More

    ಪ್ರತಿಭಟನೆಗೆ ಹೆದರಿದ ಸಂಸ್ಥೆ; ಆಂಬ್ಯುಲೆನ್ಸ್ ನೌಕರರ ಬಾಕಿ ಸಂಬಳ ಕೆಲವೇ ಗಂಟೆಗಳಲ್ಲಿ ಕ್ಲಿಯರ್!

    ಬೆಂಗಳೂರು: ರಾಜ್ಯದಲ್ಲಿ 108 ಆಂಬ್ಯುಲೆನ್ಸ್‌ಗಳ ವ್ಯವಸ್ಥೆಯ ಹೊಣೆ ಹೊತ್ತಿರುವ ಜಿವಿಕೆ ಸಂಸ್ಥೆ, ಕಳೆದ 2 ತಿಂಗಳ ವೇತನವನ್ನು ತನ್ನ ನೌಕರರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಬಾಕಿ ವೇತನವನ್ನು ಇನ್ನು ಗಂಟೆಗಳಲ್ಲಿ ಪಾವತಿ ಮಾಡದಿದ್ದರೆ ಆಂಬ್ಯುಲೆನ್ಸ್‌ಗಳನ್ನು ಓಡಿಸುವುದಿಲ್ಲ ಎಂದು ಚಾಲಕರು ಮತ್ತು ಇತರ ನೌಕರರು ಇಂದು ಎಚ್ಚರಿಕೆ ನೀಡಿದ್ದರು.

    ಒಂದು ವೇಳೆ 108 ನೌಕರರು ಮುಷ್ಕರ ಮಾಡಿದರೆ, ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದೀತು ಎಂದು ಸರ್ಕಾರಕ್ಕೆ ಮನವರಿಕೆ ಆಗಿದೆ. ಹಿರಿಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ವೇತನ ಪಾವತಿ ಮಾಡುವಂತೆ ಜಿವಿಕೆ ಸಂಸ್ಥೆಗೆ ತಾಕೀತು ಮಾಡಿದ್ದರು. ಸುಮಾರು 11 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದ ಜಿವಿಕೆ ಸಂಸ್ಥೆ ಎಲ್ಲಾ 3 ಸಾವಿರ ನೌಕರರ ಸಂಬಳ ಪಾವತಿ ಮಾಡಿದೆ.

    ವೇತನ ಪಾವತಿ ಮಾಡದಿದ್ದರೆ ನಾಳೆ ರಾತ್ರಿ 8 ಗಂಟೆಗೆ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದ ಆಂಬ್ಯುಲೆನ್ಸ್ ನೌಕರರು ಇದರಿಂದ ಖುಷಿಯಾಗಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

    ಈ ಕುರಿತು ಸುದ್ದಿಗಾರರಿಗೆ ವಿವರ ನೀಡಿರುವ 108 ಸಿಬ್ಬಂದಿ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ, ‘‘ಇದೀಗ ಯಾವುದೇ ಸಂಬಳ ಪೆಂಡಿಂಗ್ ಇಲ್ಲ. ಆರೋಗ್ಯ ಇಲಾಖೆಯ ಕಮಿಷನರ್ ಮತ್ತು ಸಚಿವರ ಖಡಕ್ ಸೂಚನೆಯಿಂದ ನಮಗೆ ಸಂಬಳ ಆಗಿದೆ. ಸಂಬಳ ಆಗಿದ್ದು ತುಂಬಾ ಖುಷಿ ತಂದಿದೆ. ನಾಳೆ ಆಂಬುಲೆನ್ಸ್ ಸೇವೆ ಇರಲಿದೆ, ನಾವು ಪ್ರತಿಭಟನೆ ಮಾಡುವುದಿಲ್ಲ’’ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts