More

    ಶ್ವಾನ ಝಲಕ್‌ಗೆ ಜನತೆ ಬೆರಗು!

    ಹಂಪಿ: ಹಂಪಿ ಉತ್ಸವದ ಅಂಗವಾಗಿ ಕಮಲಾಪುರದಲ್ಲಿ ಈ ಬಾರಿ ವಿಶೇಷವಾಗಿ ಆಯೋಜಿಸಿದ್ದ ಶ್ವಾನದಳ ಪ್ರದರ್ಶನ ಕಂಡು ಜನ ಬೆರಗಾದರು.

    ಪಶುಪಾಲನಾ ಇಲಾಖೆಯಿಂದ ಮೂರು ದಿನಗಳ ಕಾಲ ಎತ್ತುಗಳ ಪ್ರದರ್ಶನ, ಟಗರು ಪ್ರದರ್ಶನ ಹಾಗೂ ಕೊನೆಯ ದಿನ ಶ್ವಾನ ಪ್ರದರ್ಶನ ಏರ್ಪಡಿಸಿದ್ದು ಪ್ರಶಂಸೆಗೆ ಪಾತ್ರವಾಯಿತು. ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಿಂದ 65ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾದವು. ಕೆನಲ್ ಕ್ಲಬ್, ಬೆಲ್ಜಿಯನ್ ಶೆಫರ್ಡ್, ಡಾಬರ್ ಮನ್, ಮುಧೋಳ ನಾಯಿ, ಚೌಚೌ, ಅಮೆರಿಕನ್ ತಳಿ, ಬಾರ್ಡರ್ ಕೋಲಿ, ಸೈಬೀರಿಯನ್ ಹಸ್ಕಿ, ಜರ್ಮನ್ ಶೆಫರ್ಡ್ ಸೇರಿದಂತೆ 19 ತಳಿಯ ನಾಯಿಗಳು ಕಂಡುಬಂದವು. ಒಂದೊಂದು ಬಣ್ಣ, ಗಾತ್ರ, ಎತ್ತರ, ತೂಕ, ಕೇಶ ವಿನ್ಯಾಸದಿಂದ ವಿಭಿನ್ನತೆ ತೋರಿದವು. ಮಕ್ಕಳು ನಾಯಿ ಕಂಡು ಅಂಜುತ್ತಲೇ ಪಾಲಕರ ಕೈ ಗಟ್ಟಿಯಾಗಿ ಹಿಡಿದುಕೊಂಡು ದೂರದಿಂದಲೇ ವೀಕ್ಷಿಸಿದರು.

    ಒಂದೊಂದು ತಳಿ ನಾಯಿ ವಿಶೇಷ ಗುಣ ಲಕ್ಷಣ, ಚಾಣಾಕ್ಷತನ, ಬೇಟೆ ಆಡುವಿಕೆ, ಮಾಲೀಕರಿಗೆ ರಕ್ಷಣೆ ನೀಡುವುದು, ಸೌಮ್ಯ ಸ್ವಭಾವ, ನಿಯತ್ತಿನ ಬಗ್ಗೆ ಪಶು ಇಲಾಖೆ ಅಧಿಕಾರಿಗಳು ವಿವರಿಸಿದರು. ಮಾಲೀಕರು ಅವುಗಳ ಪಾಲನೆ, ಪೋಷಣೆ ಮಾಡುತ್ತಿರುವ ವಿಧಾನ, ಆಹಾರ, ಬೆಲೆ ಬಗ್ಗೆ ತಿಳಿಸಿದರು. ಜನರು ಕೆಲ ನಾಯಿಗಳ ಬೆಲೆ ಕೇಳಿ ಬೆರಗಾದರು. ಕೆಲವರು ನಾಯಿ ಸಾಕುವ ಬಗ್ಗೆ, ಆಹಾರ ನೀಡುವಿಕೆ, ಬರಬಹುದಾದ ರೋಗಗಳು, ಲಸಿಕೆ ಹಾಕಿಸುವಿಕೆ ಇತರ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ಇಲಾಖೆಯ ತರಬೇತಿ ಪಡೆದ ಶ್ವಾನಗಳು ಅಪರಾಧ ಪತ್ತೆ ವಿಧಾನಗಳನ್ನು ಪ್ರದರ್ಶಿಸಿ ಆಕರ್ಷಿಸಿದವು. ನಿರ್ವಾಹಕ ಅಧಿಕಾರಿ ಸೂಚನೆ ಕೊಡುತ್ತಲೇ ಚಕಚಕನೆ ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದವು. ಬಾಂಬ್ ಪತ್ತೆ ಹಚ್ಚುವಿಕೆ, ಹುದುಗಿಸಿದ ಬಾಂಬ್ ಪತ್ತೆ, ಕದ್ದ ವಸ್ತು ಪತ್ತೆ ಮಾಡುವುದು ನೋಡುಗರನ್ನು ಆಶ್ಚರ್ಯಚಕಿತಗೊಳಿಸಿತು.

    ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಬಸವರಾಜ್ ಬಾಳಣ್ಣನವರ್, ಶಿವಮೊಗ್ಗ ಪಾಲಿ ಕ್ಲಿನಿಕ್‌ನ ಡಾ.ಬಸವರಾಜ ಹೂಗಾರ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಶ್ರೀಪಾದ ರಾವ್ ಶ್ವಾನ ಪ್ರದರ್ಶನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮೂರು ದಿನಗಳ ಕಾಲ ಗ್ರಾಮೀಣ ಜನರಿಗೆ ಪ್ರೀತಿಪಾತ್ರವಾದ ಎತ್ತು, ಟಗರು ಹಾಗೂ ಶ್ವಾನದಳದ ಪ್ರದರ್ಶನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.

    ಚಾಂಪಿಯನ್ ಪಟ್ಟ ಪಡೆದ ಗ್ರೇಟ್‌ಡೆನ್

    ಹೊಸಪೇಟೆ ನಗರದ ವೀರು ಅವರ ಗ್ರೇಟ್‌ಡೆನ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಥಮ ಸ್ಥಾನ ಪಡೆದ ಈ ಶ್ವಾನ 10 ಸಾವಿರ ನಗದು ಪುರಸ್ಕಾರ ಪಡೆದಿದೆ. ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ 7,500 ನಗದು ಬಹುಮಾನಕ್ಕೆ ಪಾತ್ರವಾಯಿತು. ಇನ್ನೂ ಮರಿಯಮ್ಮನಹಳ್ಳಿಯ ಬಸವರಾಜ್ ಅವರ ಮುಧೋಳ ಹೌಂಡ್ ತೃತೀಯ ಸ್ಥಾನ ಪಡೆದು 5000 ರೂ. ತನ್ನದಾಗಿಸಿಕೊಂಡಿತು. ಶ್ರೇಯಸ್ ಅವರ ಟಾಯ್ ಪಾಪ್, ಶಿವಪ್ರಸಾದ್ ಅವರ ಸೈಬೀರಿಯನ್ ಹಸ್ಕಿ, ಕಾರ್ತಿಕ್ ಅವರ ಬೀಗಲ್, ಲಕ್ಷ್ಮೀ ನಾರಾಯಣ ಅವರ ಸಿಡ್ಜು ತೀರ್ಪುಗಾರರ ಮೆಚ್ಚುಗೆ ಪಡೆದು, ಪ್ರಶಂಸೆಗೆ ಪಾತ್ರವಾದವು.

    ಹಂಪಿ ಉತ್ಸವದಲ್ಲಿ ಈ ಬಾರಿ ಶ್ವಾನ ಪ್ರದರ್ಶನ ಏರ್ಪಡಿಸಿದ್ದು ಉತ್ತಮ ಕೆಲಸ. ವಿಷಯ ತಿಳಿದು ನಾನು ನಮ್ಮ ಸಾಕುನಾಯಿ ಕರೆತಂದಿರುವೆ. ಹೊಸ ಅನುಭವ ನೀಡಿದ್ದು ಖುಷಿಯಾಗಿದೆ.
    |ಮೇಘರಾಜ್ ಶ್ವಾನ ಮಾಲೀಕ

    ಪಶುಪಾಲನಾ ಇಲಾಖೆಯಿಂದ ಮೂರು ದಿನ ವಿಭಿನ್ನ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಎತ್ತು, ಟಗರು ಹಾಗೂ ಶ್ವಾನ ಪ್ರದರ್ಶನ ಜನರಿಗೆ ಇಷ್ಟವಾಗಿದ್ದು ಖುಷಿಪಟ್ಟಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಏರ್ಪಡಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    | ಡಾ.ಬಸವರಾಜ ಬೆಣ್ಣಿ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts