More

    ತಿ.ನರಸೀಪುರ ಪುರಸಭೆಯ 21, 22 ವಾರ್ಡ್‌ನಲ್ಲಿ ಗುಂಡಿಮಯ ರಸ್ತೆ

    ತಿ.ನರಸೀಪುರ: ಪುರಸಭಾ ವ್ಯಾಪ್ತಿಯ ತಾಲೂಕು ಕಚೇರಿ ರಸ್ತೆ ಹಾಗೂ ಪುರಸಭಾ ಕಚೇರಿ ಮುಂಭಾಗದ ರಸ್ತೆಗಳು ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿವೆ.

    ಪುರಸಭೆಯ 21 ಹಾಗೂ 22 ವಾರ್ಡ್ ವ್ಯಾಪ್ತಿಯ ಬಡಾವಣೆಗಳಾದ ಕಡಲೆ ರಂಗಮ್ಮನ ಬೀದಿ, ಹಳೆ ಕುರುಬಗೇರಿ, ಶ್ರೀರಾಮ ಮಂದಿರ ಬೀದಿ, ಹಳೇ ಕೆನರಾ ಬ್ಯಾಂಕ್ ರಸ್ತೆ ಹಾಗೂ ಕೊಳ್ಳೇಗಾಲ ಮುಖ್ಯ ರಸ್ತೆಗೆ ಹೋಗುವ ರಸ್ತೆ ಗುಂಡಿಮಯವಾಗಿದ್ದು, ಐದು ವರ್ಷಗಳಿಂದ ಈ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಈ ಮಾರ್ಗದಲ್ಲಿ ನಿತ್ಯ ಓಡಾಡುವ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಇದು ಸ್ಥಳೀಯ ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

    ಇನ್ನು ಮಳೆಗಾಲದಲ್ಲಿ ರಸ್ತೆಗಳು ಸಂಪೂರ್ಣ ಕೆಸರುಮಯವಾದರೆ, ಬೇಸಿಗೆಯಲ್ಲಿ ವಿಪರೀತ ಧೂಳು ಇರುತ್ತದೆ. ಹೀಗಾಗಿ ಈ ಎರಡೂ ವಾರ್ಡ್‌ನ ನಿವಾಸಿಗಳು ರಸ್ತೆ ಅಭಿವೃದ್ಧಿ ಸಂಬಂಧ ಜನಪ್ರತಿನಿಧಿಗಳು ಹಾಗೂ ಪುರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನರಕಯಾತನೆ ತಪ್ಪಿದ್ದಲ್ಲ.

    ಕುಡಿಯುವ ನೀರು ಸರಬರಾಜು ಯೋಜನೆಯಡಿ ಪೈಪ್ ಅಳವಡಿಸಲು ಈ ರಸ್ತೆಗಳಲ್ಲಿ ಒಂದು ಕಡೆ ಅಗೆದು ಅದನ್ನು ಮಣ್ಣು ಮುಚ್ಚಿ ಬಿಟ್ಟಿದ್ದಾರೆ.ಮತ್ತೊಂದೆಡೆ ರಸ್ತೆಯ ಎರಡೂ ಭಾಗದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಮಳೆ ಬಂದಾಗ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಇಷ್ಟಾದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದಿರುವುದು ದುರಂತವೇ ಸರಿ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ, ಕಾರುಗಳು ಹಾಗೂ ಸಣ್ಣಪುಟ್ಟ ವಾಹನಗಳು ಹೆಸರಿಗೆ ಮಾತ್ರ ಚಲಿಸುತ್ತದೆ. ಆದರೆ ಇಲ್ಲಿ ಹೆಚ್ಚಾಗಿ ಲಾರಿ ಹಾಗೂ ಇತರ ವಾಹನಗಳು ಹೆಚ್ಚಾಗಿ ಸಂಚಾರ ಮಾಡುವುದರಿಂದ ರಸ್ತೆ ಅಭಿವೃದ್ಧಿಯಾಗಬೇಕು. ಇನ್ನು ಈ ಬಡಾವಣೆಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧ ಮಾಡಬೇಕು ಎಂಬ ಕೂಗು ಸ್ಥಳೀಯರದ್ದು.

    ಈ ಎರಡೂ ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಹೇಳತೀರದ್ದು. ಮಳೆ ಮತ್ತು ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲ. ಹೀಗಾಗಿ ಅಶುಚಿತ್ವ ತಾಂಡವವಾಡುತ್ತಿದೆ. ಇನ್ನು ನಿತ್ಯ ಜನಪ್ರತಿನಿಧಿಗಳು ಓಡಾಡುವ ಪುರಸಭೆ ಮುಂಭಾಗದ ರಸ್ತೆಗೆ ಡಾಂಬರು ಹಾಕದ ಕಾರಣ ರಸ್ತೆ ಅಧೋಗತಿಗೆ ತಲುಪಿದೆ. ಇನ್ನು ಭಗವಾನ್ ಟಾಕೀಸ್ ವೃತ್ತ ಹಾಗೂ ಹಳೇ ಸರ್ಕಾರಿ ಶಾಲೆ ಮುಂಭಾಗದ ರಸ್ತೆಗಳು ಗುಂಡಿಮಯವಾಗಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ.

    ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಅಭಿವೃದ್ಧಿ ಮಾತ್ರ ಶೂನ್ಯ. ಕಂದಾಯ ಹಾಗೂ ಇತರೆಡೆಯಿಂದ ತಿಂಗಳಿಗೆ ಕೋಟ್ಯಾಂತರ ರೂ. ಕರ ವಸೂಲಿಯಾಗುತ್ತಿದ್ದರೂ ಅಭಿವೃದ್ಧಿ ಮಾತ್ರ ಇಲ್ಲಿ ಮರೀಚಿಕೆ. ಇನ್ನು ಈ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಭಾವಿ ಸಚಿವ ಎಚ್.ಸಿ.ಮಹದೇವಪ್ಪ ಅವರ ವ್ಯಾಪ್ತಿಗೆ ಒಳಪಟ್ಟರೂ ಅಭಿವೃದ್ಧಿ ಕಾಣುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಲಿಂಕ್ ರಸ್ತೆ ಹಾಗೂ ಕೆಲವು ಬಡಾವಣೆಯ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾದ ಸಂದರ್ಭದಲ್ಲಿ ಈ ವಾರ್ಡ್‌ಗಳಿಗೂ ಹಣ ಬಿಡುಗಡೆಯಾಗಿತ್ತು. ಈ ಹಿಂದೆ ಇದ್ದ ಗುತ್ತಿಗೆದಾರರು ಕೆಲವು ರಸ್ತೆಗಳನ್ನು ಅಭಿವೃದ್ಧಿ ಮಾಡಿ ಈ ರಸ್ತೆಗಳನ್ನು ಹಾಗೆ ಬಿಟ್ಟು ಹೋಗಿದ್ದಾರೆ. ಆದರೂ ಇಲ್ಲಿಯವರೆಗೂ ಅವರ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಹಾಗಾಗಿ ಈ ರಸ್ತೆಗಳು ಅಭಿವೃದ್ಧಿಯಾಗದೆ ಉಳಿದಿದೆ. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
    ನಾಗರತ್ನಾ ಮಹದೇವ್ ಸದಸ್ಯೆ, 21ನೇ ವಾರ್ಡ್

    ತಾಲೂಕು ಕಚೇರಿ ಮುಂಭಾಗ, ಕಡ್ಲೇ ರಂಗಮ್ಮನ ಬೀದಿ ಮತ್ತು ಶ್ರೀರಾಮ ಬೀದಿಯ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಕೆಲವು ಬಡಾವಣೆಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಒಂದೂವರೆ ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಿತ್ತು. ಗುತ್ತಿಗೆ ಪಡೆದವರು ಕೆಲಸ ಮಾಡದೆ ನಿಲ್ಲಿಸಿ ಹೋಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಈ ಕಾಮಗಾರಿ ಆಗಬೇಕು. ಏಕೆಂದರೆ ಇದು ನಗರೋತ್ಥಾನ ಯೋಜನೆಯಡಿ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ.ಅಲ್ಲದೆ ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಕ್ರಮ ವಹಿಸಲಾಗುವುದು.
    ವಸಂತಕುಮಾರಿ ಪುರಸಭಾ ಮುಖ್ಯಾಧಿಕಾರಿ

    ವಾರ್ಡ್ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಮಾಡಲಾಗಿದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆಯೂ ಸಚಿವರ ಗಮನ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ವಹಿಸುವ ಕುರಿತು ಭರವಸೆ ನೀಡಿದ್ದಾರೆ.
    ಬಾದಾಮಿ ಮಂಜು ಪುರಸಭಾ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts