More

    ಹಣ ಝಣ- ಉದಯ್ ಜಾದೂಗಾರ್ ಅಂಕಣ| ಆಸೆ ಬದುಕೋಕೆ ಕಾರಣ, ದುರಾಸೆ ವಿನಾಶಕ್ಕೆ ನಾಂದಿ…

    ಹಣ ಝಣ- ಉದಯ್ ಜಾದೂಗಾರ್ ಅಂಕಣ| ಆಸೆ ಬದುಕೋಕೆ ಕಾರಣ, ದುರಾಸೆ ವಿನಾಶಕ್ಕೆ ನಾಂದಿ...ಆರೋಗ್ಯ, ಕೀರ್ತಿ, ನೆಮ್ಮದಿ, ಹಣವನ್ನು ‘ನ್ಯಾಯವಾಗಿ’ ಗಳಿಸುವುದು ಹೇಗೆ ಅನ್ನೊದನ್ನ ಹೇಳಿಕೊಡುವುದು ನನ್ನ ಉದ್ದೇಶ. ಒಮ್ಮೆ ಹಣ ಗಳಿಸಲು ಆರಂಭಿಸಿದಿರೋ ಸಾಕಷ್ಟು ಗಳಿಸಿದ ನಂತರ ಅದನ್ನು ‘ಸಾಕು’ ಎಂದು ನಿಲ್ಲಿಸಬೇಕು ಎಂಬುದು ನೆನಪಿರಲಿ. ಹಣ ಕೆಲವರಿಗೆ ಅನಿವಾರ್ಯತೆಯಾದರೆ, ಕೆಲವರಿಗೆ ಗೌರವದ ಪ್ರತೀಕ. ಅದು ತನ್ನ ಮಾಯಾಜಾಲದ ಸುಳಿಯಲ್ಲಿ ಯಾರನ್ನು, ಯಾವಾಗ, ಯಾವ ರೀತಿ ಸಿಲುಕಿಸುತ್ತದೆ ಎನ್ನುವುದೇ ತಿಳಿಯದು. ಹಣದ ಸುಳಿಯಲ್ಲಿ ಸಿಲುಕಿದವರಿಗೆ ಅದರಿಂದ ಹೊರಬರಲಾಗುವುದಿಲ್ಲ. ಸಿಲುಕುವ ಸುಳಿ ಎಷ್ಟು ಕಠಿಣವೆಂದರೆ ತಮ್ಮತನವನ್ನೇ ಕಳೆದುಕೊಳ್ಳುವುದರ ಜೊತೆಗೆ, ನೆಮ್ಮದಿಯ ಜೀವನವನ್ನೂ ಕಳೆದುಕೊಳ್ಳುತ್ತಾರೆ. ಹಣಕ್ಕಾಗಿ ಯಾರದೋ ಸೈಟಿಗೆ ಬೇಲಿ ಹಾಕಿ ತಮ್ಮದೆನ್ನುತ್ತಾರೆ, ಅಣ್ಣ-ತಮ್ಮಂದಿರ ಆಸ್ತಿಯನ್ನು ನುಂಗುತ್ತಾರೆ, ಆದಾಯ ತೆರಿಗೆ ಕೊಡದೆ ಬ್ಲಾ್ಯಕ್​ವುನಿಯನ್ನಾಗಿಸಿ, ಹಾಸಿಗೆ ಅಡಿಯಲ್ಲಿ, ಸ್ವಿಸ್ ಬ್ಯಾಂಕಿನಲ್ಲಿ, ಬೇನಾಮಿ ಹೆಸರಲ್ಲಿಡುತ್ತಾರೆ, ಕಳ್ಳತನ, ದರೋಡೆ ಮಾಡುವುದಲ್ಲದೆ ಕೊಲೆ ಮಾಡಲೂ ಹೇಸುವುದಿಲ್ಲ.

    ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎನ್ನುತ್ತಾರೆ. ಆದರೆ ಹಣ ಬಂತೆಂದರೆ ಅದರೊಟ್ಟಿಗೆ ಚಿಂತೆ ಸಹ ಬರುತ್ತದೆ. ಅದು ಒಂದು ತರಹದ ಪ್ಯಾಕೇಜ್ ಡೀಲ್ ಇದ್ದಂಗೆ. ನೆಮ್ಮದಿಯ ನಿದ್ರೆಯನ್ನು ಕಸಿದುಕೊಳ್ಳುತ್ತದೆ. ಹಣ ಮಾಡುವ ಚಿಂತೆ, ಅದನ್ನು ಜೋಪಾನ ಮಾಡುವ ಚಿಂತೆ, ಅದನ್ನು ದುಪ್ಪಟ್ಟು ಮಾಡುವ ಚಿಂತೆ, ಐ.ಟಿ. ರೈಡ್ ಆಗುವ ಚಿಂತೆ, ಒಂದೆ? ಎರಡೆ? ಇವರು ಚಿಂತೆ, ಚಿತೆಗೆ ಸಮ ಎನ್ನುವುದನ್ನು ಮರೆಯುತ್ತಾರೆ. ಹಣ ಗಳಿಕೆಯೇ ಧ್ಯೇಯವಾಗಿಸಿಕೊಂಡವರು ಆ ದುಡ್ಡನ್ನು ಕೂಡಿಡುತ್ತ ಹೋಗುತ್ತಾರೆ. ಕೂಡಿಟ್ಟಿರುವುದು ಯಾರಿಗಾಗಿ, ಬದುಕಿರುವಾಗ ಅನುಭವಿಸಲಾರದ ದುಡ್ಡು ಇದ್ದೇನು ಪ್ರಯೋಜನ? ಮಕ್ಕಳು, ಮೊಮ್ಮಕ್ಕಳಿಗಾಗಿ ಹಣ ಕೂಡಿಸಿಡುವುದಾದರೆ ಅವರು ಶ್ರಮದ ಸಂಪಾದನೆಯ ಬೆಲೆ ತಿಳಿಯುವುದು ಯಾವಾಗ? ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳದೆ ಹಣದ ಹಿಂದೆ ಓಡುವ ಜನಕ್ಕೆ ತಾವು ಕಳೆದುಕೊಂಡಿರುವುದರ ಮೌಲ್ಯ ತಿಳಿಯುವ ಹೊತ್ತಿಗಾಗಲೇ ಬಹಳ ತಡವಾಗಿರುತ್ತದೆ.

    ಒಂದು ಹಂತದವರೆಗೂ ದುಡ್ಡು, ನಂತರ ಆ ಹಣ ಕೇವಲ ರದ್ದಿಯಾಗಿ ಅದರ ಬೆಲೆ ಕಳೆದುಕೊಳ್ಳುತ್ತದೆ. ಸಹಸ್ರಾರು ಕೋಟಿ ಗಳಿಸಿ ಮೆರೆದ ಅದೆಷ್ಟೋ ಮಂದಿ ಇಂದು ದೇಶ ಬಿಟ್ಟು ಓಡಿಹೋಗಿದ್ದಾರೆ, ಹಣ ಎಣಿಸುತ್ತಿದ್ದವರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಬೆರಳೆಣಿಕೆ ಜನ ಮಾತ್ರ ತಾವು ದುಡಿದದ್ದು ಸಾಕು, ಇನ್ನು ದುಡಿದದ್ದು ಇಲ್ಲದವರಿಗೆ ನೀಡೋಣ ಎನ್ನುವವರಿದ್ದಾರೆ. ಇವರಲ್ಲಿ ಅದಾರು ಶ್ರೀಮಂತರು, ತನ್ನ ಅವಶ್ಯಕತೆಗೆ ಮೀರಿ ಹಣ ಸಂಪಾದಿಸುವವನೆ ಅಥವಾ ತನಗಿಷ್ಟು ಸಾಕು ಉಳಿದದ್ದು ಪರರಿಗೆ ಎಂದು ಪ್ರೀತಿ, ವಾತ್ಸಲ್ಯ ಮತ್ತು ಸೇವೆಗೆ ಬೆಲೆ ಕೊಡುವವರೆ?

    ಈ ಹಣದಾಸೆ ಬಗ್ಗೆ ಮಾತನಾಡುವಾಗ ನೆನಪಾಗುವುದು ಟಾಲ್​ಸ್ಟಾಯ್ ಕಥೆ.

    ಒಂದೂರಿನಲ್ಲಿ ಒಬ್ಬ ಬೇಟೆಗಾರನಿದ್ದ. ಅವನಿಗೆ ಒಂದೇ ಕನಸು ತಾನು ಎಂದಾದರೊಮ್ಮೆ ಜಮೀನಿನ ಒಡೆಯನಾಗಬೇಕೆಂದು. ಹೀಗಿರುವಾಗ ಕಾಡಿನಲ್ಲೊಂದು ದಿನ ಕರಡಿಯ ಕೈಗೆ ಸಿಲುಕಿ ಒದ್ದಾಡುತ್ತಿದ್ದ ರಾಜನನ್ನು ಕಾಪಾಡಿದ. ಖುಷಿಯಾದ ರಾಜ, ‘ನನ್ನ ಪ್ರಾಣ ಉಳಿಸಿದೆ, ನಿನಗೇನು ಬೇಕೋ ಕೇಳು’ ಎಂದ. ಹಾಗಂದದ್ದೇ ತಡ ಇವನ ಆ ಕನಸಿಗೆ ರೆಕ್ಕೆ ಬಂದಂತಾಗಿ ‘ನನಗೆ ಜಮೀನು ಬೇಕು’ ಎಂದ. ‘ಅಷ್ಟೇ ತಾನೆ, ಎಷ್ಟು ಜಮೀನು ಬೇಕು ಕೇಳು?’ ‘ಎಷ್ಟು ಅಂತ ಗೊತ್ತಿಲ್ಲ ತುಂಬಾನೇ ಬೇಕು’ ಅಂದ. ಆಗ ರಾಜ ‘ನಾಳೆ ಸೂರ್ಯೋೕದಯದಿಂದ ಸೂರ್ಯಾಸ್ತಮಾನದವರೆಗೆ ಎಷ್ಟು ಓಡುತ್ತಿಯೋ ಅಷ್ಟು ಜಮೀನನ್ನು ನಿಂಗೆ ಬರೆದು ಕೊಡ್ತಿನಿ’ ಎಂದ. ನಾಳೆ ಓಡಬೇಕು ಎಂಬ ಉತ್ಸಾಹ, ಹೆಚ್ಚು ಓಡಿ ಹೆಚ್ಚು ಜಮೀನು ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆ ಅಂದಿನ ರಾತ್ರಿ ಅವನ ನಿದ್ದೆಯನ್ನೇ ಕಸಿದುಕೊಂಡಿತು.

    ಎದ್ದವನೇ ರಾಜ ಹೇಳಿದ ಸ್ಥಳಕ್ಕೆ ತೆರಳಲು ಸಿದ್ಧನಾದ. ಹೆಂಡತಿ, ‘ಏನಾದ್ರೂ ಒಂಚೂರು ತಿನ್ನಿ ಇಲ್ಲಾಂದ್ರೆ ಸುಸ್ತಾಗ್ತೀರಿ’ ಎಂದಾಗ ‘ಅಯ್ಯೋ ಹುಚ್ಚಿ ತಿಂದ್ರೆ ಹೊಟ್ಟೆ ಭಾರ ಆಗತ್ತೆ, ಓಡೋದಕ್ಕೆ ಆಗುತ್ತ, ತುಂಬ ಓಡಬೇಕು, ತುಂಬ ಜಮೀನು ಪಡ್ಕೊಬೇಕು’ ಎಂದು ಹೇಳಿದವನೇ ತುತ್ತು ಅನ್ನವನ್ನೂ ಮುಟ್ಟದೆ, ನೀರನ್ನು ಕುಡಿದು ಹೊರಟು ನಿಗದಿತ ಸ್ಥಳ ತಲುಪಿದ. ಅಲ್ಲಿದ್ದ ಮಂತ್ರಿ ‘ಈ ಗೆರೆಯಿಂದ ಓಡಲು ಪ್ರಾರಂಭಿಸು, ರಸ್ತೆಯ ಮಧ್ಯೆ ನಿನಗೆ ನೀರು ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿದೆ, ಅದೆಷ್ಟು ದೂರ ಓಡುತ್ತೀಯೋ ನೋಡೋಣ, ಹೊರಡು’ ಎಂದು ಹೇಳಿದ ಕೂಡಲೇ ಹುಚ್ಚು ಹಿಡಿದವನಂತೆ ಓಡಲಾರಂಭಿಸಿದ. ಮಧ್ಯದಲ್ಲಿ ನೀರು ಎಂದರೆ, ‘ನಿಂತರೆ ಸಮಯ ವ್ಯರ್ಥ ಮತ್ತು ನಿಂತದ್ದನ್ನು ರಾಜ ಕೊನೆ ಎಂದು ಪರಿಗಣಿಸಿ ಜಮೀನಿನ ಅಳತೆ ಅಲ್ಲಿಗೆ ಕೊನೆ ಎಂದರೆ’ ಅನ್ನೋ ಅನುಮಾನದಿಂದ ಒಂದೇ ಉಸಿರಿನಲ್ಲಿ ಓಡಿದ. ಬಿಸಿಲಿನ ಝುಳ ಹೆಚ್ಚಿದಂತೆ, ಕಣ್ಣು ಕತ್ತಲೆಯಾಗುತ್ತಿದೆ, ಇಡುವ ಹೆಜ್ಜೆ ನಡುಗುತ್ತಿದೆ, ಉಸಿರು ಉಬ್ಬಸವಾಗಿ ಬದಲಾಗುತ್ತಿದೆ, ಅದನ್ನು ಕಂಡ ಸೈನಿಕರು, ‘ಸ್ವಲ್ಪ ನೀರು ಕುಡೀರಿ ಸ್ವಾಮಿ’ ಎಂದರೂ ‘ಬೇಡ, ನಾನು ಓಡಬೇಕು, ಜಮೀನು, ಜಮೀನು..’ ಎಂದವನೇ ನಿರಂತರವಾಗಿ ಓಡುತ್ತಲೇ ಇದ್ದ. ಇನ್ನೇನು ಸೂರ್ಯಾಸ್ತಮಾನವಾಗುತ್ತೆ ತನ್ನ ಜಮೀನು ಕೊನೆಗೊಳ್ಳುತ್ತೆ ಸಾಧ್ಯವಾದಷ್ಟು ಪಡೆಯಬೇಕೆಂದು ಡೈವ್ ಹೊಡೆದು ಅಂಗಾತ ಮಲಗಿ ಕೈಯಿಂದ ಮಾರ್ಕ್ ಮಾಡಿದ. ನೆರೆದ ಜನರೆಲ್ಲ ಕಿವಿಗಡಚಿಕ್ಕುವಂತೆ ಕರತಾಡನ ಮಾಡಿದರು. ಎಷ್ಟು ಹೊತ್ತಾದರೂ ಇವ ಮಿಸುಕಾಡುವುದೇ ಇಲ್ಲಾ ಯಾಕೆಂದು ಸೈನಿಕರು ಹೋಗಿ ನೋಡಿದರೆ ಅವನು ಕೊನೆಯುಸಿರೆಳೆದಿದ್ದ.

    ಸೈನಿಕರು ರಾಜನಿಗೆ ‘ಇವರು ಇನ್ನಿಲ್ಲ ಮಹಾಸ್ವಾಮಿ’ ಎಂದು ತಿಳಿಸಿದರು. ರಾಜ ಆ ಸ್ಥಳದಲ್ಲೇ ಅವನನ್ನು ಆರಡಿ ಮೂರಡಿ ಜಾಗದಲ್ಲಿ ಮಣ್ಣು ಮಾಡಿಸಿ ನಿರ್ಗಮಿಸಿದ. ಆಗ ರಾಜ ಹೇಳಿದ-‘ಅದೆಷ್ಟೇ ಆಸೆ ಪಟ್ಟರೂ, ಅದೆಷ್ಟೇ ಗಳಿಸಿದರೂ ಕೊನೆಗೆ ಬೇಕಾಗುವುದು ಕೇವಲ ಆರಡಿ ಮೂರಡಿ ಜಾಗ ತಾನೆ’ ಎಂದು. ಆಸೆ ಬದುಕೋಕ್ಕೆ ಕಾರಣ, ದುರಾಸೆ ವಿನಾಶಕ್ಕೆ ನಾಂದಿ.

    ‘ನನಗಿಷ್ಟು ಹಣ ಸಾಕು’ ಎನ್ನುವ ತೃಪ್ತಿ ಬರುವವರೆಗೂ ಮನುಷ್ಯ ನೆಮ್ಮದಿ ಕಾಣಲಾರ. ಒಂದು ಕಚೇರಿಯ ಮಾಲೀಕ ಎಸಿ ರೂಮಿನಲ್ಲಿ ಕೂತರೆ ಆ ಕಂಪನಿಯ ನೌಕರರೂ ಸಹ ಎಸಿಯಲ್ಲಿ ಕೂರುತ್ತಾರೆ, ಮಾಲೀಕ ಸ್ವಂತ ಕಾರಿನಲ್ಲಿ ಓಡಾಡಿದರೆ ಡ್ರೖೆವರ್ ಕೂಡ ಕಾರಿನಲ್ಲೇ ಓಡಾಡಬಹುದು. ದಿನದ ದುಡಿಮೆ ಮುಗಿಸಿ ಮನೆಗೆ ತೆರಳುವ ನೌಕರ ತನ್ನ ಕುಟುಂಬದ ಜೊತೆಗೋ, ಸ್ನೇಹಿತರ ಜೊತೆಗೋ ಅಥವಾ ಒಂಟಿಯಾಗಿ ಹೊರಗೆ ಹೋಗಿ, ತನಗೆ ಬೇಕಾದ್ದನ್ನು ತಿಂದು, ಒಂದು ಒಳ್ಳೆಯ ಸಿನಿಮಾನೋ, ನಾಟಕಾನೋ ನೋಡಿ, ತನ್ನ ಮಕ್ಕಳನ್ನು ಪಾರ್ಕ್, ಸರ್ಕಸ್ ಹೀಗೆ ಹಲವು ಕಡೆ ಕರೆದುಕೊಂಡು ಹೋಗುತ್ತ, ದುಡಿದುದರಲ್ಲಿ ಮುಕ್ಕಾಲು ಭಾಗವನ್ನು ಕುಟುಂಬದ ಖುಷಿಗಾಗಿ ವ್ಯಯಿಸಿ ಸಂತೃಪ್ತ ಜೀವನ ನಡೆಸುತ್ತಾನೆ. ಅದೇ ಮಾಲೀಕ, ಮನೆ, ಮಠ, ಸ್ನೇಹಿತರ ಪರಿವಿಲ್ಲದೆ, ಬೆಳಗಿನಿಂದ ರಾತ್ರಿಯವರೆಗೆ ಕೇವಲ ಹಣ, ಹಣ, ಹಣ ಎಂದು ಯೋಚಿಸುತ್ತ ಜೀವನ ಕಳೆಯುತ್ತಾನೆ.

    ಜೀವನದ ನೆಮ್ಮದಿ ಇರುವುದು ಹಣದಲ್ಲಿ ಮಾತ್ರವಲ್ಲ, ಬದಲಾಗಿ ಆತ್ಮತೃಪ್ತಿಗಾಗಿ ಮಾಡುವ ಕೆಲಸದಲ್ಲಿ. ಹಣ ಹಾಸಿಗೆ ತಂದುಕೊಡಬಹುದು ಆದರೆ ನಿದ್ದೆಯನ್ನಲ್ಲ, ಹಣದಿಂದ ಮನೆ ಖರೀದಿಸಬಹುದು ಆದರೆ ಮನಸ್ಸುಗಳನ್ನಲ್ಲ. ಹೆಣವಾದ ಮೇಲೆ ನೆತ್ತಿಯ ಮೇಲಿಡುವ ಕಾಸೂ ಕೂಡ ನಮ್ಮ ಜೊತೆ ಬಾರದು, ಅಂದ ಮೇಲೆ ಸಾಕಷ್ಟು ಹಣ ಗಳಿಸಿದ ನಂತರವೂ ಅದಾರಿಗಾಗಿ ಈ ಹಣದ ಹಿಂದಿನ ಹುಚ್ಚು ಓಟ? ಇದನ್ನು ಅರ್ಥ ಮಾಡಿಕೊಂಡರೆ ಬನ್ನಿ ಹಣ ಮಾಡೊದನ್ನ ಮುಂದಿನ ಸಂಚಿಕೆಯಿಂದ ಹೇಳಿಕೊಡುತ್ತೇನೆ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts