More

    ಅ.19ರಿಂದ ಗುವಿವಿ ಎಂ.ಫಿಲ್-ಪಿ.ಎಚ್.ಡಿ ಪ್ರವೇಶ ಪರೀಕ್ಷೆ

    ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಕ್ತ 2023ನೇ ಶೈಕ್ಷಣಿಕ ಸಾಲಿನ ಎಂ.ಫಿಲ್/ ಪಿ ಎಚ್ ಡಿ ಪ್ರವೇಶ ಪರೀಕ್ಷೆಗಳನ್ನು ಇದೇ ಅ.19 ಮತ್ತು 20ರಂದು ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು.

    ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಭಯ ದಿನಗಳಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದರು.

    ಅ.19ರಂದು ಕೇವಲ ಎಂಟು ವಿಷಯಗಳಿಗೆ ಪರೀಕ್ಷೆಗಳು ನಡೆಯಲಿದ್ದು, ಕನ್ನಡ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ಹಿಂದಿ, ನಿರ್ವಹಣೆ ಮತ್ತು ಉರ್ದು ವಿಷಯಗಳಿಗೆ ಪರೀಕ್ಷೆ ನಡೆಯಲಿವೆ. ಅಂದಿನ ಪರೀಕ್ಷೆಯಲ್ಲಿ ಸುಮಾರು 625 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

    ಅ.20ರಂದು ಉಳಿದ 14 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಅಂದು ವಾಣಿಜ್ಯ, ಇಂಗ್ಲಿಷ್, ದೈಹಿಕ ಶಿಕ್ಷಣ, ಗಣಿತ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಅನ್ವಯಿಕ ವಿದ್ಯುನ್ಮಾನ, ಸೂಕ್ಷ್ಮ ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ್ತ್ರ, ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ಮತ್ತು ಕಾನೂನು ವಿಷಯಗಳಿಗೆ ಅರ್ಜಿ ಸಲ್ಲಿಸಿರುವ ಸುಮಾರು 625 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎರಡೂ ದಿನಗಳ ಪರೀಕ್ಷೆಗೆ ಒಟ್ಟು 1250 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದು ವಿವರಿಸಿದರು.

    ವಿಶ್ವವಿದ್ಯಾನಿಲಯದ ಏಳು ವಿಭಾಗಗಳ ಕಟ್ಟಡಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಕಟ್ಟಡಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನುಡಿದರು.

    ಕುಲಸಚಿವ ಡಾ.ಶರಣಪ್ಪ ಸತ್ಯಂಪೇಟೆ, ಪರೀಕ್ಷಾಂಗ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ್, ಡೀನ್ ಸಮಿತಿ ಮುಖ್ಯಸ್ಥ ಹೂವಿನಭಾವಿ ಬಾಬಣ್ಣ ಇದ್ದರು.

    22 ವಿಷಯಗಳಿಗೆ ಪರೀಕ್ಷೆ: 2023ನೇ ಶೈಕ್ಷಣಿಕ ಸಾಲಿನ ಎಂ.ಫಿಲ್/ಪಿ.ಎಚ್.ಡಿ ಪ್ರವೇಶ ಪರೀಕ್ಷೆಗಾಗಿ 24 ವಿಷಯಗಳಿಗೆ ಪರೀಕ್ಷೆ ಕೈಗೊಳ್ಳುವ ಕುರಿತು ಅಧಿಸೂಚನೆ ಹೊರಡಿಸಿದ್ದರೂ, ಕೇವಲ 22 ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಪಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು.

    ಜೀವ ರಸಾಯನಶಾಸ್ತ್ರ ವಿಭಾಗಕ್ಕೆ ಯಾವುದೇ ಪ್ರವೇಶ ಅರ್ಜಿಗಳು ಬಂದಿಲ್ಲದ ಕಾರಣ ಈ ವಿಭಾಗಕ್ಕೆ ಪರೀಕ್ಷೆ ನಡೆಸಲಾಗುತ್ತಿಲ್ಲ. ಜೊತೆಗೆ, ಶುಗರ್ ಟೆಕ್ನಾಲಜಿ ವಿಭಾಗ ಈಗ ಬೀದರ್ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಈ ವಿಭಾಗಕ್ಕೂ ಪರೀಕ್ಷೆ ನಡೆಸಲಾಗುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts