More

    ಮುಳಬಾಗಿಲು ನಗರದ ಸುತ್ತಮುತ್ತಲಿರುವ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಎಕ್ಸ್‌ಪ್ರೆಸ್ ವಿದ್ಯುತ್

    ಮುಳಬಾಗಿಲು: ನಗರ ಪ್ರದೇಶದಲ್ಲಿ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಎಕ್ಸ್‌ಪ್ರೆಸ್ ವಿದ್ಯುತ್ ಲೈನನ್ನು ಸೀಗೇನಹಳ್ಳಿ ಸೇರಿ ನಗರದ ಸುತ್ತಮುತ್ತಲಿರುವ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸಿ ಬೇಸಿಗೆಯಲ್ಲಿ ನೀರಿಗೆ ಅಭಾವ ತಲೆದೋರದಂತೆ ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

    ನಗರದ ಬೆಸ್ಕಾಂ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಯ ಮತ್ತು ಪಾಲನಾ ಉಪವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಗರದಾದ್ಯಂತ ಎ.ಬಿ. ಕೇಬಲ್ ಅಳವಡಿಸಲು ಅನುಮೋದನೆ ನೀಡಲಾಗಿದೆ. ನಾನು ಬೆಸ್ಕಾಂ ಅಧಿಕಾರಿಯಾಗಿದ್ದಾಗ ಚಿಂತಾಮಣಿ ನಗರದಲ್ಲಿ ಕೇಬಲ್ ಅಳವಡಿಕೆ ಯಶಸ್ವಿಗೊಳಿಸಲಾಗಿತ್ತು. ಇದಲ್ಲದೆ ಎಲ್.ಟಿ. ಕೇಬಲ್ ಅಳವಡಿಸಿ ವಿದ್ಯುತ್ ಸಮಸ್ಯೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ವಿದ್ಯುತ್ ಬಳಕೆ ಸ್ಲಾಬ್ ಮೇಲೆ ದರ ನಿಗದಿಪಡಿಸಲಾಗಿದೆ. ಬೆಸ್ಕಾಂ ಉತ್ತಮವಾಗಿ ಗ್ರಾಹಕರ ಸೇವೆ ಮಾಡುತ್ತಿದೆ. ಸುಸಜ್ಜಿತ ಕಟ್ಟಡದಲ್ಲಿ ಇಂದಿನಿಂದ ಕಾರ್ಯನಿರ್ವಹಿಸಲಿದ್ದು, ಕೋಲಾರ ಜಿಲ್ಲೆಯಲ್ಲೇ ಮಾದರಿ ಹವಾನಿಯಂತ್ರಿತ ಕಟ್ಟಡವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕಾರ್ಯೋನ್ಮುಖರಾಗಲು ಅನುಕೂಲವಾಗಲಿದೆ ಎಂದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರೈತರು ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಹಳ್ಳಿಗಳಲ್ಲಿ ಈಗಲೂ ಟಿಸಿ ನಿರ್ವಹಣೆ ಸರಿಯಿಲ್ಲ, ವಿದ್ಯುತ್ ತಂತಿ ನೇತಾಡುತ್ತಿವೆ. ಇವುಗಳನ್ನು ಸರಿಪಡಿಸಲು ಗಮನಹರಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

    ಖಾಸಗಿ ಜಮೀನು ಸೇರಿ ರಸ್ತೆ ಪಕ್ಕ ಅವೈಜ್ಞಾನಿಕವಾಗಿ ಈಗಲೂ ಬೆಸ್ಕಾಂನವರು ಕಂಬ ಹಾಕಿ ವಿದ್ಯುತ್ ಸಂಪರ್ಕ ನೀಡಿದ್ದು, ಅದನ್ನು ರಸ್ತೆ ದುರಸ್ತಿ ಮತ್ತಿತರ ಸಂದರ್ಭಗಳಲ್ಲಿ ಬದಲಾವಣೆ ಮಾಡಲು ಅರ್ಜಿ ನೀಡಿದರೂ ಗಮನಹರಿಸುವುದಿಲ್ಲ. ಕನಿಷ್ಠ 25 ವರ್ಷ ಮುಂದಾಲೋಚನೆಯಿಂದ ಕಾಮಗಾರಿ ಅನುಷ್ಠಾನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಜಿ.ಅಶೋಕ್‌ಕುಮಾರ್, ಪ್ರಭಾರ ಮುಖ್ಯ ಇಂಜಿನಿಯರ್ ಎನ್.ಜಿ.ಪ್ರಸನ್ನ, ಕೋಲಾರ ವೃತ್ತ ಅಧೀಕ್ಷಕ ಇಂಜಿನಿಯರ್ ಕೆ.ಎಚ್.ಗುರುಸ್ವಾಮಿ, ಕೆಜಿಎಫ್ ಉಪವಿಭಾಗದ ಇಇ ಟಿ.ಆರ್.ಅಶೋಕ್, ಎಇಇ ವಿ.ಎಂ.ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ರಾಜಕುಮಾರ್, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಇಒ ಎಂ.ಬಾಬು ಮತ್ತಿತರರು ಇದ್ದರು.

    ಕರೊನಾ ಲಾಕ್‌ಡೌನ್‌ನಿಂದ ಮಾರ್ಚ್, ಏಪ್ರಿಲ್ ತಿಂಗಳ ಬಿಲ್‌ಗಳನ್ನು ಗ್ರಾಹಕರಿಗೆ ನೀಡಿಲ್ಲ. ಫೆಬ್ರವರಿಯಲ್ಲಿ ಉಪಯೋಗಿಸಿದ ವಿದ್ಯುತ್‌ಗೆ ಬಿಲ್ ಪಾವತಿ ಮಾಡಿದ್ದು, ಈಗ 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಬೆಸ್ಕಾಂನಿಂದ ಯಾವುದೇ ಸಮಸ್ಯೆಯಿಲ್ಲ. ಉಪಯೋಗಿಸಿದ ವಿದ್ಯುತ್‌ಗೆ ಬಿಲ್ ನೀಡಲಾಗುತ್ತಿದೆ.
    ಎಂ.ಬಿ.ರಾಜೇಶ್‌ಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

    ಸಮರ್ಪಕ ವಿದ್ಯುತ್ ಪೂರೈಸಿ: ಬೆಸ್ಕಾಂ ಇಲಾಖೆ ಸರ್ವರಿಗೂ ಸೇವೆ ಸಲ್ಲಿಸುತ್ತಿದ್ದು, ದಿನದ 24 ಗಂಟೆ ಅಡೆ ತಡೆಗಳಿಲ್ಲದೆ ವಿದ್ಯುತ್ ಪೂರೈಸಲು ಸರ್ಕಾರ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಚ್.ನಾಗೇಶ್ ಸೂಚಿಸಿದರು.

    ಬೆಸ್ಕಾಂ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಬೇಸಿಗೆಯಲ್ಲಿ ವಿದ್ಯುತ್ ಅಭಾವವಾಗದಂತೆ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ವಿದ್ಯುತ್ ಅಸಮರ್ಪಕ ಪೂರೈಕೆ ಎಂಬ ದೂರುಗಳು ಬರಬಾರದು ಎಂದರು.
    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಗ್ರಾಹಕರ ಮತ್ತು ರೈತರ ಸಭೆಗಳನ್ನು ತಿಂಗಳಿಗೊಮ್ಮೆನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಟಿಸಿಗಳು ಸುಟ್ಟ 72 ಗಂಟೆಗಳ ಒಳಗಡೆ ಮರು ಸ್ಥಾಪನೆ ಮಾಡುವ ಮೂಲಕ ಜನಸ್ನೇಹಿ ಬೆಸ್ಕಾಂ ಆಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts