More

    ಬಸವಾದಿ ಶರಣ ಪರಂಪರೆ ಮುಂದುವರಿಸುತ್ತಿದೆ ಗುರುಸಿದ್ಧೇಶ್ವರ ಮಠ

    ಗುಳೇದಗುಡ್ಡ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಜಾತಿಪದ್ಧತಿ ನಿರ್ಮೂಲನೆಯಾಗಬೇಕು, ಮಾನವೀಯತೆ ಗೌರವಿಸಬೇಕು, ಸಮಾಜದಲ್ಲಿ ಅನಿಷ್ಠ ಪದ್ಧತಿ ತೊಲಗಬೇಕೆಂದು ಕಾಯಕ ವರ್ಗದವರನ್ನು ಗುರುತಿಸಿ, ಅನುಭವ ಮಂಟಪ ಕಟ್ಟಿ ವಚನ ಚಳವಳಿ ಹುಟ್ಟುಹಾಕಿದರು. ಈ ಅನುಭವ ಮಂಟಪ ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ಪಟ್ಟಣದ ಗುರುಸಿದ್ಧೇಶ್ವರ ಮಠದಲ್ಲಿ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳ 38ನೇ ಪುಣ್ಯಾರಾಧನೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಶರಣ ಸಂಗಮ, ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

    ಬಸವಾದಿ ಶರಣ ಚಿಂತನೆಗಳನ್ನು ನಾಡಿನ ಮಠಗಳು ಮುಂದುವರಿಸಿದ್ದು, ಶಿಕ್ಷಣ, ದಾಸೋಹ, ಧಾರ್ಮಿಕ ಸೇರಿ ಹಲವಾರು ರಂಗಗಳಲ್ಲಿ ನಾಡಿನ ಮಠಗಳು ಸಾಕಷ್ಟು ಕೊಡುಗೆ ನೀಡುತ್ತಿವೆ. ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠವು ಸಮಾನತೆಯ ಸಂಕೇತವಾಗಿ ಕ್ರಾಂತಿಕಾರ ಹಾಗೂ ವೈಚಾರಿಕ ತತ್ವದಡಿ ನಿರ್ಮಾಣಗೊಂಡಿದೆ. ಹಿಂದು ಧರ್ಮದಲ್ಲಿನ ಶ್ರೇಣಿಕೃತ ವ್ಯವಸ್ಥೆ, ಜಾತಿ ತಾರತಮ್ಯ ನಿವಾರಿಸಿ, ಶರಣ ಧರ್ಮ, ಸರ್ವಧರ್ಮ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಪಾಲು, ಸಮಬಾಳು, ಮಾನವೀಯತೆ ಎತ್ತಿಹಿಡಿಯುವುದು ಈ ಮಠದ ಪರಂಪರೆಯಾಗಿದೆ ಎಂದರು.

    ವಚನ ಪಿತಾಮಹ .ಗು. ಹಳಕಟ್ಟಿಯವರು ಇರದೇ ಇದ್ದರೆ ಇಂದು ಬಸವಾದಿ ಶರಣರ ವಚನಗಳು, ಶರಣರು ಬೆಳಕಿಗೆ ಬರುತ್ತಿರಲಿಲ್ಲ. ನಮ್ಮ ಸಂಸ್ಥೆಯಿಂದ .ಗು. ಹಳಕಟ್ಟಿ ಸಂಶೋಧನಾ ಕೇಂದ್ರ ತೆಗೆದು, ಡಾ ಎಂ.ಎಂ. ಕಲ್ಬುರ್ಗಿ ನೇತೃತ್ವದಲ್ಲಿ ವಚನಸಂಪುಟ ಹೊರತಂದಿದೆ. ಇದು ರಾಜ್ಯದ ಹೆಮ್ಮೆಯ ಸಂಶೋಧನಾ ಕೇಂದ್ರವಾಗಿದೆ. ಹೀಗೆ .ಗು. ಹಳಕಟ್ಟಿ, ಲಿಂಗರಾಜ ದೇಸಾಯಿ, ಪುಟ್ಟರಂಗ ಶೆಟ್ಟಿ, ಅರಟಾಲ ರುದ್ರಪ್ಪಗೌಡ್ರ, ಕಂಬಳಿ ಸಿದ್ದಪ್ಪನವರು ಸೇರಿ ಅನೇಕರು ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
    ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಗುರುಸಿದ್ಧೇಶ್ವರ ಬ್ರಹನ್ಮಠವು ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದೆ. ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ಈ ಮಠವು ಸರ್ವಧರ್ಮಗಳ ಸಮಾನತೆಯ ಪ್ರತೀಕವಾಗಿದೆ ಎಂದರು.

    ತೊಂಟದಾರ್ಯ ಸಂಸ್ಥಾನ ಮಠದ ಡಾ.ತೊಂಟದ ಸಿದ್ಧರಾಮ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಬಸವಾದಿ ಶರಣರ ಕೊಡುಗೆ ಅಪಾರವಾಗಿದ್ದು, ಗುರುಸಿದ್ಧೇಶ್ವರ ಬ್ರಹನ್ಮಠವು ಸಾಮಾಜಿಕ ನ್ಯಾಯದ ತಳಹದಿ ಮೇಲೆ ಎಲ್ಲರನ್ನೂ ಒಂದೂಗೂಡಿಸುವ ಕೆಲಸ ಮಾಡುತ್ತಿದೆ. ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತಿಪತಿಗಳು ಪರಸ್ಪರ ಅರಿತು ಜೀವನ ನಡೆಸಬೇಕೆಂದು ಹೇಳಿದರು.

    ಗುರುಸಿದ್ಧೇಶ್ವರ ಬ್ರಹನ್ಮಠಕ್ಕೆ ಮುಂದಿನ ಉತ್ತರಾಧಿಕಾರಿಯಾಗಿ ಶ್ರೀ ಗುರುಬಸವ ದೇವರು ಅವರನ್ನು ಘೋಷಿಸಲಾಯಿತು. ಮುಂಬರುವ ಶರಣ ಸಂಗಮ ಸಮಾರಂಭದಲ್ಲಿ ಪೀಠಾಧಿಕಾರ ಮಹೋತ್ಸವ ನಡೆಸಲು ತೀರ್ಮಾನಿಸಲಾಯಿತು.
    ಇಳಕಲ್ಲದ ಗುರುಮಹಾಂತ ಸ್ವಾಮಿಗಳು, ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಪದ್ಮಸಾಲಿ ಸಮಾಜದ ಪ್ರಭುಲಿಂಗ ಸ್ವಾಮಿಗಳು ಜ್ಞಾನಪ್ರಕಾಶ ಸ್ವಾಮಿಗಳು, ಈಶ್ವರಾನಂದ ಸ್ವಾಮಿಗಳು, ಮೃತ್ಯುಂಜಯ ಸ್ವಾಮಿಗಳು ರೇಣಸಿದ್ದ ಪಟ್ಟದೇವರು, ಗುರುಬಸವ ದೇವರು ಸಾನಿಧ್ಯ ವಹಿಸಿದ್ದರು.

    ನೇಕಾರ ಒಕ್ಕೂಟ ರಾಜ್ಯಾಧ್ಯಕ್ಷ ಸೋಮಶೇಖರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಮಿತಿ ಗೌರವಾಧ್ಯಕ್ಷ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಹೊಳಬಸು ಶೆಟ್ಟರ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ರವೀಂದ್ರ ಕಲಬುರ್ಗಿ, ಸಂಜಯ ಬರಗುಂಡಿ, ಷಡಕ್ಷರಪ್ಪನವರು, ಮುರಿಗೆಪ್ಪ ನಾರಾ, ಸ್ವಾಗತ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ನಾಗೇಶ ಪಾಗಿ, ಗೋವಿಂದರಾಜು, ಅಶೋಕ ಹೆಗಡಿ, ಮಲ್ಲಿಕಾರ್ಜುನ ರಾಜನಾಳ, ಈರಣ್ಣ ಶೇಖಾ, ಎಚ್.ಶಿವಪ್ಪಶೆಟ್ಟಿ, ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts