More

    ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

    ಹಳೇಬೀಡು: ಪ್ರಾಚ್ಯ ವಸ್ತು ಸಂರಕ್ಷಣಾ ಕಾಯ್ದೆ ಅನ್ವಯ ರಾಷ್ಟ್ರೀಯ ಸ್ಮಾರಕಗಳ ಸುತ್ತ ಯಾವುದೇ ಆಧುನಿಕ ಕಟ್ಟಡ ನಿರ್ಮಿಸುವಂತಿಲ್ಲ. ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಎನ್.ವಿ.ನಟೇಶ್ ಪಿಡಿಒ ರವಿಕುಮಾರ್ ಅವರಿಗೆ ಸೂಚಿಸಿದರು.

    ವಿಜಯವಾಣಿಯಲ್ಲಿ ಸೋಮವಾರ ಪ್ರಕಟವಾದ ‘ಅವಸಾನದತ್ತ ಸ್ಮಾರಕಗಳು!’ ವಿಶೇಷ ವರದಿಗೆ ಎಚ್ಚೆತ್ತ ಅಧಿಕಾರಿಗಳು ಮಂಗಳವಾರ ಹಳೇಬೀಡು ಸಮೀಪದ ಬಸ್ತಿಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಾಚೀನ ಕೋಟೆ ಅವಶೇಷಗಳನ್ನು ಕೆಡವಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಪರವಾನಗಿ ಕೊಟ್ಟಿರುವುದಕ್ಕೆ ಪಿಡಿಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಜೈನ ಬಸದಿಯ ಹಿಂಭಾಗದಲ್ಲಿರುವ ಭೂಮಿಯಲ್ಲಿ ಹುದುಗಿರುವ ಜೈನ ಸ್ಮಾರಕಗಳ ಅವಶೇಷ, ದ್ವಾರಸಮುದ್ರ ಕೆರೆ ಪಕ್ಕದಲ್ಲಿರುವ ಸುರಂಗ ಮಾರ್ಗ ಹಾಗೂ ಅರಮನೆಯ ತಳಪಾಯದ ಆವರಣವನ್ನು ತಹಸೀಲ್ದಾರ್ ವೀಕ್ಷಿಸಿದರು.

    ಪುರಾತತ್ವ ಇಲಾಖೆ ನೌಕರರೊಂದಿಗೆ ಪ್ರಾಚೀನ ಸ್ಮಾರಕಗಳ ಪ್ರದೇಶ ಪರಿಶೀಲಿಸಿದ ತಹಸೀಲ್ದಾರ್ ನಟೇಶ್, ಕೋಟೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಬಾರದು. ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಗ್ರಾಮ ಪಂಚಾಯಿತಿಯಿಂದ ಪರವಾನಗಿ ನೀಡಬಾರದು ಎಂದು ನಿರ್ದೇಶನ ನೀಡಿದರು.

    ಪ್ರಾಚೀನ ಕಾಲದ ಕೋಟೆ ಹಾಗೂ ಸ್ಮಾರಕಗಳ ಬಳಿ ಹಕ್ಕಿನ ಭೂಮಿ ಇದ್ದರೂ ಕಟ್ಟಡ ನಿರ್ಮಾಣ ಮಾಡಬಾರದು. ಹಿಡುವಳಿ ಭೂಮಿಯ ಸುತ್ತಮುತ್ತ ಸ್ಮಾರಕಗಳು ಆವೃತವಾಗಿದ್ದರೆ ಅವುಗಳಿಗೆ ಹಾನಿಯಾಗದಂತೆ ಕೃಷಿ ಕಾಯಕ ನಡೆಸಬೇಕು. ನಮ್ಮ ನಿತ್ಯ ಜೀವನದ ನಡುವೆ ಇತಿಹಾಸದ ಅವಶೇಷಗಳ ಉಳಿವಿಗೂ ಗಮನ ನೀಡಬೇಕು ಎಂದು ನಟೇಶ್ ತಿಳಿಸಿದರು.

    ಪ್ರಾಚೀನ ಸ್ಮಾರಕಗಳು ರಾಜರ ಕಾಲದಲ್ಲಿಯೇ ನಿರ್ಮಾಣವಾಗಿವೆ. ನಂತರದ ದಿನದಲ್ಲಿ ಊರು ನಿರ್ಮಾಣವಾಗಿದೆ. ಸ್ಮಾರಕ ಸ್ಥಳದ ಬಳಿ ಸೂರು ಮಾಡಿಕೊಂಡ ಮೇಲೆ ಅವುಗಳನ್ನು ಹಾಳುಗೆಡವದೆ ವಾಸ ಮಾಡಬೇಕು ಎಂದು ತಮ್ಮನ್ನು ಭೇಟಿಯಾದ ಗ್ರಾಮಸ್ಥರಿಗೆ ಹೇಳಿದರು.

    ಸ್ಮಾರಕಗಳಿಂದ 300 ಮೀ. ಅಂತರದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅವಕಾಶ ಇಲ್ಲ. ಸ್ಮಾರಕದ ಬಳಿ ಕಟ್ಟಡ ನಿರ್ಮಿಸುವುದಕ್ಕಿಂತ ಮೊದಲು ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಅಳತೆ ಮಾಡಿಸಬೇಕು. ಸ್ಥಳೀಯ ಸಂಸ್ಥೆ ಮಾತ್ರವಲ್ಲದೆ, ಕೇಂದ್ರ ಪುರಾತತ್ವ ಇಲಾಖೆಯಿಂದಲೂ ಅನುಮತಿ ಪಡೆಯಬೇಕು. ಕಾನೂನು ಬದ್ಧವಾಗಿ ಕಟ್ಟಡ ನಿರ್ಮಿಸುವವರಿಗೆ ಅಡ್ಡಿ ಮಾಡುವುದಿಲ್ಲ ಎಂದು ತಿಳಿಸಿದರು. ತಾಪಂ ಇಒ ರವಿಕುಮಾರ್, ಎಸ್‌ಐ ಶಕುಂತಲಮ್ಮ, ಪಿಡಿಒ ರವಿಕುಮಾರ್, ಗ್ರಾಪಂ ಸದಸ್ಯ ಬಿ.ಬಿ. ಭೈರೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts