More

    ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ


    ಮೂರು ದಿನ ಹರಿದು ಬಂದ ಲಕ್ಷಾಂತರ ಮಂದಿ ಸಡಗರ, ಸಂಭ್ರಮದಲ್ಲಿ ಮಿಂದೆದ್ದರು

    ವಿ.ಕೆ. ರವೀಂದ್ರ
    ಹಂಪಿ: ಮೂರು ದಿನಗಳ ಕಾಲ ಅಪಾರ ಜನ ಸಾಗರದ ನಡುವೆ ವಿಜೃಂಭಣೆಯಿಂದ ನಡೆದ ಹಂಪಿ ಉತ್ಸವ ಭಾನುವಾರ ವರ್ಣರಂಜಿತ ತೆರೆ ಕಂಡಿತು. ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪಿಸುವ ಸಾಹಿತ್ಯಿಕ ಕಾರ್ಯಕ್ರಮಗಳ ಜತೆಗೆ ಸಿನಿತಾರೆಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಬರದ ಬಿಸಿಗೆ ಬೆಂದ ಮನಗಳಿಗೆ ಕೊಂಚ ತಂಪನೆಯ ಮುದ ನೀಡಿದವು.

    ಕೊನೆಯ ದಿನ ಭಾನುವಾರವಿದ್ದ ಕಾರಣ ಬೆಳಗ್ಗೆಯಿಂದಲೇ ಜನ ಜಂಗುಳಿ ಕಂಡುಬಂತು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು ಕುಟುಂಬ ಸಮೇತ ಹಂಪಿಗೆ ಆಗಮಿಸಿದರು. ಬಿಲಿಸಿನ ತಾಪದ ನಡುವೆಯೇ ಮೇಳಗಳಲ್ಲಿ ಓಡಾಡಿ ವೀಕ್ಷಿಸಿದರು. ಹಂಪಿಯ ವಿವಿಧ ಸ್ಮಾರಕಗಳು, ಕಲ್ಲು ಬಂಡೆಗಳ ಮೇಲೆಲ್ಲ ಜನರು ತಂಡೋಪ ತಂಡವಾಗಿ ಕುಳಿತಿದ್ದರು.

    ನಾಲ್ಕು ವೇದಿಕೆಗಳಲ್ಲಿ ಸಂಜೆ ವೇಳೆಗೆ ಸ್ಥಳೀಯ ಹಾಗೂ ಹೊರಗಿನಿಂದ ಬಂದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಗದಿಯಂತೆ ನಡೆದವು. ಕೊನೆಯ ದಿನ ಎಲ್ಲ ವೇದಿಕೆಗಳು ಜನರಿಂದ ಭರ್ತಿಯಾಗಿದ್ದವು. ಕಲಾವಿದರು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಮೂರನೇ ದಿನವೂ ಎಲ್ಲ ವೇದಿಕೆ ಕಾರ್ಯಕ್ರಮಗಳು ಹಾಗೂ ಮೇಳಗಳಿಗೆ ಡಿಸಿ ಎಂ.ಎಸ್. ದಿವಾಕರ ಭೇಟಿ ನೀಡಿ ವೀಕ್ಷಿಸಿದರು. ಜನರ ಸ್ಪಂದನೆ, ಅಧಿಕಾರಿಗಳಿಂದ ಜನರ ಪ್ರತಿಕ್ರಿಯೆ ಬಗ್ಗೆ ಕೇಳಿ ತಿಳಿದುಕೊಂಡರು.

    ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ

    ಸಂಪರ್ಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ಮೂರನೇ ದಿನವೂ ಅಸಂಖ್ಯಾತ ಜನರು ಹಂಪಿಗೆ ಬಂದ ಕಾರಣ ಸಂಜೆ ವೇಳೆಗೆ ಹಂಪಿ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಮ್ ಜಾಮ್ ಉಂಟಾಯಿತು. ಕಡ್ಡಿರಾಂಪುರದಿಂದ ಹಂಪಿವರೆಗೆ, ಕಮಲಾಪುರದಿಂದ ಹಂಪಿವರೆಗಿನ ರಸ್ತೆಗಳು ವಾಹನಗಳಿಂದ ಭರ್ತಿಯಾಗಿದ್ದವು. ಎರಡೂ ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಕಾರಣ ಕಾರ್, ಬಸ್‌ನಂತ ವಾಹನಗಳು ಕೆಲವೆಡೆ ಸರಾಗವಾಗಿ ಸಂಚರಿಸಲು ಆಗಲಿಲ್ಲ. ಟ್ರಾಫಿಕ್‌ನಿಂದ ಜನರು ಪರದಾಡುವಂತಾಯಿತು.

    ನೀರು ಸಿಗದೆ ಬಸವಳಿದ ಕೋತಿಗಳು

    ಮೂರು ದಿನಗಳ ಉತ್ಸವ ಜನರಿಗೆ ಮುದ ನೀಡಿದರೆ ಪ್ರಾಣಿಗಳಿಗೆ ಸಂಕಷ್ಟ ಒಡ್ಡಿದಂತೆ ಕಂಡುಬಂತು. ಬೇಸಿಗೆ ಆರಂಭವಾಗುತ್ತಿದ್ದು, ಹಂಪಿ ತುಂಬ ಸರಾಗವಾಗಿ ಓಡಾಡಿಕೊಂಡಿದ್ದ ಕೋತಿಗಳು ಬಿಸಿಲಿನ ತಾಪಕ್ಕೆ ಬಸವಳಿಯುವಂತಾಗಿದೆ. ಜನ ಜಂಗುಳಿಯಿಂದ ಸರಿಯಾಗಿ ಆಹಾರ, ನೀರು ಸಿಗದೆ ಪರದಾಡಿದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಜನರ ಕಣ್ಣು ತಪ್ಪಿಸಿ ಪಾತ್ರೆಗಳಲ್ಲಿ ಇಣುಕು ಹಾಕಿ ಆಹಾರ, ನೀರು ಕುಡಿಯಲು ಹಪಹಪಿಸಿದ ದೃಶ್ಯಗಳು ಮನಕಲುಕುವಂತೆ ಮಾಡಿದವು.

    ನಿಯಂತ್ರಿಸಲು ಹೈರಾಣಾದ ಪೊಲೀಸರು

    ಜನ ಜಂಗುಳಿ ಹೆಚ್ಚುತ್ತಲೇ ಸ್ಥಳಾವಕಾಶ ಕೊರತೆ ಆಯಿತು. ಈ ವೇಳೆ ಎಲ್ಲೆಂದರಲ್ಲಿ ಜನರು ನುಗ್ಗಲು ಶುರು ಮಾಡಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲವರು ಗಲಾಟೆ ಮಾಡಿದ್ದು, ಸಮಾಧಾನಿಸಲು ಸಾಕುಬೇಕಾದಂತೆ ಕಂಡುಬಂದರು. ಹೆಚ್ಚಿನ ಭದ್ರತೆ ನಿಯೋಜಿಸಿದ್ದರೂ ನಿರೀಕ್ಷೆ ಮೀರಿ ಜನ ಆಗಮಿಸಿದ್ದರಿಂದ ಪೊಲೀಸ್ ಸಿಬ್ಬಂದಿಗೆ ಶ್ರಮ ಹೆಚ್ಚಿತು.

    ಮೆರುಗು ತಂದ ಗೋಷ್ಠಿಗಳು, ಪ್ರದರ್ಶನಗಳು

    ಮೂರು ದಿನಗಳ ಕಾಲ ನಡೆದ ಕವಿಗೋಷ್ಠಿ, ಮಹಿಳಾಗೋಷ್ಠಿ, ಯುವ, ಮಕ್ಕಳ ಗೋಷ್ಠಿಗಳು ಗಮನ ಸೆಳೆದವು. ಫಲಪುಷ್ಪ ಪ್ರದರ್ಶನ, ಮತ್ಸ್ಯಮೇಳ, ಸಿರಿಧಾನ್ಯ ಮೇಳ, ಮದಗಜಗಳಂತೆ ಕಾದಾಡಿದ ಕುಸ್ತಿ ಪಂದ್ಯಾವಳಿ, ಗುಂಡು ಎತ್ತುವ ಸ್ಪರ್ಧೆ, ಬಂಡಿಗಾಲಿ ತೊಡಿಸುವ ಸ್ಪರ್ಧೆಗಳು ಹಂಪಿ ಉತ್ಸವದ ಮೆರುಗು ಹೆಚ್ಚಿಸಿದವು. ಕೊನೆಯದಿನ ಸಂಜೆ ನಡೆದ ವಿವಿಧ ಕಲಾತಂಡಗಳ ಜನಪದ ವಾಹಿನಿ ರಾಜ್ಯದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿತು. ಆನೆಲಾಯದ ಬಳಿ ಮೂರು ದಿನಗಳ ಕಾಲ ವಿದ್ಯುತ್ ದೀಪದ ಬೆಳಕಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ‘ವಿಜಯನಗರ ಸಾಮ್ರಾಜ್ಯ’ದ ಗತವೈಭವವನ್ನು ಸಾರಿತು. ಹಂಪಿಯ ಶಿಲ್ಪಕಲಾ ಸ್ಮಾರಕಗಳು ಸೇರಿ, ರಸ್ತೆಗಳಲ್ಲೂ ವಿದ್ಯುತ್ ದೀಪಗಳಿಂದ ಆಲಂಕರಿಸಿರುವುದು ಉತ್ಸವದ ಆವರಣ ಝಗಮಗಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts