More

    ದ.ಕೊರಿಯಾದಲ್ಲಿ ಹ್ಯಾಲೋವೀನ್ ದುರಂತ: ಕಾಲ್ತುಳಿತಕ್ಕೆ 149 ಮಂದಿ ಸಾವು, ಪ್ರಜ್ಞೆಯಿಲ್ಲದೆ ಬೀದಿಗಳಲ್ಲಿ ಬಿದ್ದಿರುವ ಜನ

    ಸಿಯೋಲ್​: ಹ್ಯಾಲೋವೀನ್​​ ಹಬ್ಬದ ದಿನದಂದು ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಸುಮಾರು 149 ಮಂದಿ ದುರಂತ ಸಾವಿಗೀಡಾಗಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ.

    ಹ್ಯಾಲೋವೀನ್​ ಹಬ್ಬ ಆಚರಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಂದಹಾಗೆ ಪ್ರತಿವರ್ಷ ಅಕ್ಟೋಬರ್ 31 ರಂದು ಕೆಲವು ಭಾಗಗಳಲ್ಲಿ ಹ್ಯಾಲೋವೀನ್ ದಿನಾಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಆತ್ಮಗಳು ಮತ್ತು ದೆವ್ವಗಳಂತೆ ಜನರು ಸಿಂಗಾರಗೊಂಡು ಸತ್ತವರಿಗೆ ಸಂತರ್ಪಣೆ ಸಲ್ಲಿಸುತ್ತಾರೆ.

    ಕಿರಿದಾದ ಬೀದಿಗಳಲ್ಲಿ ಅವ್ಯವಸ್ಥೆಯ ನಡುವೆ ಕೆಲವರು ಅಘಾತಕ್ಕೊಳಗಾಗಿ ಹೃದಯಾಘಾತಕ್ಕೀಡಾಗಿದ್ದು, ಅವರನ್ನು ಮತ್ತೆ ಬದುಕಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿರುವುದು ಘಟನೆಗೆ ಸಂಬಂಧಿಸಿದ ಕೆಲವು ವಿಡಿಯೋಗಳಲ್ಲಿ ಕಂಡುಬಂದಿದೆ. ನೂರಾರು ಅಂಗಡಿಗಳು ಮತ್ತು ಪಾರ್ಟಿ ಸ್ಥಳಗಳನ್ನು ಹೊಂದಿರುವ ಮೆಗಾಸಿಟಿಯ ಕೇಂದ್ರ ಜಿಲ್ಲೆ ಇಟಾವಾನ್‌ನ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು 1 ಲಕ್ಷ ಜನರು ಶನಿವಾರ ರಾತ್ರಿ ಒಂದೆಡೆ ಸೇರಿದ್ದಾಗ ಈ ಅವಘಡ ನಡೆದಿದೆ.

    ಕೋವಿಡ್​ ಕಾರಣದಿಂದ ಎರಡು ವರ್ಷ ಹ್ಯಾಲೋವೀನ್​ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ವರ್ಷ ಮತ್ತೆ ಆಚರಣೆಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ತುಂಬಾ ಉತ್ಸಾಹದಿಂದ ಹಬ್ಬ ಆಚರಣೆ ಮಾಡಲು ಹೋಗಿ ಕೆಲವೊಂದು ಎಡವಟ್ಟು ಮಾಡಿಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ.

    ಸ್ಥಳೀಯ ಕಾಲಮಾನ ಪ್ರಕಾರ ಮಧ್ಯರಾತ್ರಿಗೂ ಮುನ್ನವೇ ಹತ್ತಾರು ಜನರು ಹೊಟೇಲ್ ಬಳಿ ಪ್ರಜ್ಞಾಹೀನರಾಗಿ ಬಿದ್ದಿದ್ದರು ಎಂದು ದಿ ಕೊರಿಯಾ ಹೆರಾಲ್ಡ್ ವರದಿ ಮಾಡಿದೆ. ಅಗ್ನಿಶಾಮಕ ಅಧಿಕಾರಿಗಳು ರಾತ್ರಿ 10.30 ರ ಸುಮಾರಿಗೆ ಜನರಿಗೆ ಉಸಿರಾಟದ ತೊಂದರೆಯಾಗುತ್ತಿರುವ ಬಗ್ಗೆ ಮೊದಲ ಕರೆ ಸ್ವೀಕರಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ನೂರಾರು ಸಂಖ್ಯೆಯಲ್ಲಿ ಜನರು ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಪೊಲೀಸರು ನೋಡಿದ್ದಾರೆ.

    ಪ್ರಜ್ಞಾಹೀನರಾಗಿ ಬಿದ್ದಿದ್ದವರ ಎದೆಯನ್ನು ಅದುಮಿ ಸಿಪಿಆರ್​ ಪ್ರಯತ್ನದ ಮೂಲಕ ಬದುಕಿಸಲು ಪೊಲೀಸರು ಮತ್ತು ಸ್ಥಳೀಯರು ಪ್ರಯತ್ನ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅನೇಕರನ್ನು ಈಗಾಗಲೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಾರ್ವಜನಿಕ ಆಡಳಿತ ಮತ್ತು ಭದ್ರತಾ ಸಚಿವರ ನೇತೃತ್ವದಲ್ಲಿ ಎಲ್ಲಾ ಸಂಬಂಧಿತ ಸಚಿವಾಲಯಗಳು ಮತ್ತು ಏಜೆನ್ಸಿಗಳು ಸಂತ್ರಸ್ತರಿಗೆ ತ್ವರಿತವಾಗಿ ನೆರವು ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್-ಯೋಲ್ ಅವರು ವಕ್ತಾರರ ಮೂಲಕ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ಭೂತದ ಪಾತ್ರದಲ್ಲಿ ಕತ್ರಿನಾ; ದೆವ್ವಗಳ ಕಥೆಯನ್ನೂ ಹೇಳಬೇಡಿ ಅಂದಿದ್ದೇಕೆ ನಟಿ?

    ದಲಿತ ಉದ್ಯಮಿಗಳಿಗೆ ನೆರವು: ನಿವೇಶನ ಅನುಪಾತ ಬದಲು; ಸಿಎಂ ಬೊಮ್ಮಾಯಿ ಸಮ್ಮತಿ

    ಜನಸ್ನೇಹಿ ರೇಷನ್ ಅಂಗಡಿ: ಪಡಿತರ ಶಾಪ್​ನಲ್ಲೇ ಬ್ಯಾಂಕ್ ಖಾತೆ, ಇಂಟರ್​ನೆಟ್, ಗ್ಯಾಸ್ ಸೇವೆ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts