More

    ನಿಲುಗಡೆ ನೀಡದ ಬಸ್ ತಡೆದು ಆಕ್ರೋಶ

    ಚಾಮರಾಜನಗರ: ಚಾಮರಾಜನಗರ-ಮೈಸೂರು ಮುಖ್ಯರಸ್ತೆಯಲ್ಲಿರುವ ಬದನಗುಪ್ಪೆ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡದಿರುವುದನ್ನು ವಿರೋಧಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.


    ಗ್ರಾಮದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ತೆರಳಲು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂದಿನಂತೆ ಬಸ್‌ಗಾಗಿ ಕಾದು ನಿಂತಿದ್ದರು. ಇದೇ ಸಂದರ್ಭದಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಆಗಮಿಸಿದ ಕೆಎಸ್‌ಆರ್‌ಟಿ ಬಸ್ ಚಾಲಕ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳನ್ನು ಕಂಡು ಪ್ರಯಾಣಿಕರನ್ನು ನಿಲ್ದಾಣದ ದೂರದ ಸ್ಥಳದಲ್ಲೇ ಇಳಿಸಿ ಮುಂದೆ ಸಾಗಿದ್ದ.


    ಶಾಲೆ-ಕಾಲೇಜಿಗೆ ಹೋಗುವ ಧಾವಂತದಲ್ಲಿದ್ದ ವಿದ್ಯಾರ್ಥಿಗಳು ಅಲ್ಲಿಗೂ ತೆರಳಿ ಬಸ್ ಹತ್ತಲು ಹೋಗುತ್ತಿದ್ದಂತೆ ಬಸ್ ಮುಂದೆ ಹೋಗಿದೆ. ಇದರಿಂದ ಕುಪಿತಗೊಂಡ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬಸ್ ತಡೆದು ಚಾಲಕನಿಗೆ ತರಾಟೆ ತೆಗೆದುಕೊಂಡರು.


    ಬಸ್ ಮುಂದೆ ಹೋಗಲು ಬಿಡಲಿಲ್ಲ: ಈ ಹಿಂದಿನಿಂದಲೂ ಬದನಗುಪ್ಪೆ ಗ್ರಾಮದಲ್ಲಿ ಬಸ್ ನಿಲುಗಡೆಯ ಸಮಸ್ಯೆ ಇದೆ. ಈ ಸಂಬಂಧ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದಾರೆ. ಅದಾಗ್ಯೂ ಕೆಎಸ್‌ಆರ್‌ಟಿಸಿ ಬಸ್‌ಗಳು ಗ್ರಾಮದಲ್ಲಿ ನಿಲುಗಡೆ ನೀಡುತ್ತಿಲ್ಲ.
    ಇದರಿಂದ ಅನನುಕೂಲ ಎದುರಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮಂಗಳವಾರ ನಿಲುಗಡೆ ನೀಡದ ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ 1 ಗಂಟೆ ಕಾಲ ಪ್ರತಿಭಟನೆ ನಡೆಸಿದರು.


    ಇದೇ ವೇಳೆ ಮೈಸೂರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ನಿಲ್ಲಿಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೈವೇ ಪೆಟ್ರೋಲ್ ಮತ್ತು ಗ್ರಾಮಾಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಪಟ್ಟು ಬಿಡದ ಗ್ರಾಮಸ್ಥರು ಸಾರಿಗೆ ಅಧಿಕಾರಿಗಳು ಸ್ಥಳ ಆಗಮಿಸಬೇಕೆಂದು ಆಗ್ರಹಿಸಿದರು.


    ನಂತರ ಚಾಮರಾಜನಗರ ಕೆಎಸ್‌ಆರ್‌ಟಿಸಿ ಡಿಪೋ ಮೇನೇಜರ್ ಕುಮಾರ್ ನಾಯ್ಕ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸಾರ್ವಜನಿಕರ ಕ್ಷಮೆ ಕೋರಿ ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಗ್ರಾಮದ ನಿಲ್ದಾಣದಲ್ಲಿ ನಿಲುಗಡೆ ನೀಡುವುದಾಗಿ ಭರವಸೆ ನೀಡಿದರು. ಜತೆಗೆ ಒಬ್ಬ ಟಿಸಿ ನೇಮಕ ಮಾಡಿ ಮತ್ತೆ ಬಸ್ ನಿಲುಗಡೆಯ ಗೊಂದಲ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

    ವಿದ್ಯಾರ್ಥಿಗಳ ಕಥೆಯೇನು?: ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳುತ್ತಿದೆ. ಮಂಗಳವಾರ ಬದನಗುಪ್ಪೆ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಚಾಲಕನ ಧೋರಣೆ ಮುಂದುವರಿದರೆ ಪರೀಕ್ಷೆ ಬರೆಯಲು ಕೇಂದ್ರಗಳತ್ತ ತೆರಳುವ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಕಾಡುತ್ತಿದೆ.

    ಹಣ ನೀಡಿಯೇ ಬಸ್ ಪಾಸ್‌ಗಳನ್ನು ಮಾಡಿಸಿಕೊಂಡಿದ್ದರೂ ಕೆಲ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ವಿದ್ಯಾರ್ಥಿಗಳನ್ನು ನೋಡಿಯೋ ನೋಡದಂತೆ ತೆರಳುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚಾಮರಾಜನಗರದಿಂದ ಬದನಗುಪ್ಪೆ ಗ್ರಾಮದ ರೈಲು ನಿಲ್ದಾಣದವರೆಗೆ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts