More

    ಮಳೆಗೆ 850 ಹೆಕ್ಟರ್ ಬೆಳೆ ನಾಶ

    ಗುಳೇದಗುಡ್ಡ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ 850 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸಜ್ಜೆ, ಗೋವಿನಜೋಳ, ಹತ್ತಿ, ಕಬ್ಬು, ಸೂರ್ಯಕಾಂತಿ ಸೇರಿ ಇನ್ನಿತರ ಬೆಳೆಗಳು ಹಾಳಾಗಿವೆ.

    ಕಳೆದ ಆಗಸ್ಟ್ ತಿಂಗಳಲ್ಲಿಯೂ ಭಾರಿ ಮಳೆಯಾಗಿ ಸಾಕಷ್ಟು ಬೆಳೆ ನಾಶವಾಗಿತ್ತು. ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಅತಿಯಾದ ಮಳೆಯಿಂದಾಗಿ ಕೊಳೆತು ಹೋಗಿವೆ.

    ಹಾನಾಪುರ ಎಸ್.ಪಿ. 15, ಹುಲ್ಲಿಕೇರಿ ಎಸ್.ಪಿ. 10, ಖಾನಾಪುರ ಎಸ್.ಪಿ. 15, ಕೋಟಿಕಲ್ಲ 9, ತಿಮ್ಮಸಾಗರ 8 ಸೇರಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿನ 202 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸಜ್ಜೆ ನೆಲಕಚ್ಚಿ ಹೋಗಿದೆ.

    ಕೆಲವಡಿ, ಹಂಸನೂರ, ತಿಮ್ಮಸಾಗರ, ಕೋಟಿಕಲ್, ತೆಗ್ಗಿ, ಹಂಗರಗಿ, ತೊಗುಣಶಿ, ಕಟಗೇರಿ, ಕೊಂಕಣಕೊಪ್ಪ, ಇಂಜಿನವಾರಿ, ಬೂದಿನಗಡ, ಹುಲಸಗೇರಿ, ಲಕ್ಕಸಕೊಪ್ಪ, ಪಾದನಕಟ್ಟಿ ಸೇರಿ ತಾಲೂಕಿನ 35 ಹಳ್ಳಿಗಳಲ್ಲಿನ 180 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾನಿಯಾಗಿದೆ.

    ಅಲ್ಲೂರ ಎಸ್‌ಪಿ, ಬೂದಿನಗಡೆ, ಚಿಮ್ಮಲಗಿ, ಜಮ್ಮನಕಟ್ಟಿ, ಕಾಟಾಪುರ, ನಾಗರಾಳ ಎಸ್.ಪಿ., ಸಬ್ಬಲಹುಣಶಿ ಗ್ರಾಮಗಳಲ್ಲಿನ 17 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಬ್ಬು ಮಳೆಯಿಂದ ಹಾನಿಯಾಗಿದೆ.

    293 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸೂರ್ಯಕಾಂತಿ, 83 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, ಹಾಗೂ ತಾಲೂಕಿನ 35 ಗ್ರಾಮಗಳಲ್ಲಿ ಬೆಳೆದಿದ್ದ 75 ಹೆಕ್ಟೇರ್‌ನಲ್ಲಿನ ಇನ್ನಿತರ ಬೆಳೆಗಳು ಭಾರಿ ಮಳೆಯಿಂದ ಹಾಳಾಗಿದ್ದು ಒಟ್ಟು ತಾಲೂಕಿನಲ್ಲಿ 850 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.

    ಸರ್ಕಾರ ಪರಿಹಾರ ನೀಡಲಿ
    ಎರಡು ಎಕರೆ ಸಜ್ಜೆ, ಎರಡು ಎಕರೆ ಸೂರ್ಯಪಾನ, ಒಂದು ಎಕರೆಯಲ್ಲಿ ಮೆಣಸಿನಕಾಯಿ ಹಾಕಿದ್ದೆ. ಅತಿಯಾದ ಮಳೆಯಿಂದಾಗಿ ಎಲ್ಲ ಬೆಳೆ ನಾಶವಾಗಿದೆ. ಬೆಳೆಗಾಗಿ ಅಂದಾಜು 30 ಸಾವಿರ ರೂ. ಖರ್ಚು ಮಾಡಿದ್ದೆ. ಖರ್ಚು ಮಾಡಿದ ಹಣವೂ ಮರಳಿ ಬರುವುದಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಹರದೊಳ್ಳಿಯ ರೈತ ಬಸವರಾಜ ಗಾಣಿಗೇರ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಗುಳೇದಗುಡ್ಡ ತಾಲೂಕಿನಲ್ಲಿ ಕಳೆದ ವಾರದಿಂದ ಸುರಿದ ಭಾರಿ ಮಳೆಗೆ 850 ಹೆಕ್ಟೇರ್ ಪ್ರದೇಶದಲ್ಲಿನ ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆಗಳು ಹಾಳಾಗಿವೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೇ ನಡೆಸುತ್ತಿವೆ. ಸರ್ವೇ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.
    ಎಂ.ಆರ್. ನಾಗೂರ, ಸಹಾಯಕ ಕೃಷಿ ಅಧಿಕಾರಿ, ಬಾದಾಮಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts