತ ಅವರು ಬಂಜಾರ ಸಮುದಾಯ ಸೇರಿ 1500ಕ್ಕೂ ಅಧಿಕ ಮಹಿಳೆಯರಿಗೆ ವಿನಾಕಾರಣ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ. ಅಂದು ನೆಪಮಾತ್ರಕ್ಕೆ ಆತನನ್ನು ಅಮಾನತು ಮಾಡಿದ್ದಾರೆ. ಆದರೀಗ ಅದೇ ವೈದ್ಯ ಬೇರೆ ಜಿಲ್ಲೆಯ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಂದ ಅನ್ಯಾಯಕ್ಕೆ ಒಳಗಾದ ಮಹಿಳೆಯರು ಕೆಲಸ ಮಾಡಲಾಗದೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ.

    ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್, ನೊಂದ ಮಹಿಳೆಯರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಮಹಿಳೆಯರಿಗೆ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.

    ಆದ್ದರಿಂದ ಮುಂದಿನ ಹೋರಾಟದ ರೂಪರೇಷಿ ಸಿದ್ಧಪಡಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಹಿಳೆಯರಿಗೆ ಪರಿಹಾರ ನೀಡಲು ಒತ್ತಾಯಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ದೃಷ್ಟಿಯಿಂದ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸಲಾಗುವುದು. ಇದಕ್ಕೆ ಸರ್ಕಾರ ಒಪ್ಪದಿದ್ದರೆ, ಮುಂದಿನ ದಿನದಲ್ಲಿ ಬಂಜಾರ ಸಮುದಾಯದ ವಿವಿಧ ಸಂಘಟನೆಗಳೊಂದಿಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಬಂಜಾರ ಸಮಾಜದ ಅಧ್ಯಕ್ಷ ಜಯಣ್ಣ ಮಾಳಾಪುರ, ಪ್ರಮುಖರಾದ ಚಂದ್ರಪ್ಪ ಕಾಳಪ್ಪನವರ, ಕೃಷ್ಣಮೂರ್ತಿ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

    ನಳೀನ್​ಕುಮಾರ ಹೇಳಿಕೆ ವಾಪಸ್ ಪಡೆಯಲಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ ಕಟೀಲು ಅವರು ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಉತ್ಸುಹಕವಾಗಿದ್ದೇವೆ ಎಂದು ಹೇಳಿಕೆ ನೀಡುವ ಮೂಲಕ ಬಂಜಾರ ಸಮುದಾಯ ಬೇಡಿಕೆಯನ್ನು ಕಡೆಗಣಿಸಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಯಿಂದ ಬಂಜಾರ ಸಮುದಾಯವರಿಗೆ ತೀವ್ರ ಹೊಡೆತ ಬೀಳಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ವಿಚಾರವನ್ನು ಕೈ ಬಿಡಬೇಕು. ಜತೆಗೆ ನಳೀನ್​ಕುಮಾರ ನೀಡಿದ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸೇವಾಲಾಲ ಸ್ವಾಮೀಜಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts