More

    ಹಮಾಸ್ ಜನರು ಚೆನ್ನಾಗಿ ನೋಡಿಕೊಂಡರು ಆದ್ರೆ… 2 ವಾರಗಳ ಕಹಿ ಅನುಭವ ಬಿಚ್ಚಿಟ್ಟ ಇಸ್ರೇಲಿ ಹಿರಿಯ ಮಹಿಳೆ

    ಜೆರುಸಲೇಂ: ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಿರಿಯ ಇಸ್ರೇಲಿ ಮಹಿಳೆಯನ್ನು ಹಮಾಸ್​ ಉಗ್ರರ ಗುಂಪು ರಾತ್ರೋರಾತ್ರಿ ಬಿಡುಗಡೆ ಮಾಡಿದ್ದಾರೆ. ಅ.7ರಂದು ಇಸ್ರೇಲ್​ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿ ಹಮಾಸ್​ ಉಗ್ರರು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ಎರಡು ವಾರಗಳ ಕಾಲ ಒತ್ತೆಯಾಳಾಗಿದ್ದ ಸಂದರ್ಭದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹಿರಿಯ ಮಹಿಳೆ ಹೇಳಿದ್ದಾರೆ.

    ಬಿಡುಗಡೆಯಾದ 85 ವರ್ಷದ ಮಹಿಳೆಯನ್ನು ಯೋಚೆವ್ಡ್ ಲಿಫ್ಶಿಟ್ಜ್ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಬಿಡುಗಡೆಯಾದ ಇಬ್ಬರು ಮಹಿಳೆಯರಲ್ಲಿ ಇವರು ಕೂಡ ಒಬ್ಬರು. ಅ.7ರಂದು ಗಾಜಾ ಹೋರಾಟಗಾರರು ನನ್ನ ಮೇಲೆ ಹಲ್ಲೆ ಮಾಡಿ, ಜೇಡರ ಬಲೆಯಂತಹ ಸುರಂಗಕ್ಕೆ ಕರೆದೊಯ್ದರು. ನಾವು ಅಲ್ಲಿರುವ ಸಂದರ್ಭದಲ್ಲಿ ಓರ್ವ ವೈದ್ಯ ಭೇಟಿಯಾಗಿ ನಮ್ಮ ಆರೋಗ್ಯವನ್ನು ವಿಚಾರಿಸುತ್ತಿದ್ದರು ಮತ್ತು ಹಮಾಸ್​ ಜನರು ನಮ್ಮನ್ನು  ವಿನಮ್ರವಾಗಿ ನಡೆಸಿಕೊಂಡರು ಹಾಗೂ ನಮ್ಮೆಲ್ಲ ಅಗತ್ಯತೆಗಳನ್ನು ಪೂರೈಸಿದರು ಎಂದು ತಿಳಿಸಿದ್ದಾರೆ. ಆದರೂ ನಾವು ನಿತ್ಯವೂ ಭಯದಲ್ಲೇ ಬದುಕುತ್ತಿದ್ದೆವು. ಯಾವಾಗ ನಮ್ಮ ಪ್ರಾಣ ಹೋಗುತ್ತದೆ ಎಂದು ಜೀವ ಕೈಯಲ್ಲಿ ಹಿಡಿದುಕೊಂಡಿದ್ದೆವು. ಹೇಳಬೇಕೆಂದರೆ ಜೀವದ ಮೇಲೆ ಆಸೆಯೇ ಹೊರಟು ಹೋಗಿತ್ತು. ಅಲ್ಲದೆ, ಒಂದೊಂದು ದಿನವೂ ಒಂದು ವರ್ಷದಂತೆ ಭಾಸವಾಗುತ್ತಿತ್ತು ಎಂದು ಹಿರಿಯ ಮಹಿಳೆ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.

    ಅಂದಹಾಗೆ ಹಮಾಸ್​ ಸೋಮವಾರ ಇಬ್ಬರು ಇಸ್ರೇಲಿ ಮಹಿಳೆಯರನ್ನು ಬಿಡುಗಡೆ ಮಾಡಿದೆ. ಅ.7ರಂದು ದಕ್ಷಿಣ ಇಸ್ರೇಲ್​ ಮೇಲೆ ಹಮಾಸ್​ ನಡೆಸಿದ ದಾಳಿಯ ವೇಳೆ ಒತ್ತಾಯಾಳಾಗಿ ಇರಿಸಿಕೊಂಡಿದ್ದ 200ಕ್ಕೂ ಅಧಿಕ ಮಂದಿಯಲ್ಲಿ ಬಿಡುಗಡೆಯಾದ ಇಬ್ಬರು ಮಹಿಳೆಯರು ಕೂಡ ಸೇರಿದ್ದರು. ಮಾನವೀಯ ಮತ್ತು ಆರೋಗ್ಯ ಪರಿಸ್ಥಿತಿಯ ಆಧಾರದ ಮೇಲೆ ಇಬ್ಬರು ಮಹಿಳೆಯರನ್ನು ಹಮಾಸ್​ ಸ್ವತಂತ್ರಗೊಳಿಸಿರುವುದಾಗಿ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರ ಗುಂಪಿನ ಸಶಸ್ತ್ರ ವಿಭಾಗದ ವಕ್ತಾರರು ಟೆಲಿಗ್ರಾಮ್​ನಲ್ಲಿ ತಿಳಿಸಿದ್ದಾರೆ.

    ಇಬ್ಬರು ಇಸ್ರೇಲಿ ಮಹಿಳೆಯರನ್ನು ಗಾಜಾ ಗಡಿಯಲ್ಲಿರುವ ಕಿಬ್ಬುಟ್ಜ್ ನಿರ್ ಓಜ್​ನಿಂದ ಅವರ ಪತಿಯರ ಸಮೇತ ಅಪಹರಿಸಲಾಗಿತ್ತು. ಆದರೆ, ಗಂಡಂದಿರು ಮಾತ್ರ ಇನ್ನೂ ಹಮಾಸ್​ ಹಿಡಿತದಲ್ಲಿದ್ದಾರೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಕಳೆದ ಶುಕ್ರವಾರ ಅಮೆರಿಕ ಮೂಲದ ಅಮ್ಮ-ಮಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ ಇಬ್ಬರು ಮಹಿಳೆಯರನ್ನು ಹಮಾಸ್​ ಬಿಡುಗಡೆ ಮಾಡಿದ್ದು, ಇನ್ನು ಅನೇಕರನ್ನು ಬಂಧನದಿಂದ ಮುಕ್ತಗೊಳಿಸುವ ಸಾಧ್ಯತೆ ಇದೆ.

    ಅಂದಹಾಗೆ ಅ. 7ರಂದು ಗಾಜಾದಿಂದ ಇಸ್ರೇಲ್​ ಮೇಲೆ 5 ಸಾವಿರ ರಾಕೆಟ್​ಗಳಿಂದ ಹಮಾಸ್​ ಉಗ್ರರು ದಿಢೀರ್​ ದಾಳಿ ಮಾಡಿದಾಗಿನಿಂದ ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್​ ನಡುವೆ ಶುರುವಾಗಿರುವ ಯುದ್ಧ ಎರಡು ವಾರ ಕಳೆದು ಮೂರನೇ ವಾರದ ಮಧ್ಯಂತರಕ್ಕೆ ಬಂದಿದ್ದರೂ ಕೂಡ ಎರಡೂ ಕಡೆ ಮಾತ್ರ ಕದನ ಕಾರ್ಮೋಡ ತಿಳಿಯಾಗಿಲ್ಲ. ಈಗಾಗಲೇ ಈ ಯುದ್ಧಕ್ಕೆ ಎರಡೂ ಕಡೆಯಿಂದ 6 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದು ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. (ಏಜೆನ್ಸೀಸ್​)

    ರ‍್ಯಾಪಿಡ್ ಎಕ್ಸ್ ರೈಲಿನ ಸೌಲಭ್ಯ, ವೇಗವನ್ನು ಮೆಚ್ಚಿದ ಪ್ರಯಾಣಿಕರು; ರೈಲಿನ ವಿಶೇಷತೆಗಳೇನು?

    VIDEO| ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸಿಲುಕಲಿದೆ ಸರ್ಕಾರ; ದೇವರಗುಡ್ಡ ಕಾರ್ಣಿಕ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts