More

    ಹಳ್ಳಿಗಳಲ್ಲಿಯೂ ಇನ್ಮುಂದೆ ಮನೆ ಮನೆಗೆ ಬರಲಿದೆ ಕಸ ಸಂಗ್ರಹ ಗಾಡಿ

    ರಾಮನಗರ: ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕಸ ಸಂಗ್ರಹಿಸುವ ಕೆಲಸ ಇನ್ನು ಮುಂದೆ ಗ್ರಾಮೀಣ ಭಾಗಕ್ಕೂ ವ್ಯಾಪಿಸಲಿದೆ.

    ಸ್ವಚ್ಛ ಭಾರತ್ ಮಿಷನ್‌ನಡಿ ಶೌಚಗೃಹ ನಿರ್ಮಾಣ ಮಾಡುವ ಮೂಲಕ ಬಯಲು ಶೌಚ ಮುಕ್ತ ಗ್ರಾಮಗಳನ್ನು ನಿರ್ಮಿಸಿದ್ದ ಸರ್ಕಾರ ಇದೀಗ ಕಸ ಸಂಗ್ರಹ ಮತ್ತು ವಿಲೇವಾರಿ ಕಡೆಗೂ ಗಮನಹರಿಸಿದೆ. ಇದರ ಭಾಗವಾಗಿ ಜಿಲ್ಲೆಯ 41 ಗ್ರಾಪಂಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ.

    ಮನೆ ಬಾಗಿಲಿಗೆ ವಾಹನ: ಸ್ವಚ್ಛ ಭಾರತ್ ಮಿಷನ್ ಪ್ಲೆಸ್ ಯೋಜನೆಯಡಿ ಪ್ರತಿ ಗ್ರಾಪಂಗೆ ಮೂರು ಚಕ್ರದ ಒಂದು ಟಿಪ್ಪರ್ ಒದಗಿಸಲಿದ್ದು, ಈ ವಾಹನದೊಟ್ಟಿಗೆ ಪ್ರತಿ ಮನೆ ಬಾಗಿಲಿಗೆ ಬರುವ ಸಿಬ್ಬಂದಿ ಹಸಿ ಮತ್ತು ಒಣ ಕಸ ಸಂಗ್ರಹಿಸಲಿದ್ದಾರೆ. ಸಂಗ್ರಹಕ್ಕೂ ಮುನ್ನ ಒಣ ಮತ್ತು ಹಸಿ ಕಸ ಸಂಗ್ರಹಕ್ಕೆ ಪ್ಲಾಸ್ಟಿಕ್ ಬಿನ್‌ಗಳನ್ನು ಒದಗಿಸಲಾಗುತ್ತದೆ.

    ಶೆಡ್ ನಿರ್ಮಾಣ: ಗ್ರಾಪಂಗಳಲ್ಲಿ ಹಸಿ ಕಸ ನಿರ್ವಹಣೆ ಪ್ರತಿಮನೆಯಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಇದರ ಹೊರತಾಗಿಯೂ ಸಂಗ್ರಹವಾಗುವ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಬೇರ್ಪಡಿಸಲು ಶೆಡ್‌ಗಳ ನಿರ್ಮಾಣದ ಅಗತ್ಯವಿದೆ. ಆದರೆ ಜಾಗದ ಕೊರತೆಯಿಂದಾಗಿ ಕಸವಿಲೇವಾರಿ ಮತ್ತು ತ್ಯಾಜ್ಯ ಬೇರ್ಪಡಿಸಲು ಜಾಗ ಗುರುತಿಸಿ ಅಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

    ಜಾಗ ಇಲ್ಲದ ಕಡೆಗಳಲ್ಲಿ ಪಾಳು ಬಿದ್ದಿರುವ ಸರ್ಕಾರದ ಇತರ ಇಲಾಖೆಗಳ ಜಾಗ ಬಳಕೆ ಮಾಡಲಾಗುತ್ತಿದ್ದು, ಪ್ರಸ್ತುತ 41 ಕಡೆಗಳಲ್ಲಿ ಜಾಗದ ಲಭ್ಯತೆ ಇರುವುದರಿಂದ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಜಾಗದ ಲಭ್ಯತೆ ಆಧರಿಸಿ ಉಳಿದ ಗ್ರಾಮ ಪಂಚಾಯಿತಿಗಳಲ್ಲೂ ಯೋಜನೆ ಜಾರಿಯಾಗಲಿದೆ.

    ಗ್ರಾಪಂಗೂ ಆರ್ಥಿಕ ಮೂಲ: ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ಯೋಜನೆಯಿಂದ ಸ್ವಚ್ಛತೆ ಹೆಚ್ಚಿಸುವುದು ಒಂದು ಭಾಗವಾದರೆ ಮತ್ತೊಂದೆಡೆ ಆಯಾ ಗ್ರಾಪಂಗಳ ಆದಾಯದ ಮೂಲವೂ ದೊರೆತಂತೆ ಆಗುತ್ತದೆ. ಹಸಿ ಕಸವನ್ನು ತಿಪ್ಪೆಗಳಿಗೆ ಹಾಕಿ ಗೊಬ್ಬರ ಮಾಡಿಕೊಂಡು ಜಮೀನುಗಳಿಗೆ ಬಳಕೆ ಮಾಡಿಕೊಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಪ್ಲಾಸ್ಟಿಕ್ ಸೇರಿ ಘನ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಈ ಕಸವನ್ನು ಗ್ರಾಪಂನಿಂದ ಸಂಗ್ರಹಿಸಿ, ಹರಾಜು ಮೂಲಕ ಮಾರಾಟ ಮಾಡಿದರೆ ಗ್ರಾಪಂಗೆ ಆದಾಯವೂ ದೊರೆಯಲಿದೆ ಎನ್ನುವುದು ಜಿಪಂ ಸಿಇಒ ಇಕ್ರಂ ಅಭಿಪ್ರಾಯ.

    ಬೇರೆ ಜಿಲ್ಲೆಯಲ್ಲಿಯೂ ಜಾರಿ: ಈಗಾಗಲೇ ಮಂಗಳೂರು- ಉಡುಪಿ ಜಿಲ್ಲೆಯ ಗ್ರಾಪಂಗಳಲ್ಲಿ ಈ ಯೋಜನೆ ಯಶಸ್ವಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪ್ರವಾಸ ಆಯೋಜಿಸುವ ಮೂಲಕ ಯೋಜನೆ ಜಾರಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಜನರಿಂದ ದೊರೆತ ಸಹಕಾರದ ಬಗ್ಗೆಯೂ ತಿಳಿವಳಿಕೆ ನೀಡಲಾಗಿದೆ. ಪ್ರಥಮ ಹಂತದಲ್ಲಿ ಜಿಲ್ಲೆಯ 41 ಗ್ರಾಪಂಗಳಲ್ಲಿ ಮನೆ ಮನೆ ಕಸ ಸಂಗ್ರಹಿಸುವ ಯೋಜನೆ ಜಾರಿಯಾಗಲಿದೆ. ಕನಕಪುರ ತಾಲೂಕಿನ 10, ರಾಮನಗರ 7, ಮಾಗಡಿ 9 ಮತ್ತು ಚನ್ನಪಟ್ಟಣ ತಾಲೂಕಿನ 16 ಗ್ರಾಪಂಗಳಲ್ಲಿ ಯೋಜನೆ ಜಾರಿಯಾಗಲಿದೆ. ಈಗಾಗಲೇ ಮತ್ತೆ 25 ಗ್ರಾಪಂಗಳಲ್ಲಿ ಜಾಗ ಗುರುತಿಸಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿಯೂ ಯೋಜನೆಗೆ ಅನುಮತಿ ದೊರೆಯಲಿದೆ.

    ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇದು ಎರಡನೇ ಹಂತದ ಕಾರ್ಯಕ್ರಮವಾಗಿದ್ದು, ಮನೆ ಮನೆ ಕಸ ಸಂಗ್ರಹ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಮಾರ್ಚ್ ವೇಳೆಗೆ 41 ಗ್ರಾಪಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ.
    -ಇಕ್ರಂ, ಜಿಪಂ ಸಿಇಒ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts