More

    ರೈತರಿಗೆ ವಿಶೇಷ ಪ್ಯಾಕೇಜ್ ನೀಡಿ, ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹ

    ಮುಳಬಾಗಿಲು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ರಾಜ್ಯದ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

    ನಗರದ ಶ್ರೀನಿವಾಸ ಕಲ್ಯಾಣ ಮಂಟಪ ಆವರಣದಲ್ಲಿ ಶುಕ್ರವಾರ ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಆಯೋಜಿಸಿದ್ದ ಮುಳಬಾಗಿಲು ತಾಲೂಕಿನ 48 ಸಾವಿರ ಕುಟುಂಬಗಳ ಮನೆಬಾಗಿಲಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಲಾಕ್‌ಡೌನ್‌ನಿಂದ ಹಣ್ಣು, ತರಕಾರಿಗಳು ತೋಟಗಳಲ್ಲೇ ಕೊಳೆಯುತ್ತಿವೆ. ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಿ 450 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿ ಕೃಷಿಕರ ನೆರವಿಗೆ ಧಾವಿಸಬೇಕೆಂದು ಕೋರಿದರೂ ಗಮನಹರಿಸುತ್ತಿಲ್ಲ. ತಕ್ಷಣಕ್ಕೆ ಕನಿಷ್ಠ 250-300 ಕೋಟಿ ರೂ. ಬಿಡುಗಡೆ ಮಾಡಿ ನಷ್ಟದಲ್ಲಿರುವ ರೈತರ ಬೆಳೆಗಳನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಿಸುವುದು ಅಥವಾ ಮಾರುಕಟ್ಟೆಗೆ ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದರು.

    ರಾಜ್ಯ ಸರ್ಕಾರ ಜನರ ಆರೋಗ್ಯ ಕಾಳಜಿ ವಹಿಸಬೇಕು. ದೇಶದಲ್ಲಿ ಮೇ 18ರೊಳಗೆ 38 ಸಾವಿರ ಜನ ಸೋಂಕಿನಿಂದ ಸಾಯುತ್ತಾರೆಂಬ ಮಾಹಿತಿಯಿದ್ದು, ಜನರ ಜೀವನದೊಂದಿಗೆ ಚೆಲ್ಲಾಟವಾಡದೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಹೊಸ ಯೋಜನೆಗಳನ್ನು ಕೈಬಿಡಬೇಕು. ಸಿಎಂ ಸಲಹೆಗಾರರನ್ನು ನೇಮಿಸಿಕೊಂಡು ಅವರಿಗೆ ಭರಿಸುವ ಖರ್ಚು ವೆಚ್ಚಗಳನ್ನು ಕಡಿತಗೊಳಿಸಬೇಕು. ಕೇರಳ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಕಟ್ಟಡ ಕಾರ್ಮಿಕರು ಸೇರಿ ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು.

    ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿ, ಕೋಲಾರ ಜಿಲ್ಲೆ ಹಸಿರು ವಲಯದಲ್ಲಿದ್ದರೂ ಕರೊನಾ ಬಗ್ಗೆ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರ ಬರಬೇಕು. ತಾಲೂಕು ಜೆಡಿಎಸ್ ಮುಖಂಡರ ನೆರವಿನೊಂದಿಗೆ 30 ಗ್ರಾಪಂಗಳ ವ್ಯಾಪ್ತಿಯಲ್ಲಿ ಶನಿವಾರದಿಂದಲೇ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ವಿತರಿಸಲಾಗುವುದು ಎಂದರು.

    ತಾಲೂಕು ಜೆಡಿಎಸ್ ಅದ್ಯಕ್ಷ ಕಾಡೇನಹಳ್ಳಿ ನಾಗರಾಜ್, ಎಂಎಲ್‌ಸಿ ಆರ್.ಚೌಡರೆಡ್ಡಿ, ಮಾಜಿ ಶಾಸಕ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಟಿ.ಎಚ್.ತೇಜೋರಮಣ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ಮುಖಂಡರಾದ ಬಿ.ಎಂ.ವೆಂಕಟರಮಣಗೌಡ, ಎಂ.ಚಂಗಪ್ಪ, ಕವತನಹಳ್ಳಿ ಮುನಿಸ್ವಾಮಿಗೌಡ, ಡಾ. ವಜಾಯಿತುಲ್ಲಾಖಾನ್ ಇತರರು ಇದ್ದರು.

    ಪಾಲನೆಯಾಗದ ಸಾಮಾಜಿಕ ಅಂತರ: ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತಾದರೂ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗಿ ನಿಯಮ ಉಲ್ಲಂಘನೆಯಾಗಿದೆ. ಜೆಡಿಎಸ್ ಮಾಜಿ ಅಧ್ಯಕ್ಷ ಆಲಂಗೂರು ಶಿವಣ್ಣ, ಪ್ರಧಾನ ಕಾರ್ಯದರ್ಶಿ ನಲ್ಲೂರು ವಿ.ರಘುಪತಿರೆಡ್ಡಿ, ಜಿಪಂ ಮಾಜಿ ಸದಸ್ಯ ಎನ್.ರಾಜಗೋಪಾಲ್ ಸೇರಿ ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts