More

    ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆ

    ಹಲಗೂರು: ಸಮೀಪದ ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಮಧ್ಯಾಹ್ನ 4.30 ಗಂಟೆ ನಂತರ ಗುಂಡಾಪುರದ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ, ಹೆಬ್ಬಾರೆಗೆ ಪೂಜೆ ಸಲ್ಲಿಸಿದ ನಂತರ ದೇವರ ಗುಡ್ಡರು ಹೆಬ್ಬಾರೆಯನ್ನು ಹೊತ್ತು ಕೆಲವು ಮನೆಗಳಿಗೆ ಹೋದರು. ಮನೆಯವರು ಹೆಬ್ಬಾರೆಗೆ ಪೂಜೆ ಸಲ್ಲಿಸಿ ಅಚ್ಚೆಂದ ನೀಡಿದರು. ಅದನ್ನು ಪಡೆದ ದೇವರು ಗುಡ್ಡರು ಹೆಬ್ಬಾರೆಯನ್ನು ದೇವಸ್ಥಾನಕ್ಕೆ ತಂದರು.

    ಗಮನ ಸೆಳೆದ ಪರದೇಶಿ ಕುಣಿತ: ಈ ವೇಳೆ ಬಾಳೆಹೊನ್ನಿಗ ಗ್ರಾಮಸ್ಥರು ಪರದೇಶಿ ಕುಣಿತದಲ್ಲಿ ಬೇವಿನ ಸೊಪ್ಪನ್ನು ಹಿಡಿದು ಕುಣಿದು ಕುಪ್ಪಳಿಸುತ್ತಾ ಹರಿದ ಗೋಣಿ ಚೀಲದ ಬಟ್ಟೆಗಳನ್ನು ತೊಟ್ಟು, ಕರಡಿ ವೇಷ, ಕಾಡು ಮನುಷ್ಯ, ಮಹಿಳೆಯ ವಸ್ತ್ರಗಳನ್ನು ತೊಟ್ಟು ಕರಗದ ಮನೆಗೆ ಬಂದಾಗ ದೇವರ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳರಾತಿ ನಂತರ ದೇವರ ಕರಗವನ್ನು ಅರ್ಚಕ ವೀರಭದ್ರಪ್ಪ ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನಕ್ಕೆ ಹೊತ್ತು ಸಾಗಿದರು. ಪ್ರಧಾನ ಅರ್ಚಕ ವೀರತಪ್ಪ ಜತೆಗೆ ಹೊರಟಾಗ ದೇವರಿಗೆ ಚಾಮರ ಬೀಸುತ್ತಾ ಛತ್ರಿ ಹಿಡಿದು, ಜೋಡಿ ಬಸವಗಳ ಜತೆ ಬಾಯಿ ಬೀಗ ಧರಿಸಿದ್ದ ಭಕ್ತರು ಹಾಗೂ ಕಳಸ ಹೊತ್ತಿದ್ದ ಮುತ್ತೈದೆಯರು ಮೆರವಣಿಗೆಯಲ್ಲಿ ಸಾಗಿದರು.

    ಮಡಿವಾಳ ಹಾಸಿದ ಮಡಿ ಮೇಲೆ ದೇವರ ಕರಗ ಹೊರಟು, ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನ ತಲಿಪಿದಾಗ ಸಂಜೆ 6 ಗಂಟೆ ಸಮೀಪಿಸಿತ್ತು. ಅರಕೆ ಹೊತ್ತುಕೊಂಡಿದ್ದವರು ಎತ್ತಿನ ಗಾಡಿಯಲ್ಲಿ ಬೇಲದ ಹಣ್ಣಿನ ಪಾನಕ, ಮಜ್ಜಿಗೆ, ಹೆಸರು ಬೇಳೆ ಮಾಡಿಕೊಂಡು ಜಾತ್ರೆಗೆ ಬಂದಿದ್ದ ಭಕ್ತರಿಗೆ ಹಂಚಿದರು. ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರು ಪರಸ್ಪರ ಅರಿಶಿನ ಕುಂಕುಮ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಹಲಗೂರು ಸೇರಿದಂತೆ ಸುತ್ತಲ ಗ್ರಾಮವಾದ ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನ ದೊಡ್ಡಿ, ಎಚ್.ಬಸವಾಪುರ, ಬಾಳೆಹೊನ್ನಿಗ, ದೇವಿರಹಳ್ಳಿ, ಹೊನ್ನಗನಹಳ್ಳಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಜಾತ್ರೆಗೆ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ವೃತ್ತ ನಿರೀಕ್ಷಕ ಶ್ರೀಧರ್ ಹಾಗೂ ಹಲಗೂರು ಠಾಣೆ ಎಸ್‌ಐ ಬಿ.ಮಹೇಂದ್ರ ನೇತೃತ್ವದ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts