More

    ವೈದ್ಯರ ಕಷ್ಟ ಕೇಳಿದ ಜಿಪಂ ಸಿಇಒ, ನೆಲಮಂಗಲ ಸಾರ್ವಜನಿಕರ ಆಸ್ಪತ್ರೆ ಕುಂದುಕೊರತೆ ಪರಿಶೀಲಿಸಿದ ಜಿಪಂ ಸಿಇಒ

    ನೆಲಮಂಗಲ: ನಗರದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜು ಆಸ್ಪತ್ರೆಯ ಕುಂದು ಕೊರತೆ ಬಗ್ಗೆ ಪರಿಶೀಲನೆ ನಡೆಸಿದರು.

    ಪ್ರಯೋಗಾಲಯ, ಔಷಧ ಮಳಿಗೆ, ಹೊರರೋಗಿಗಳ ಆರೋಗ್ಯ ತಪಾಸಣಾ ಕೊಠಡಿ ಪರಿಶೀಲನೆ ನಡೆಸಿ, ವೈದ್ಯಾಧಿಕಾರಿಗಳೊಂದಿಗೆ ಸಮಸ್ಯೆ ಹಾಗೂ ಕರೊನಾ ಸೋಂಕು ಪರೀಕ್ಷೆ ಕುರಿತಾದ ಮಾಹಿತಿ ಸಂಗ್ರಹಿಸಿದರು.

    ಆಸ್ಪತ್ರೆಯಲ್ಲಿ ಪ್ರತಿನಿತ್ಯ 250 ಆ್ಯಂಟಿಜನ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ಮಾಡುತ್ತಿದ್ದು, ಇನ್ನುಮುಂದೆ ಕಡ್ಡಾಯವಾಗಿ 200 ಆ್ಯಂಟಿಜೆನ್ ಪರೀಕ್ಷೆ, 500 ಆರ್‌ಟಿಪಿಸಿಆರ್ ಪರೀಕ್ಷಾ ನಡೆಸುವಂತೆ ಗುರಿ ನಿಗದಿಪಡಿಸಿದರು.

    ಶಸ್ತ್ರಚಿಕಿತ್ಸೆಗೆ ಒಳಪಡುವವರು, ಗರ್ಭೀಣಿಯರು ಮತ್ತು ಮೃತರಿಗೆ ಮಾತ್ರ ಆ್ಯಂಟಿಜನ್ ಪರೀಕ್ಷೆ ನಡೆಸುವಂತೆ, ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ಕನಿಷ್ಠ 10 ಮಂದಿಯನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಸಿಇಒ ತಿಳಿಸಿದರು.

    ಸೌಲಭ್ಯ ಹೆಚ್ಚಳಕ್ಕೆ ಆದ್ಯತೆ: ಜಿಲ್ಲೆಯಾದ್ಯಂತ ಕರೊನಾ ಪ್ರಕರಣ ಹೆಚ್ಚುತ್ತಿದ್ದು, ಸೋಂಕು ಪರೀಕ್ಷಾ ಸೌಲಭ್ಯ ಹೆಚ್ಚಿಸಬೇಕಿದ್ದು, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಾಗಿದೆ. ಪರೀಕ್ಷಾ ಸೌಲಭ್ಯ ಹೆಚ್ಚಿಸಿದರೆ ಸೋಂಕಿತರನ್ನು ಪ್ರಾಣಪಾಯದಿಂದ ಕಾಪಾಡಬಹುದಾಗಿದೆ ಎಂದು ಜಿಪಂ ಸಿಇಒ ಎಂ.ಎನ್.ನಾಗರಾಜು ತಿಳಿಸಿದರು.

    ಆಸ್ಪತ್ರೆಗಳಲ್ಲಿ ಗಂಟಲು ದ್ರವ ಸಂಗ್ರಹಿಸಲು ನುರಿತ ತಜ್ಞರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಅವಶ್ಯಕ ಟೆಕ್ನಿಷಿಯನ್ ಮತ್ತು ಇತರೆ ಸಿಬ್ಬಂದಿ ನಿಯೋಜನೆ, ಅವಶ್ಯವಿರುವ ಸೌಕರ್ಯ ಕಲ್ಪಿಸುವುದು ಕುರಿತಾಗಿ ಪ್ರಸ್ಥಾವನೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದು ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದರು.

    ವೈದ್ಯರಾದ ಡಾ. ನಾಗೇಶ್, ಮಂಜುಳಾ, ವಿ.ಸವಿತಾ, ಆರೋಗ್ಯ ನಿರೀಕ್ಷಕ ನಾಗೇಶ್ ಮತ್ತಿತರರು ಇದ್ದರು.

    ವೈದ್ಯಾಧಿಕಾರಿಗಳ ಮನವಿ: ಸಾರ್ವಜನಿಕ ಆಸ್ಪತ್ರೆ ಹೊರ ಹಾಗೂ ಒಳರೋಗಿಗಳು ಸೇರಿ ಕರೊನಾ ಕುರಿತಾದ ಎಲ್ಲ ವಿಚಾರಗಳ ಮೇಲ್ವೀಚಾರಣೆಯನ್ನು ತಾಲೂಕು ಆರೋಗ್ಯಾಧಿಕಾರಿಯೇ ನೋಡಿಕೊಳ್ಳಬೇಕಾಗಿದೆ. ರೋಗಿಗಳಿಗೆ ಅಗತ್ಯವಿರುವ ಔಷಧಗಳನ್ನು ಸಕಾಲಕ್ಕೆ ಸರಬರಾಜು ಮಾಡಿಸುವುದು, ಕೋವಿಡ್-19 ತುರ್ತುಪರಿಸ್ಥಿತಿಯಲ್ಲಿ ಕೆಲಸ ಮಾಡುವ ವೈದ್ಯರಿಗೆ ವೇಳೆ ನಿಗದಿ, ಪ್ರಯೋಗಾಲಯದಲ್ಲಿ ಕೊರತೆ ಇರುವ ಸೋಂಕು ಪರೀಕ್ಷಾ ತಜ್ಞರ ನಿಯೋಜನೆ, ಕೆಲ ಸಿಬ್ಬಂದಿಗಳ ಬಾಕಿ ವೇತನ ನೀಡುವ ಬಗ್ಗೆ ಕ್ರಮಕೈಗೊಳ್ಳುವಂತೆ ಸಿಇಒ ಬಳಿ ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts