More

    ವ್ಯಕ್ತಿತ್ವ ವೈಶಿಷ್ಟ್ಯವನ್ನು ಹರಿತ ಮಾಡಿಕೊಳ್ಳುತ್ತಿರಬೇಕು!

    ವ್ಯಕ್ತಿತ್ವ ವೈಶಿಷ್ಟ್ಯವನ್ನು ಹರಿತ ಮಾಡಿಕೊಳ್ಳುತ್ತಿರಬೇಕು!ಎಲ್ಲರಿಗೂ ಅವಕಾಶ ಸಿಕ್ಕಿಯೇ ಸಿಗುತ್ತೆ. ಅದೃಷ್ಟ-ದುರದೃಷ್ಟ ಹಂಚಿಕೊಂಡು ಬರುತ್ತೆ. ದುರದೃಷ್ಟ ಬಂದಾಗ ನಾವು ಸಿಕ್ಕಾಪಟ್ಟೆ ಪ್ರಯತ್ನ ಮಾಡಿ ಅದೃಷ್ಟ ಬಂದಾಗ ರಿಲ್ಯಾಕ್ಸ್ ಆದರೆ ಹೇಗಿರುತ್ತೆ? ಅಂದ್ರೆ ರಾತ್ರಿ ಹೊತ್ತಲ್ಲಿ ಯಾವುದೋ ಸಣ್ಣ ವಸ್ತುವನ್ನು ಕಳಕೊಳ್ತೀರಾ. ಅದನ್ನು ಕತ್ತಲಲ್ಲಿ ಹುಡುಕ್ತಾ ಹುಡುಕ್ತಾ ಬೆಳಕು ಬರೋ ಹೊತ್ತಿಗೆ ನಿದ್ರೆ ಬಂದಿರುತ್ತೆ. ಪುನಃ ಎಚ್ಚರವಾದಾಗ ರಾತ್ರಿಯಾಗಿರುತ್ತೆ. ಪುನಃ ನಿಮ್ಮ ಹುಡುಕಾಟ ಕತ್ತಲಲ್ಲೇ. ಅದೇ ಪ್ರಯತ್ನವನ್ನು ರಾತ್ರಿ ಹಗಲೂ ಬಿಡದೇ ಮಾಡ್ತಾ ಇದ್ದಿದ್ರೆ ರಾತ್ರಿ ಕೈಗೂಡದೇ ಇದ್ರೂ ಹಗಲಲ್ಲಿ ಕೈಗೂಡುತ್ತಿತ್ತು. ಬಹಳ ಸಲ ಕೆಲಸ ಕೈಗೂಡದಿದ್ದಾಗ ನಿರಾಶರಾಗಿ ಯಾರ್ಯಾರಿಂದಲೋ ತಾಯಿತಾನೋ, ತಂತ್ರಾನೋ ಮಾಡಿಸ್ತೀರ, ವಾಸ್ತು ಸರಿ ಇಲ್ಲ ಅಂತ ಇರೋ ಮನೆ ಕೆಡವಿ ಬೇರೆ ಕಟ್ಟೋಕೆ ಹಣವನ್ನು ಸುರೀತೀರ. ಇಷ್ಟೊತ್ತಿಗೆ ನಿಮ್ಮ ಮರುಪ್ರಯತ್ನದಿಂದ ನೀವು ಗೆಲ್ಲಬಹುದು.

    ಉದಾಹರಣೆಗೆ, ಪ್ರಾಬಬಿಲಿಟಿ ಅಥವಾ ಸಂಭವನೀಯತೆ ಅನ್ನೋ ಬಗ್ಗೆ ನಿಮಗೆ ಗೊತ್ತಿರಬಹುದು. ನಾಣ್ಯವನ್ನು ಹತ್ತು ಸರ್ತಿ ಮೇಲಕ್ಕೆಸೆದ್ರೆ ಹೆಡ್ ಅಥವಾ ಟೇಲ್ ಬರೋ ಸಾಧ್ಯತೆ 50-50 ಇರಬಹುದು ಅಥವಾ 60-40 ಇರಬಹುದೇ ಹೊರತು ಹತ್ತಕ್ಕೆ ಹತ್ತೂ ಸಲ ಹೆಡ್ ಒಂದೇ ಬೀಳಲು ಸಾಧ್ಯ ಇಲ್ಲ. ಇದೇ ನಿಯಮ ಜೀವನದಲ್ಲೂ ಅಳವಡಿಕೆಯಾಗೋದು. ಮೂರು ಜನ ಜೂಜಾಡುವಾಗ ಗೆದ್ದವನಿಗೆ 100 ರೂಪಾಯಿಗೆ 200 ರೂಪಾಯಿ ಕೊಡುವುದಾದರೆ, ಜೂಜು ಆಡಿಸುವವನಿಗೆ ಪ್ರತಿ ಸಲ 100 ರೂಪಾಯಿ ಸಿಗುತ್ತೆ. ಅಂದ್ರೆ ದುಡ್ಡು ಮಾಡಲು ಸುಲಭ ವಿಧಾನ ಜೂಜು ಆಡಿಸುವುದೇ ಹೊರತು ಜೂಜಾಡುವುದಲ್ಲ. ಹಾಗಂತ ಜೂಜು ಕೇಂದ್ರ ಪ್ರಾರಂಭಿಸಿ ಹಣ ಗಳಿಸಿರೆಂಬ ಅಪ್ರಾಮಾಣಿಕ ಸಲಹೆಯನ್ನು ಖಂಡಿತವಾಗಿಯೂ ಕೊಡ್ತಿಲ್ಲ. ಜೂಜು ಆಡಿ ಅದೃಷ್ಟ ನಂಬಿ ಹಣ ಮಾಡಲು ಸಾಧ್ಯವಿಲ್ಲ ಅನ್ನಲು ಉದಾಹರಣೆ ಕೊಟ್ಟೆನಷ್ಟೆ.

    ಅಮೆರಿಕದಲ್ಲಿ ಮ್ಯಾಜಿಕ್ ಪ್ರದರ್ಶನ ಕೊಡುತ್ತ ನಾನು ಮತ್ತು ನನ್ನ ಗೆಳೆಯ ಕಿಣಿ ಪ್ರಪಂಚದ ಬಹುದೊಡ್ಡ ಜೂಜು ಕೇಂದ್ರವಾದ ಲಾಸ್ ವೇಗಾಸ್​ಗೆ ತಲುಪಿದ್ದೆವು. ಕಿಣಿಗೆ ಜೂಜಿನ ಹುಚ್ಚು. ಆಡ್ತಾ ಆಡ್ತಾ ಸಾಕಷ್ಟು ದುಡ್ಡು ಗಳಿಸಿದ. ತಾನು ಗಳಿಸಿದ ದುಡ್ಡಿನ ಪೆಟ್ಟಿಗೆಯನ್ನು ನನ್ನೆದುರಿಗೆ ಹಿಡಿದು ಝುಲ್ ಝುಲ್ ಎಂದು ಶಬ್ದ ಮಾಡುತ್ತ ಅಣಕಿಸುತ್ತಿದ್ದ. ಹೀಗೇ ಆಟ ಆಡ್ತಾ ಆಡ್ತಾ ಬಂದ ದುಡ್ಡು ಬಂದ ಹಾಗೇನೇ ಹೊರಟುಹೋಯ್ತು. ನಾನು ಬೇಡ ಅಂದ್ರೂ ತನ್ನಲ್ಲಿದ್ದ ಹಣವನ್ನೆಲ್ಲ ಸುರಿದು ಲಾಸ್ ಆದ. ವಾಪಸು ಬರುವಾಗ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯವಿತ್ತು. ಕೊನೆಯ ಪ್ರಯತ್ನವೆಂದು ಹೋದ ಹಣವನ್ನೆಲ್ಲ ಮತ್ತೆ ಪಡೆಯುತ್ತೇನೆಂದು ನನ್ನಿಂದ ಸಾವಿರ ಡಾಲರ್ ಪಡೆದು ಅಲ್ಲಿಯೇ ಇದ್ದ ಜೂಜು ಯಂತ್ರದಲ್ಲಿ ಅದನ್ನೂ ಕಳ್ಕೊಂಡ. ಇದರ ಗುಟ್ಟು ಏನಂದ್ರೆ- ಜೂಜಾಡುವ ಯಂತ್ರಗಳು ತಮ್ಮಿಚ್ಛೆಯಂತೆ ವರ್ತಿಸುವ ಹಾಗೆ, ಅದರ ಮಾಲೀಕರು ಅಳವಡಿಸಿಕೊಂಡಿರ್ತಾರೆ. ಇದರಿಂದ ಜೂಜು ಆಡಲು ಹೋದವರಿಗೆ ಆಗುವುದು ನಷ್ಟವೇ ಹೊರತು ಲಾಭ ಅಲ್ಲ. ಇದನ್ನು ತಮ್ಮ ದುರದೃಷ್ಟವೆಂದು ಅಂದುಕೊಳ್ಳುತ್ತಾರೆ. ಜೂಜು ಮೊದಲು ಜನರನ್ನು ಆಕರ್ಷಿಸುತ್ತದೆ, ಬಲೆಗೆ ಬಿದ್ದರೋ ನಂತರ ಅವರನ್ನೇ ಆಟ ಆಡಿಸುತ್ತದೆ.

    ಒಬ್ಬ ಇಸ್ಪೀಟ್ ಆಟಕ್ಕೆ ಸಂಪೂರ್ಣ ದಾಸನಾಗಿದ್ದ. ಮೂರು ಹೊತ್ತೂ ಕ್ಲಬ್​ನಲ್ಲೇ ಕಾಲ ಕಳೆಯುತ್ತಿದ್ದ. ಒಮ್ಮೆ ಆತನ ಮಗ ಬಂದು, ‘ಅಮ್ಮನಿಗೆ ಸೀರಿಯಸ್, ಕೂಡಲೇ ಮನೆಗೆ ಬನ್ನಿ’ ಎಂದು ಕರೆದ. ‘ಆಸ್ಪತ್ರೆಗೆ ಸೇರಿಸು, ತಕ್ಷಣ ಬರುತ್ತೇನೆ’ ಎಂದ ಅಪ್ಪ, ಆದರೆ ಬರುವುದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಮ್ಮ ಮೃತಪಟ್ಟಳು. ಮಗ ಕ್ಲಬ್ಬಿಗೆ ಬಂದು ವಿಷಯ ಹೇಳಿದ. ಅದಕ್ಕೆ ಅಪ್ಪ-‘ಶವವನ್ನು ಸ್ಮಶಾನಕ್ಕೆ ಸಾಗಿಸುವ ಏರ್ಪಾಟು ಮಾಡು, ಈಗಲೇ ಬರುತ್ತೇನೆ’ ಎಂದ. ಮಗ ಸ್ಮಶಾನಕ್ಕೆ ಶವವನ್ನು ಸಾಗಿಸಿ ಚಿತೆಯ ಏರ್ಪಾಟನ್ನು ಮಾಡಿ ಅಪ್ಪನನ್ನು ಕರೆಯಲು ಪುನಃ ಬಂದ. ಆಗ ಅಪ್ಪ- ‘ಹೇಗಿದ್ದರೂ ಚಿತೆ ಸಿದ್ಧವಾಗಿದೆಯಲ್ಲ, ಬೆಂಕಿ ಇಡು’ ಎಂದು ಹೇಳಿ ಇಸ್ಪೀಟಿನಲ್ಲಿ ಮೈಮರೆತ.

    ಬ್ಯಾಂಕಾಕ್​ನಲ್ಲಿ ಹವ್ಯಾಸಿ ವಿಡಿಯೋಗ್ರಾಫರ್ ಒಬ್ಬ ಸಮುದ್ರದ ಬದಿಯಲ್ಲಿ ನಿಂತು ಶೂಟ್ ಮಾಡ್ತಿದ್ದ. ಆಗ ಅಬ್ಬರದ ಅಲೆಯೊಂದು ಬಂದು ಕ್ಯಾಮರಾ ಹೊರತಾಗಿ ಮಿಕ್ಕೆಲ್ಲವನ್ನೂ ಕೊಚ್ಚಿಕೊಂಡು ಹೋಯ್ತು. ಆತ ಶೂಟ್ ಮಾಡಿದುದನ್ನು ಬಿಬಿಸಿಯವರು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡಿದ್ರು. ‘ಓ ಎಂಥ ಅದೃಷ್ಟ’ ಎಂದು ಹುಬ್ಬೇರಿಸ್ಬೇಡಿ. ಒಂದು ವೇಳೆ ಅಲೆಯು ಆತನನ್ನೇ ಕೊಚ್ಚಿಕೊಂಡು ಹೋಗಿದ್ದಿದ್ದರೆ? ಅದೃಷ್ಟ ಮತ್ತು ದುರದೃಷ್ಟದ ನಡುವೆ ಇರುವುದು ಸಣ್ಣ ಎಳೆಯ ವ್ಯತ್ಯಾಸ ಅಷ್ಟೇ, ಏನಂತೀರಿ?

    ಇರಲಿ, ಮತ್ತೆ ಮುಖ್ಯ ವಿಷಯಕ್ಕೆ ಬರೋಣ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ನಾನು ‘ಭೂಲೋಕದಲ್ಲಿ ಯಮರಾಜ’ ಚಿತ್ರದಲ್ಲಿನ ಪಾತ್ರವೊಂದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗುವ ಪ್ರಯತ್ನದಲ್ಲಿ ದಿನಪತ್ರಿಕೆಯೊಂದರ ಕಚೇರಿಗೆ ಹೋಗಿದ್ದೆ. ಪ್ರಾಸಂಗಿಕವಾಗಿ, ಕೇವಲ ಅಲ್ಲಿನವರ ಮನರಂಜಿಸುವ ಉದ್ದೇಶದಿಂದ ಒಂದೆರಡು ಮ್ಯಾಜಿಕ್ ಮಾಡಿ ತೋರಿಸಿದೆ. ಒಂದೇ ವಾರದಲ್ಲಿ ನನ್ನ ಜಾದೂ ಬಗ್ಗೆ ಪ್ರತ್ಯೇಕವಾಗಿ ಒಂದು ಪುಟದ ಬರವಣಿಗೆಯಿತ್ತು! ಇದರಿಂದಾಗಿ ಡಾ.ವಿಜಯಾ, ಸಿ.ಸೀತಾರಾಮ್ ಮುಂತಾದ ಪತ್ರಕರ್ತರೆಲ್ಲ ನನ್ನ ಬಗ್ಗೆ ಸಾಕಷ್ಟು ಪ್ರಚಾರ ನೀಡಿದರು. ಕೆಲವೇ ದಿನಗಳಲ್ಲಿ ನನ್ನ ಮಾತಾಡುವ ಗೊಂಬೆ ಕರ್ನಾಟಕದಾದ್ಯಂತ ಮನೆ ಮಾತಾಯ್ತು. ಸಾಕಷ್ಟು ಹಣ ಮಾಡಿದೆ. ಬೆಂಗಳೂರಿನಲ್ಲಿ 6 ತಿಂಗಳ ಕಾಲ ಸತತವಾಗಿ ಪ್ರದರ್ಶನ ಕೊಟ್ಟೆ. ದಿನಪತ್ರಿಕೆ ಕಚೇರಿಗೆ ಹೋಗಿದ್ದು ಚಿತ್ರನಟನಾಗಲು ಬೇಕಾದ ಪ್ರಚಾರ ಪಡೆಯಲು, ಸಿಕ್ಕಿದ್ದು ಜಾದೂಗಾರನಾಗಲು ಬೇಕಾದ ಪ್ರಚಾರ. ಇದರಿಂದಾಗಿ ಹೀರೋ ಆಗುವ ಆಸೆ ಬಿಟ್ಟೆ. ಹೀರೋ ಆಗದೇ ಇದ್ದದ್ದು ನನ್ನ ಅದೃಷ್ಟವೋ? ಇಲ್ಲ ದುರದೃಷ್ಟವೋ? ಅದು ಒಂದು ನಿಮಿತ್ತ. ಎಲ್ಲವೂ ಪೂರ್ವನಿರ್ಧರಿತ. ಯಾರು ಏನು ಆಗಬೇಕೆಂದಿದೆಯೋ ಅದೇ ಆಗೋದು. ಅದೃಷ್ಟ ಅನ್ನೋದೇ ಇಲ್ಲ; ಎಲ್ಲ ಕಾರ್ಯಕಾರಣ ಸಂಬಂಧ. ನಂಬಲಸಾಧ್ಯ, ಎಲ್ಲ ಬರಿ ಓಳು ಎನ್ನುವಿರಾ?

    ಮುಂದಾದ ವಿಚಿತ್ರ ಘಟನೆಯೊಂದನ್ನು ಕೇಳಿ. ಯಕ್ಷಿಣಿಯಾಯ್ತು, ಮಾತಾಡುವ ಗೊಂಬೆಯಾಯ್ತು, ಶ್ಯಾಡೋ ಪ್ಲೇ ಆಯ್ತು, ಏತನ್ಮಧ್ಯೆ ಫೋಟೋಗ್ರಫಿಯಲ್ಲೂ ಪ್ರಾವೀಣ್ಯ ಗಳಿಸಿ ‘ಶ್ರೇಷ್ಠ ಮುಖಭಾವ ಛಾಯಾಗ್ರಾಹಕ’ ಅನ್ನಿಸ್ಕೊಂಡೆ, ಆಮೇಲೇನಾಯ್ತೋ ಏನೋ, ಜೀವನದಲ್ಲೊಂದು ರೀತಿಯ ಜಿಗುಪ್ಸೆ ಮೂಡಿತು. ಎಲ್ಲ ಮುಗಿಯಿತಲ್ಲಾ ಇನ್ನೇನು ಮಾಡೋದಿದೆ ಅಂತ ಅನ್ನಿಸೋಕೆ ಶುರುವಾಯ್ತು. ಗಡ್ಡ ಬೋಳಿಸೋದಕ್ಕೂ ಮನಸ್ಸಾಗ್ತಿರ್ಲಿಲ್ಲ. ಅಂಥ ಸ್ಥಿತೀಲಿ ನನ್ನ ಪತ್ರಿಕಾ ಸ್ನೇಹಿತ ಸೀತಾರಾಮ್ ಮನೆಗೆ ಹೋಗಿದ್ದೆ. ಅವರು ನನ್ನ ಅವಸ್ಥೆಯನ್ನು ನೋಡಿ ಬೇಸರದಿಂದ- ‘ನಾನು ನಿಮ್ಮಿಂದ ಜೀವನದಲ್ಲಿ ಬಹಳಷ್ಟನ್ನು ನಿರೀಕ್ಷಿಸಿದ್ದೆ, ಆದರೆ ನೀವೇನೋ ಆಗಿಬಿಟ್ಟಿದ್ದೀರಿ’ ಎಂದರು. ಅಷ್ಟೇ ಸಾಕಾಯಿತು ನನ್ನ ಆತ್ಮಾಭಿಮಾನ ಕೆರಳಲು. ಅಲ್ಲಿಂದ ದಾಪುಗಾಲು ಹಾಕುತ್ತ ನಡೆದೆ. ಅಂದು, ಒಂದು ತಳ್ಳುಮಾಡಲ್ ಕಾರಿನಲ್ಲಿ ಹೋಗಿದ್ದ ನಾನು ಏಳೆಂಟು ವರ್ಷಗಳ ನಂತರ ಅವರಿಗೆ ಧನ್ಯವಾದವನ್ನು ಅರ್ಪಿಸಲು ಅವರ ಮನೆಗೆ ಕಾಲಿಟ್ಟಿದ್ದು ಅಮೆರಿಕ, ಯುರೋಪ್ ಮುಂತಾದ 27 ದೇಶಗಳಿಗೆ ಯಕ್ಷಿಣಿ ಸಾಮಗ್ರಿಗಳ ರಫ್ತು ತಯಾರಕನಾಗಿ! ಅದೂ ಅಂದಿನ ಪ್ರಸಿದ್ಧ, ಅದ್ದೂರಿ ಮಿತ್ಸುಬಿಷಿ ಲ್ಯಾನ್ಸರ್ ಕಾರಿನಲ್ಲಿ.

    ಇದ್ಯಾವುದನ್ನೂ ನನ್ನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಹೇಳುತ್ತಿಲ್ಲ. ಪ್ರತಿಯೊಬ್ಬರಲ್ಲೂ ಒಂದು ವ್ಯಕ್ತಿತ್ವ ವೈಶಿಷ್ಟ್ಯವಿದ್ದೇ ಇರುತ್ತೆ; ಸದಾ ಅದನ್ನು ಹರಿತ ಮಾಡಿಕೊಳ್ಳುತ್ತಿರಬೇಕು. ಒಂದಲ್ಲ ಒಂದು ದಿನ ಅದನ್ನು ಪ್ರಯೋಗಿಸುವ ಕಾಲ ಬಂದೇ ಬರುತ್ತೆ. ಆವಾಗ ಮಾತ್ರ ಆಲಸ್ಯ ಮಾಡದೆ ಕಾರ್ಯಪ್ರವೃತ್ತರಾಗಿ. ಅದೃಷ್ಟದ ಮೇಲೆ ನಂಬಿಕೆ ಇಡಬೇಕಾದರೆ ನಿಮ್ಮಲ್ಲೇ ತಪ್ಪಿದೆಯೆಂದು ಅರ್ಥ. ನಾನು ಯಾವ ಕಾರಣಕ್ಕೂ ಜಾತಕ ನೋಡಿಲ್ಲ, ಮುಡುಪು ಕಟ್ಟಿಲ್ಲ, ಹರಕೆ ಹೊತ್ತಿಲ್ಲ, ವಾಸ್ತು ನೋಡಿಲ್ಲ, ಆದರೆ ಬಿಡಿಗಾಸು ಇಲ್ಲದೆ ಜೀವನವನ್ನು ಆರಂಭಿಸಿ ಬದುಕಿನ ಹೋರಾಟದಲ್ಲಿ ಗೆದ್ದಿದ್ದೇನೆ- ನೀವೂ ಯಾಕೆ ನನ್ನಂತೆಯೇ ಬಗೆಬಗೆಯ ಪ್ರಯೋಗ ಮಾಡಿ ನೋಡಬಾರ್ದು? ಆಲ್ ದ ಬೆಸ್ಟ್!

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts