More

    ಗುಜ್ಜಾಡಿ ಮುಖ್ಯರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ

    ಗಂಗೊಳ್ಳಿ: ಮುಳ್ಳಿಕಟ್ಟೆಯಿಂದ ಗುಜ್ಜಾಡಿಗೆ ಹೋಗುವ ಮುಖ್ಯ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ತ್ಯಾಜ್ಯದ ರಾಶಿಯಿದೆ. ಕಸ ಎಸೆಯಬೇಡಿ ಎಂದು ಪಂಚಾಯಿತಿ ಎಚ್ಚರಿಕೆಯ ನಾಮಫಲಕ ಹಾಕಿದರೂ, ಬೈಕ್, ಕಾರು, ಮತ್ತಿತರ ವಾಹನಗಳಲ್ಲಿ ಬರುವ ಜನ ರಸ್ತೆ ಬದಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಎಸೆದು ಹೋಗುತ್ತಾರೆ.
    ಗುಜ್ಜಾಡಿ ಗ್ರಾಮದಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್ ಹಾಗೂ ಬೆಣ್ಗೆರೆ ಸೇರಿ 5 ವಾರ್ಡ್‌ಗಳಿದ್ದು, 6,042 ಜನರಿದ್ದಾರೆ. ಮನೆಗಳು, ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 1,300ಕ್ಕೂ ಹೆಚ್ಚು ಕಟ್ಟಡಗಳಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಿಲ್ಲದ ಕಾರಣ ಗ್ರಾಮಸ್ಥರು ಹಾಗೂ ಹೊರಗಿನಿಂದ ಬರುವ ಜನರು ಮುಳ್ಳಿಕಟ್ಟೆ- ನಾಯಕವಾಡಿ ರಸ್ತೆ, ತ್ರಾಸಿ -ನಾಯಕವಾಡಿ ರಸ್ತೆಗಳ ಎರಡೂ ಬದಿ, ಚರಂಡಿಗಳಿಗೆ ಕಸ ಎಸೆಯುತ್ತಿದ್ದಾರೆ. ಗುಜ್ಜಾಡಿ ಗ್ರಾಮದ ಜನ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರೂ ವಾಹನಗಳಲ್ಲಿ ರಾತ್ರಿ ವೇಳೆ ಬಂದು ಕಸ ಎಸೆದು ಹೋಗುತ್ತಿದ್ದಾರೆ ಎನ್ನುವುದು ಗುಜ್ಜಾಡಿ ಪಂಚಾಯಿತಿ ಅಧಿಕಾರಿಗಳ ಆರೋಪ.

    ಸಿಸಿಟಿವಿ ಅಳವಡಿಸಿದರೂ ಪ್ರಯೋಜನವಿಲ್ಲ: ರಸ್ತೆ ಬದಿ ಕಸ ಎಸೆಯಬೇಡಿ ಎಂದು ಗುಜ್ಜಾಡಿ ಗ್ರಾಪಂ ಅನೇಕ ಬಾರಿ ಸೂಚನಾ ಫಲಕ ಅಳವಡಿಸಿದೆ. ಈ ಮನವಿಗೆ ಬೆಲೆ ನೀಡದೆ ರಾತ್ರಿ ಹೊತ್ತಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ. ಒಂದು ಕಡೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ. ಕಸ ಎಸೆಯುವರು ಅದನ್ನೂ ಕ್ಯಾರೇ ಅನ್ನುತ್ತಿಲ್ಲ. ಕಸ ಎಸೆಯುವುದನ್ನು ನಿಯಂತ್ರಿಸುವುದೇ ಪಂಚಾಯಿತಿಗೆ ಸವಾಲಿನ ಸಂಗತಿಯಾಗಿದೆ.

    ವಿಲೇವಾರಿ ಘಟಕಕ್ಕೆ ಆಗ್ರಹ: ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅನೇಕ ಗ್ರಾಪಂ, ಜಿಪಂ ಅನುದಾನದ ನೆರವಿನಿಂದ ಕಸ ವಿಲೇವಾರಿ ಸಮಸ್ಯೆ ನಿವಾರಿಸುವ ಸಲುವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದೆ. ಕಸ ವಿಲೇವಾರಿ ಜತೆಗೆ, ಅದನ್ನು ಗೊಬ್ಬರವಾಗಿ ಪರಿವರ್ತಿಸಿದರೆ ಪಂಚಾಯಿತಿಗೂ ಆದಾಯ ಬರುತ್ತದೆ. ಗುಜ್ಜ್ಜಾಡಿಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದರೆ, ಕಸದ ವಿಲೇವಾರಿ ಸಮಸ್ಯೆ ನಿವಾರಣೆಯಾಗಲಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ. ಗುಜ್ಜಾಡಿ ಗ್ರಾಮಕ್ಕೆ ಅನುದಾನ ಇದ್ದರೂ, ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಜಾಗದ ಸಮಸ್ಯೆ ಇರುವುದರ ಕುರಿತು ಪತ್ರಿಕೆಯಲ್ಲಿ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.

    ಮುಳ್ಳಿಕಟ್ಟೆಯಿಂದ ಗುಜ್ಜಾಡಿಗೆ ಹೋಗುವ ಮುಖ್ಯ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ರಾತ್ರಿ ಹೊತ್ತಲ್ಲಿ ಬೈಕ್, ಕಾರು, ಮತ್ತಿತರ ವಾಹನಗಳಲ್ಲಿ ಬರುವ ಜನ ರಸ್ತೆ ಬದಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ರಸ್ತೆ ಬದಿ ತ್ಯಾಜ್ಯ ಎಸೆಯಬೇಡಿ ಎಂದು ಅನೇಕ ಬಾರಿ ಸೂಚನಾ ಫಲಕ ಅಳವಡಿಸಿ, ಮನವಿ ಮಾಡಿಕೊಂಡರೂ ಮನ್ನಣೆ ನೀಡುತ್ತಿಲ್ಲ. ಒಂದು ಕಡೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ. ಆದರೂ ಭಯವಿಲ್ಲ. ಕಸ ಎಸೆಯುವುದನ್ನು ನಿಯಂತ್ರಿಸುವುದೇ ಸವಾಲಿನ ಸಂಗತಿಯಾಗಿದೆ.
    ತಮ್ಮಯ್ಯ ದೇವಾಡಿಗ, ಅಧ್ಯಕ್ಷರು, ಗುಜ್ಜಾಡಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts