More

    ಮತ್ತೊಂದು ಪ್ರೇಮಲೋಕ ಸೃಷ್ಟಿ ಮಾಡುವೆ

    ನಟ-ನಿರ್ಮಾಪಕ ವಿ.ರವಿಚಂದ್ರನ್ ಘೋಷಣೆ ಶಿಲ್ಪಕಲೆಯನ್ನು ಕೊಂಡಾಡಿದ ಕ್ರೇಜಿಸ್ಟಾರ್

    ಹಂಪಿ (ಗಾಯತ್ರಿ ಪೀಠ ವೇದಿಕೆ)

    ಜನರಿಗಾಗಿ ಮತ್ತೊಂದು ಪ್ರೇಮಲೋಕ ಸೃಷ್ಟಿಸುವೆ. ಮುಂದಿನ ವರ್ಷ ಹಂಪಿ ಉತ್ಸವಕ್ಕೆ ಚಿತ್ರದೊಂದಿಗೆ ಬರುವೆ ಎಂದು ಚಿತ್ರನಟ ವಿ.ರವಿಚಂದ್ರನ್ ಹೇಳಿದರು.

    ಮತ್ತೊಂದು ಪ್ರೇಮಲೋಕ ಸೃಷ್ಟಿ ಮಾಡುವೆ

    ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮುಂದಿನ ವರ್ಷ ಮತ್ತೊಂದು ಪ್ರೇಮಲೋಕದೊಂದಿಗೆ ಮತ್ತೊಮ್ಮೆ ಬರುವೆ. ಯಾವುದೇ ಹೊಸ ಪ್ರಯೋಗ ಮಾಡುವುದಿಲ್ಲ. ನಿಮ್ಮ ಅಭಿರುಚಿಗೆ ತಕ್ಕ ಸಿನಿಮಾ ಮಾಡುವೆ. ಸಿನಿಮಾದಲ್ಲಿ 20-25 ಹಾಡು ಇರುತ್ತವೆ. ಆರಂಭದಿಂದ ಅಂತ್ಯದವರೆಗೆ ಹಾಡು ಗುನುಗುತ್ತ ಚಿತ್ರಮಂದಿರದಿಂದ ನೀವೆಲ್ಲ ಹೊರ ಬರಬೇಕು. ಪ್ರೇಮಲೋಕ ಬಂದ ನಂತರ ಮತ್ತೆ ಹಂಪಿ ಉತ್ಸವದಲ್ಲೇ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ ಎಂದು ಮಾತು ನೀಡಿದರು.

    ಮತ್ತೊಂದು ಪ್ರೇಮಲೋಕ ಮಾಡಬೇಕೆಂದು ಅಂದುಕೊಂಡಾಗಲೇ ನಾನು ಹಂಪಿಗೆ ಬಂದಿರುವೆ. ನಾನು ಮೊದಲು ಪ್ರೇಮಲೋಕ ಮಾಡಿದ ಸಂದರ್ಭದಲ್ಲಿ ಹಂಪಿ ಉತ್ಸವ ಆರಂಭವಾಗಿದೆ. ನಾನು ಇಲ್ಲಿಗೆ ಬರಲು ಇಷ್ಟು ವರ್ಷ ಬೇಕಾಯಿತು. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹಂಪಿ ಉತ್ಸವ ತೋರಿಸುತ್ತಿದೆ. ಹಂಪಿ ಎಂದರೆ ರೋಮಾಂಚನ. ಒಂದೊಂದು ಕಲ್ಲು ಒಂದೊಂದು ಸ್ವರ ಇದ್ದಂತೆ. ಇದರ ಹಿಂದೆ ಆ ಕಲಾವಿದರು ಮಾಡಿದ ಕೆಲಸದ ಮುಂದೆ ನಮ್ಮದೇನು ದೊಡ್ಡ ಸಾಧನೆ ಅಲ್ಲ. 500 ವರ್ಷದ ಹಿಂದೆ ಅಯೋಧ್ಯೆಯಲ್ಲಿ ಹೋಗಿದ್ದ ಸಂಪತ್ತು ಮತ್ತೆ ಗತ್ತಿನಿಂದ ಹೇಗೆ ಮರಳಿತೋ ಹಾಗೇ ಹಂಪಿ ಉತ್ಸವ ಪ್ರತಿ ವರ್ಷ ಬೆಳೆಯುತ್ತ ಗತ್ತು ಮುಂದುವರಿಸಿಕೊಂಡು ಹೋಗಬೇಕೆಂದು ಬಯಕೆ ವ್ಯಕ್ತಪಡಿಸಿದರು.

    ಸಂತೋಷ ಮುಂದಿರಬೇಕು. ಕಣ್ಣೀರು ಬೆನ್ನ ಹಿಂದೆ ಇರಬೇಕು. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ನನ್ನ ತಂದೆ-ತಾಯಿ ನನಗೆ ಪ್ರೀತಿ ಒಂದನ್ನೇ ಕಲಿಸಿದ್ದಾರೆ. ಅವರಿಬ್ಬರೂ ಈಗಿಲ್ಲ. ಆದರೆ, ನಿಮ್ಮನ್ನೆಲ್ಲ ಕಂಡಾಗ ಅವರು ನೆನಪಾಗುತ್ತಾರೆ. ನಾನು ಯಾವತ್ತೂ ದುಡ್ಡಿನ ಹಿಂದೆ ಬಿದ್ದಿಲ್ಲ. ಸೋಲನ್ನು ಒಪ್ಪಿಕೊಂಡಿಲ್ಲ. ನಾನೀಗ ಒಂದು ವರ್ಷದಿಂದ ಖಾಲಿ ಕುಳಿತಿಲ್ಲ. ಮತ್ತೊಂದು ಪ್ರೇಮಲೋಕ ಸೃಷ್ಟಿ ಮಾಡುವೆ ಎಂದು ಪುನರುಚ್ಛರಿಸಿದರು.

    ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ರವಿಚಂದ್ರನ್ ಕನ್ನಡ ಚಿತ್ರರಂಗವನ್ನು ಕಲರ್ ಫುಲ್ ಮಾಡಿದವರು. ಮುಂದೆ ಬರುವ ಪ್ರೇಮಲೋಕ ಚಿತ್ರ ಯಶಸ್ವಿಯಾಗಲಿ. ಇದು ಜನರ ಉತ್ಸವ. ಆನಂದಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಇದು ಪಕ್ಷಾತೀತ ಕಾರ್ಯಕ್ರಮ ಎಂದು ತೋರಿದ್ದಾರೆ.

    ಮೂರು ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಜನತೆಗೆ ಅಭಿನಂದನೆಗಳು. ನಾನು ಒಬ್ಬನೇ ಎಲ್ಲ ಮಾಡಲು ಸಾಧ್ಯವಿಲ್ಲ. ಎಲ್ಲ ಅಧಿಕಾರಿಗಳು, ಪೊಲೀಸರು ಶ್ರಮಿಸಿದ ಕಾರಣ ಯಶಸ್ವಿಯಾಗಿದೆ. ಕಳೆದ ಬಾರಿ ಪಾರ್ಕಿಂಗ್ ದೂರ ಮಾಡಿದ್ದರಿಂದ ಜನರಿಗೆ ಸಮಸ್ಯೆ ಆಯಿತು. ಈ ಬಾರಿ ಅದನ್ನು ಸರಿಪಡಿಸಲಾಗಿದೆ. ಕಡಿಮೆ ದರದಲ್ಲಿ ಊಟ ಕೊಟ್ಟ ಆಹಾರದ ಅಂಗಡಿಯವರಿಗೆ ಬಾಡಿಗೆ ಮನ್ನಾ ಮಾಡುವಂತೆ ಡಿಸಿಗೆ ನಿರ್ದೇಶನ ನೀಡಿರುವೆ ಎಂದರು.

    ವೇದಿಕೆಗೆ ಬಾರದ ಗವಿಯಪ್ಪ

    ಎರಡು ದಿನಗಳ ಕಾಲ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಸಮಾರೋಪ ಸಮಾರಂಭದಿಂದ ದೂರ ಉಳಿದರು. ಸಚಿವರೊಂದಿಗೆ ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ ಗವಿಯಪ್ಪ, ವೇದಿಕೆಗೆ ಬರಲಿಲ್ಲ. ಮಾಜಿ ಸಚಿವ ಆನಂದ್ ಸಿಂಗ್ ವೇದಿಕೆಗೆ ಬಂದಿದ್ದರಿಂದ ಮುನಿಸಿಕೊಂಡು ತೆರಳಿದ ಘಟನೆ ನಡೆಯಿತು. ಅವರ ಅನುಪಸ್ಥಿತಿಯಲ್ಲಿಯೇ ಸಮಾರೋಪ ಮುಗಿಸಲಾಯಿತು.

    ಹಂಪಿಯ ಗಾಯತ್ರಿ ಪೀಠ ವೇದಿಕೆಯಲ್ಲಿ ಭಾನುವಾರ ರಾತ್ರಿ ಹಂಪಿ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟನೆಯಲ್ಲಿ ಚಿತ್ರನಟ ವಿ.ರವಿಚಂದ್ರನ್, ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರಾದ ಜೆ.ಎನ್.ಗಣೇಶ, ರಾಘವೇಂದ್ರ ಹಿಟ್ನಾಳ್, ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಆನಂದ್ ಸಿಂಗ್, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ, ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ಸದಾಶಿವ ಪ್ರಭು, ಎಸ್ಪಿ ಶ್ರೀಹರಿಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts