More

    ಇಮಾಮ್‌ ನಿಯಾಜಿಗೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ – ಬೆಂಬಲಿಗರಿಂದ ಹೊಸಪೇಟೆಯಲ್ಲಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಹೊಸಪೇಟೆ

    ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಬೆಂಬಲಿಗರು ನಗರದ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.

    ನಗರದ ಚಿತ್ತವಾಡಗಿ ಸೇರಿ ನಾನಾ ಕಡೆಯಿಂದ ತಂಡೋಪ ತಂಡವಾಗಿ ಆಗಮಿಸಿದ ಬೆಂಬಲಿಗರು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಪ್ರಮುಖ ಬೆಂಬಲಿಗ ಇಪ್ಪಿತೇರಿ ಮಾಗಣಿ ವೆಂಕೋಬಿ, 2004ರಿಂದ ಇಮಾಮ್ ನಿಯಾಜಿ ಕಾಂಗ್ರೆಸ್‌ಗಾಗಿ ದುಡಿಯುತ್ತಿದ್ದಾರೆ. 2013 ರಿಂದ ವಿಜಯನಗರ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಪಕ್ಷ ಸಂಘಟನೆಗಾಗಿ ‘ಮನೆ ಮನೆಗೆ ಕಾಂಗ್ರೆಸ್’ ಎಂಬುದೂ ಸೇರಿ ಹಲವು ಅಭಿಯಾನಗಳನ್ನು ಮಾಡಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಅನ್ನು ಬೇರು ಮಟ್ಟದಿಂದ ಬಲಪಡಿಸಿದ್ದಾರೆ. ಆದರೆ, 2013ರಿಂದ ಇಲ್ಲಿ ವರೆಗೆ ಒಂದಿಲ್ಲೊಂದು ನೆಪ ಹೇಳಿ ಟಿಕೆಟ್ ತಪ್ಪಿಸುತ್ತ ಬರಲಾಗುತ್ತಿದೆ. ಈ ಬಾರಿ ಇವರಿಗೆ ಬಿಟ್ಟು ಮಾಜಿ ಶಾಸಕ ಎಚ್.ಆರ್. ಗವಿಯಪ್ಪಗೆ ಘೋಷಿಸಿದ್ದು ಅಕ್ಷಮ್ಯ ಎಂದರು.

    ಪ್ರಮುಖರಾದ ಆಲಂ ಬಾಷಾ, ಶಿವರಾಜ್, ಗೌಸ್ ಮಾತನಾಡಿ, ಇಮಾಮ್ ನಿಯಾಜಿಗೆ ವಿಜಯನಗರ ಕ್ಷೇತ್ರದಲ್ಲಿ ಮುಸ್ಲಿಂ ಕೋಟಾದಲ್ಲಿ ಟಿಕೆಟ್ ನೀಡದೇ ಕಾಂಗ್ರೆಸ್ ವಂಚಿಸಿದೆ. ಈ ಬಾರಿ ಕಾಂಗ್ರೆಸ್ ಸೋಲುವುದು ಶೇ.100 ಖಚಿತ ಎಂದರು.

    ಅವಕಾಶ ಸಿಗುವ ವಿಶ್ವಾಸವಿದೆ ಎಂದ ಎಚ್.ಎನ್.ಎಫ್. ಇಮಾಮ್ ನಿಯಾಜಿ

    ಇಮಾಮ್‌ ನಿಯಾಜಿಗೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ - ಬೆಂಬಲಿಗರಿಂದ ಹೊಸಪೇಟೆಯಲ್ಲಿ ಪ್ರತಿಭಟನೆ
    ಎಚ್.ಎನ್.ಎಫ್. ಇಮಾಮ್ ನಿಯಾಜಿ

    ವಿಜಯನಗರ ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ತನಗೆ ಸಿಗುವ ವಿಶ್ವಾಸವನ್ನು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ಸತತ 3ನೇ ಬಾರಿಗೆ ಟಿಕೇಟ್ ಕೈತಪ್ಪಿದಂತಾಗಿದೆ. ಬೆಂಬಲಿಗರಿಗೆ ಅಸಮಾಧಾನ ಉಂಟಾಗಿದ್ದರಿಂದ ಪ್ರತಿಭಟನೆ ಮಾಡಿದ್ದಾರೆ. ಸ್ಪರ್ಧೆ ಮಾಡಲೇಬೇಕೆಂದು ಒತ್ತಡವನ್ನೂ ಹೇರುತ್ತಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸಾಮಾಜಿಕ ನ್ಯಾಯದಡಿ ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾಗೆ ಮನವಿ ಮಾಡಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಮೊದಲ ಹಂತದ ಪಟ್ಟಿಯಲ್ಲಿ ವಿಜಯನಗರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದರೂ ಬದಲಾಯಿಸುವ ಸಾಧ್ಯತೆ ಇದ್ದು, ನನಗೆ ನ್ಯಾಯ ಸಿಸುವ ವಿಶ್ವಾಸವಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದು, ಕಾಂಗ್ರೆಸ್ ತೊರೆಯುವ ಮತ್ತು ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts