More

    ಗೆಂಡೇಗೌಡರ ಕಾಲನಿಯಲ್ಲಿ ನೀರವ ಮೌನ

    ಎಚ್.ಡಿ.ಕೋಟೆ: ಮಹಾಶಿವರಾತ್ರಿ ದಿನವೇ ನಾಲ್ವರು ಬಾಲಕರು ಕೆರೆಗೆ ಈಜಲು ಹೋಗಿ ಮೃತಪಟ್ಟಿದ್ದು, ತಾಲೂಕಿನ ಗೆಂಡೇಗೌಡ ಕಾಲನಿಯಲ್ಲಿ ನೀರವ ಮೌನ ಆವರಿಸಿದೆ.

    ಗ್ರಾಮದ ನಾಗರಾಜು ಎಂಬುವರ ಪುತ್ರರಾದ 9ನೇ ತರಗತಿ ಯಶವಂತ್ (15), 8ನೇ ತರಗತಿ ರೋಹಿತ್ (14), ಶ್ರೀನಿವಾಸ್ ಅವರ ಮಗ 9ನೇ ತರಗತಿಯ ಕಿರಣ್ (15) ಹಾಗೂ ಮಹದೇವು ಎಂಬುವರ ಮಗ 8ನೇ ತರಗತಿಯ ಕೆಂಡಗಣ್ಣ (14) ಮೃತಪಟ್ಟವರು.

    ಶಾಲೆಗೆ ರಜೆ ಇದ್ದ ಕಾರಣ ಈ ನಾಲ್ವರು ಗ್ರಾಮದ ಪಕ್ಕದ ಪಡುಕೋಟೆ ಕೆರೆಗೆ ಶುಕ್ರವಾರ ಮಧ್ಯಾಹ್ನ ಮನೆಯವರಿಗೂ ತಿಳಿಸದೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಗಾಬರಿಗೊಂಡ ಪಾಲಕರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಪಡುಕೋಟೆ ಕೆರೆ ಹತ್ತಿರ ನೋಡಿದಾಗ ಸೈಕಲ್ ಮತ್ತು ಮಕ್ಕಳ ಬಟ್ಟೆ, ಚಪ್ಪಲಿಗಳು ಏರಿಯ ಮೇಲೆ ಇರುವುದನ್ನು ಕಂಡು ಗ್ರಾಮಸ್ಥರ ಸಹಕಾರದಲ್ಲಿ ನೀರಿಗೆ ಇಳಿದು ಹುಡುಕಾಟ ನಡೆಸಿದಾಗ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಖಚಿತವಾಗಿದೆ.

    ನಂತರ ಪಟ್ಟಣ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತ ಬಾಲಕರ ಪಾಲಕರು ಮರಣೋತ್ತರ ಪರೀಕ್ಷೆ ನಡೆಸಬಾರದು ಎಂದು ವಿನಂತಿಸಿಕೊಂಡಿದ್ದಾರೆ. ನಂತರ ಪೊಲೀಸರು ಪಾಲಕರನ್ನು ಸಮಾಧಾನಪಡಿಸಿ ಬಾಲಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಶನಿವಾರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು. ಗ್ರಾಮಕ್ಕೆ ಬಾಲಕರ ಮೃತದೇಹ ತರುತ್ತಿದಂತೆ ಇಡಿ ಊರಿಗೆ ಊರೆ ಕಂಬನಿ ಮಿಡಿಯಿತು.

    ಮುಗಿಲು ಮುಟ್ಟಿದ ಪಾಲಕರ ಆಕ್ರಂದನ: ಗ್ರಾಮದ ನಾಗರಾಜು ದಂಪತಿಗೆ ಇದ್ದ ಇಬ್ಬರು ಮಕ್ಕಳೂ ಮೃತಪಟ್ಟಿದ್ದು, ತಂದೆ-ತಾಯಿ ಮತ್ತು ಸಂಬಂಧಿಕರ ಆಕ್ರಂದನ ನೆರೆದಿದ್ದ ಸಾರ್ವಜನಿಕರಲ್ಲಿ ಕಣ್ಣೀರು ತರಿಸಿ ಮರುಕ ಹುಟ್ಟಿಸಿತು. ಯಶವಂತ್ ಸವ್ವೆ ಗ್ರಾಮದ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರೆ, ರೋಹಿತ್ ಎಚ್.ಡಿ.ಕೋಟೆಯ ಜ್ಞಾನ ಕೇಂದ್ರ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು.

    ಶ್ರೀನಿವಾಸ್ ದಂಪತಿಗೂ ಇಬ್ಬರು ಮಕ್ಕಳಿದ್ದು, ಮೃತ ಕಿರಣ್ ಮೈಸೂರಿನ ತನ್ನ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ರಾಘವೇಂದ್ರ ನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ. ಮಹದೇವು ಅವರ ಮಗ ಸವ್ವೆ ಗ್ರಾಮದ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

    ಸಾಂತ್ವನ: ಶನಿವಾರ ಗ್ರಾಮಕ್ಕೆ ಶಾಸಕ ಸಿ.ಅನಿಲ್ ಕುಮಾರ್ ಭೇಟಿ ನೀಡಿ ಮೃತ ಬಾಲಕರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು. ಅಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದರು.

    ತಲಾ ಒಂದು ಲಕ್ಷ ರೂ. ಪರಿಹಾರ: ಶಿಕ್ಷಣ ಇಲಾಖೆಯ ಮಕ್ಕಳ ನಿಧಿಯಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಯಿತು. ತಾಲೂಕು ದಂಡಾಧಿಕಾರಿ ಶವಸಂಸ್ಕಾರಕ್ಕೆ 5 ಸಾವಿರ ರೂ. ಪರಿಹಾರ ನೀಡಿದರು. ಗೆಂಡೇಗೌಡನ ಕಾಲನಿಯಲ್ಲಿ ನಾಲ್ಕು ಬಾಲಕರ ಶವಸಂಸ್ಕಾರ ನಡೆಸಲಾಯಿತು. ಇವರ ಸಾವಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಕಂಬನಿ ಮಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts