More

    ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅರ್ಧಕ್ಕರ್ಧ ಹುದ್ದೆಗಳು ಖಾಲಿ!

    ಸುಭಾಸ ಧೂಪದಹೊಂಡ ಕಾರವಾರ
    ತಜ್ಞ ವೈದ್ಯರು ಹಾಗೂ ಕೆಳ ಹಂತದ ಸಿಬ್ಬಂದಿಯ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಳಲುತ್ತಿವೆ. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಟ್ಟು 2430 ಅಧಿಕಾರಿ, ಸಿಬ್ಬಂದಿ ಇರಬೇಕು. ಆದರೆ, 1264 ಹುದ್ದೆಗಳು ಖಾಲಿ ಇವೆ. ಇದರಿಂದ ಆಸ್ಪತ್ರೆ ಹಾಗೂ ಪಿಎಚ್​ಸಿಗಳಲ್ಲಿ ಜನರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಇದು ಜಿಲ್ಲೆಯ ಜನರು ಹೊರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ.
    ಕೆಲ ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಪಿಎಚ್​ಸಿಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿತ್ತು. ಒಬ್ಬ ವೈದ್ಯರನ್ನು ಎರಡು-ಮೂರು ಪಿಎಚ್​ಸಿಗಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರೊನೋತ್ತರ ಅವಧಿಯಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಕಾರವಾರ ಮೆಡಿಕಲ್ ಕಾಲೇಜ್​ನಿಂದ ಎಂಬಿಬಿಎಸ್ ಮುಗಿಸಿದ ತರಬೇತಿ ನಿರತ ವೈದ್ಯರ ನಿಯೋಜನೆಯಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ, ತಾಲೂಕು ಹಂತದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಅಲ್ಲದೆ, ಸಿ ದರ್ಜೆಯ ಸಿಬ್ಬಂದಿಯ ಕೊರತೆ ತೀವ್ರವಾಗಿದೆ.
    ಪಿಎಚ್​ಸಿಗಳಿಗೆ ವೈದ್ಯರಿಲ್ಲ: ಜಿಲ್ಲೆಯಲ್ಲಿ 82 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಒಟ್ಟಾರೆ ಜಿಲ್ಲೆಯಲ್ಲಿ 86 ಸಾಮಾನ್ಯ ಕರ್ತವ್ಯ ಅಧಿಕಾರಿಗಳ ಹುದ್ದೆ ಇದೆ. ಆದರೆ, ಸದ್ಯ 78 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 8 ಪಿಎಚ್​ಸಿಗಳಿಗೆ ವೈದ್ಯರಿಲ್ಲ. ಶಿರಸಿ, ಯಲ್ಲಾಪುರ, ಭಟ್ಕಳ ಮುಂತಾದೆಡೆ ಕೆಲವು ಗ್ರಾಮೀಣ ಭಾಗದ ಪಿಎಚ್​ಸಿಗಳಿಗೆ ಕಾಯಂ ವೈದ್ಯರಿಲ್ಲ. ವೈದ್ಯರು ವಾರದ ಮೂರು ದಿನ ಮಾತ್ರ ಬಂದು ಹೋಗುವ ಪರಿಸ್ಥಿತಿ ಇದೆ. ಉಳಿದ ದಿನಗಳಲ್ಲಿ ಆರೋಗ್ಯ ಸಿಬ್ಬಂದಿಯೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ನಿಭಾಯಿಸುತ್ತಾರೆ.
    ಸಹಾಯಕರ ಕೊರತೆ: ಬಿ ಹಂತದ ಹುದ್ದೆಗಳ ಕೊರತೆ ಅಷ್ಟೊಂದು ಇಲ್ಲ. ಆದರೆ, ಸಿ ಹಾಗೂ ಡಿ ದರ್ಜೆಯ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ 32 ಹುದ್ದೆಗಳಲ್ಲಿ 21 ಖಾಲಿ ಇದೆ. ಪ್ರಮುಖವಾಗಿ ತಾಲೂಕು ಆಸ್ಪತ್ರೆಗಳಲ್ಲಿ 24ರಲ್ಲಿ 12 ನೇತ್ರ ಸಹಾಯಕರ ಹುದ್ದೆಗಳಿಲ್ಲ. ದ್ವಿತೀಯ ದರ್ಜೆ ಶುಶ್ರೂಷಾ ಅಧೀಕ್ಷಕರ ಎಲ್ಲ 12 ಹುದ್ದೆಗಳು ಖಾಲಿ ಇವೆ. ಕಿರಿಯ ವೈದ್ಯೇತರ ಮೇಲ್ವಿಚಾರಕರ ಎಲ್ಲ 13 ಹುದ್ದೆಗಳು ಖಾಲಿ ಇವೆ. ಪ್ರಯೋಗಾಲಯ ತಂತ್ರಜ್ಞರ 18 ಹುದ್ದೆಗಳಲ್ಲಿ 15 ಖಾಲಿ ಇವೆ. ಕಿರಿಯ ಪ್ರಯೋಗಾಲಯ ತಂತ್ರಜ್ಞರ 79 ರಲ್ಲಿ 41 ಹುದ್ದೆಗಳು ಖಾಲಿ ಇವೆ. ಹಿರಿಯ ಪುರುಷ ಆರೋಗ್ಯ ಸಹಾಯಕರ 60 ಹುದ್ದೆಗಳಲ್ಲಿ 40 ಖಾಲಿ ಇವೆ. ಕಿರಿಯ ಪುರುಷ ಆರೋಗ್ಯ ಸಹಾಯಕರ 215 ಹುದ್ದೆಗಳಲ್ಲಿ 174 ಖಾಲಿ ಇವೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕರ 361 ಹುದ್ದೆಗಳಲ್ಲಿ 118 ಹುದ್ದೆಗಳು ಖಾಲಿ ಇವೆ. ಫಾರ್ಮಸಿ ಅಧಿಕಾರಿಗಳ 112 ರಲ್ಲಿ 72 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಗ್ರೂಪ್ ಸಿ ನಲ್ಲಿ 1585 ಹುದ್ದೆಗಳ ಪೈಕಿ 736 ಹುದ್ದೆಗಳು ಖಾಲಿ ಇವೆ.
    28 ತಜ್ಞ ವೈದ್ಯರಿಲ್ಲ: ಜಿಲ್ಲೆಯಲ್ಲಿ ದಾಂಡೇಲಿಯೂ ಸೇರಿ ಒಟ್ಟು 11 ತಾಲೂಕು ಆಸ್ಪತ್ರೆಗಳಿವೆ. (ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮೆಡಿಕಲ್ ಕಾಲೇಜ್​ನ ಅಡಿ ಬರುವುದರಿಂದ ಇದು ಆರೋಗ್ಯ ಇಲಾಖೆ ವ್ಯಾಪ್ತಿಗೆ ಬಾರದು.) ಅದರಲ್ಲಿ 39 ಮುಖ್ಯ ವೈದ್ಯಾಧಿಕಾರಿ ಹುದ್ದೆಗಳಿದ್ದು, ಅದರಲ್ಲಿ 10 ಜನ ಮಾತ್ರ ಇದ್ದಾರೆ. 29 ಹುದ್ದೆಗಳು ಖಾಲಿ ಇವೆ. ಇನ್ನು ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಸೂತಿ, ಕಣ್ಣು, ಕಿವಿ-ಮೂಗು -ಗಂಟಲು, ಮಕ್ಕಳ ವಿಭಾಗ, ಚರ್ಮ, ಶಸ್ತ್ರ ಚಿಕಿತ್ಸೆ, ಅರಿವಳಿಕೆ ಹೀಗೆ ವಿವಿಧ ವಿಭಾಗಗಳಲ್ಲಿ ಪರಿಣತಿ ಪಡೆದ 118 ತಜ್ಞ ವೈದ್ಯರ ಅವಶ್ಯಕತೆ ಇದೆ. ಆದರೆ, 90 ಜನ ಮಾತ್ರ ಇದ್ದಾರೆ. ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಅತೀ ಅಗತ್ಯವಿರುವ ಪ್ರಸೂತಿ ತಜ್ಞರೇ ಇಲ್ಲ. ಇನ್ನು ವಿವಿಧ ಆಸ್ಪತ್ರೆಗಲ್ಲಿ ಒಟ್ಟು 28 ತಜ್ಞ ವೈದ್ಯರ ಕೊರತೆ ಇದೆ. ಇಡೀ ತಾಲೂಕಿನ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುವ 5 ತಾಲೂಕು ಆರೋಗ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ.


    ಈ ಮೊದಲಿಗೆ ಹೋಲಿಸಿದರೆ ವೈದ್ಯರ ಕೊರತೆ ಕಡಿಮೆಯಾಗಿದೆ. ಆದರೂ ಕೆಲವೆಡೆ ಹುದ್ದೆಗಳು ಖಾಲಿ ಇದ್ದು, ಹೊಂದಾಣಿಕೆ ಮಾಡಿ ಜನರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದೇವೆ.
    | ಡಾ. ಶರದ ನಾಯಕ,. ಡಿಎಚ್​ಒ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts