More

    ವಿಜಯ್ ಪ್ರಕಾಶ್ ಕಂಠ ಸಿರಿಗೆ ತಲೆದೂಗಿದರು

    ಮಂಜುನಾಥ ಅಯ್ಯಸ್ವಾಮಿ

    ಹಂಪಿ ವಿಶ್ವವಿಖ್ಯಾತ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕಂಚಿನ ಕಂಠದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅವರ ತಂಡ ಪ್ರಸ್ತುತಪಡಿಸಿದ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಸಭಿಕರು ತಲೆದೂಗಿದರು.

    ಹಂಪಿಯ ಪ್ರಧಾನ ವೇದಿಕೆ ಗಾಯತ್ರಿ ಪೀಠದಲ್ಲಿ ಶುಕ್ರವಾರ ರಾತ್ರಿ ವಿಜಯ್ ಪ್ರಕಾಶ್ ತಂಡದ ಸದಸ್ಯರ ಗಾನ ಲಹರಿ ಪ್ರೇಕ್ಷಕರು ಎಲ್ಲ ಮರೆತು ಮೈ-ಮನ ಕುಣಿಯುವಂತೆ ಮಾಡಿತು. ಗಾಯಕಿ ಅನುರಾಧಾ ಭಟ್ ಅವರು ‘ಕೇಳಿಸದೆ ಕಲ್ಲು ಕಲ್ಲಿನಲಿ..’ ಹಾಡಿನಿಂದಲೇ ಕಾರ್ಯಕ್ರಮ ಆರಂಭವಾಯಿತು. ಅವರ ಹಾಡಿಗೆ ನೆರೆದಿದ್ದ ಜನರೂ ಗುನುಗುವ ಮೂಲಕ ಸಂಭ್ರಮಪಟ್ಟರು. ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲಮ್ಮನ.. ಹಾಡಿನ ನಂತರ ಆಗಮಿಸಿದ ನಿರೂಪಕಿ ಅನುಶ್ರೀ ನಿರೂಪಣೆ ಆರಂಭಿಸಿ, ವಿಜಯ್ ಪ್ರಕಾಶ್ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಇದಕ್ಕೂ ಮುನ್ನ ಅವರು ಬೆಳೆದು ಬಂದ ದಾರಿ ಬಗ್ಗೆ ವಿಡಿಯೋ ತುಣಕನ್ನು ಪ್ರದರ್ಶಿಸಲಾಯಿತು.

    ವಿಜಯ್ ಪ್ರಕಾಶ್ ಕಂಠ ಸಿರಿಗೆ ತಲೆದೂಗಿದರು

    ಜೈ ಹೋ.. ಎಂದು ಹಾಡುತ್ತಲೇ ವೇದಿಕೆಗೆ ಬಂದ ವಿಜಯ್ ಅವರು, ನಂತರ ಪುನೀತ್ ರಾಜಕುಮಾರ್ ಅವರು ನಟಿಸಿದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತ್ತೈತೆ.. ಹಾಡನ್ನು ಹಾಡಿ ಜನರನ್ನು ರಂಜಿಸಿದರು. ನಂತರ ಅನುರಾಧ ಭಟ್ ಅವರೊಂದಿಗೆ ಕಾಂತಾರ ಚಿತ್ರದ ಸಿಂಗಾರಿ ಸಿರಿಯೇ ಹಾಡು ಪ್ರಸ್ತುತಪಡಿಸಿದರು.

    ಗಾಯಕ ಅಜಯ್ ವಾರಿಯರ್ ಅವರು ‘ಹೊಸ ಬೆಳಕು ಮೂಡುತ್ತಿದೆ’ ಹಾಡಿಗೆ ಧ್ವನಿಯಾದರು. ದಿವ್ಯಾ ರಾಮಚಂದ್ರ ಅವರು ಹಾಡಿದ ‘ನಾನು ಕೋಳಿಕೆ ರಂಗ’ ಹಾಡಿಗೆ ಯುವಕರು ಮೈ ಚಳಬಿಟ್ಟು ಕುಣಿದರು. ಅನುರಾಧ ಭಟ್ ಅವರು ಪ್ರಸ್ತುತಪಡಿಸಿದ ಚೌಕ ಚಿತ್ರದ ‘ಅಪ್ಪಾ ಐ ಲವ್ ಯೂ ಪಾ’ ಹಾಡು ಮನಸಿಗೆ ಮುದ ನೀಡಿತು.

    ಕಣ್ಣು ಹೊಡಿಯಾಕ.., ಬ್ರದರ್ ಫ್ರಮ್ ಅನದರ್ ಮದರ್, ಅಲ್ಲಾಡ್ಸು-ಅಲ್ಲಾಡ್ಸು ಹಾಡುಗಳಿಗೆ ಯುವಜನತೆ ಹುಚ್ಚೆದ್ದು ಕುಣಿದಾಡಿದರು. ನಂತರ ವಿಜಯ್ ಪ್ರಕಾಶ್, ಓಂ ಶಿವೋಹಂ ಓಂ ಶಿವೋಹಂ ರುದ್ರನಾಮಂ ಬಜೇಹಂ ಹಾಡಿನಿಂದ ಎಲ್ಲರ ಮನದಲ್ಲಿ ಭಕ್ತಿ ಭಾವ ಮೂಡಿಸಿತು. ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಗೂ ಕಾಣದಂತೆ ಮಾಯವಾದನು ಹಾಡು ಮೇರು ನಟ ರಾಜಕುಮಾರ್ ಹಾಗೂ ಪುನೀತ್ ಅವರನ್ನು ನೆನಪಿಸಿತು. ಬಳಿಕ ನಸುಕಿನ ಜಾವ 2.30ಕ್ಕೆ ಸಂಗೀತ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

    ವಿಜಯ್ ಪ್ರಕಾಶ್ ಕಂಠ ಸಿರಿಗೆ ತಲೆದೂಗಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts