More

    ಗೃಹಲಕ್ಷ್ಮಿಯರಿಗೆ ಧನಲಕ್ಷ್ಮಿ: ಸಿಎಂ ಸಿದ್ದರಾಮಯ್ಯ ತವರಲ್ಲಿ ಇಂದು ಅದ್ದೂರಿ ಚಾಲನೆ; 1.28 ಕೋಟಿ ಮಹಿಳೆಯರಿಂದ ಯೋಜನೆಗೆ ನೋಂದಣಿ

    ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಬುಧವಾರ ಅರಮನೆ ನಗರಿಯಲ್ಲಿ ಅದ್ದೂರಿ ಚಾಲನೆ ಸಿಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್​ಗೆ

    ದೊಡ್ಡ ಪ್ರಮಾಣದಲ್ಲಿ ಮಹಿಳಾ ಮತಗಳು ಚಲಾವಣೆಗೊಳ್ಳಲು ಕಾರಣವಾದ ಈ ಗ್ಯಾರಂಟಿ ಅನುಷ್ಠಾನ ಸಮಾರಂಭ ತಮ್ಮ ತವರು ಜಿಲ್ಲೆಯಲ್ಲೇ ನಡೆಯಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ ಕಾರ್ಯಕ್ರಮ ನಿಗದಿಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.

    ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಆ.30) ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದ್ದು, ವಿಶಾಲ ವೇದಿಕೆ ಸಿದ್ಧಗೊಂಡಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ವ್ಯವಸ್ಥೆ ಮಾಡಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಗರದಲ್ಲೇ ಬೀಡುಬಿಟ್ಟಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಗ್ರಾಪಂ, ಬಿಬಿಎಂಪಿ 198 ವಾರ್ಡ್​ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ. ಈ ಸಂಬಂಧ ಮಂಗಳವಾರವೂ ತಾಲೀಮು ನಡೆಯಿತು.

    ನಗರದಲ್ಲಿಯೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಹಂತದ ಸಿದ್ಧತಾ ಕಾರ್ಯಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸಲಹೆ, ಸೂಚನೆಗಳನ್ನು ನೀಡಿದರು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ಫಲಾನುಭವಿಗಳು ಭಾಗವಹಿಸಲಿದ್ದು, ಇವರನ್ನು ಕರೆತರಲು ಎರಡು ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದೆ.

    ಫಲಾನುಭವಿಗಳೊಂದಿಗೆ ಸಂವಾದ: ಗೃಹಲಕ್ಷ್ಮೀ ಯೋಜನೆಯ ಕೆಲವು ಫಲಾನುಭವಿಗಳನ್ನು ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಿ, ರಾಷ್ಟ್ರೀಯ ನಾಯಕರ ಜತೆ ನೇರವಾಗಿ ಸಂವಾದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಿತು.

    ದೇಶದ ಇತಿಹಾಸದಲ್ಲೇ ಮೊದಲು: ಗೃಹಲಕ್ಷ್ಮಿ ಯೋಜನೆಗೆ ವರ್ಷಕ್ಕೆ 32 ಸಾವಿರ ಕೋಟಿ ರೂ. ಖರ್ಚಾಗಲಿದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆಗೆ ಇಷ್ಟು ಪ್ರಮಾಣದ ಹಣ ಖರ್ಚಾಗುತ್ತಿರುವುದು ಇದೇ ಮೊದಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

    ಹರಕೆ ತೀರಿಸಿದ ಸಿಎಂ, ಡಿಸಿಎಂ

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಗಳವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದರು.ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಒಂದೇ ಕಾರಿನಲ್ಲಿ ತೆರಳಿ ಬುಧವಾರ ಜಾರಿಗೊಳಿಸುತ್ತಿರುವ ‘ಗೃಹಲಕ್ಷ್ಮಿ’ ಪತ್ರವನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು.

    ಕೆಂಪು ಹಾಗೂ ಹಸಿರು ಬಣ್ಣದ ಸೀರೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ, ಫಲತಾಂಬೂಲ ಸಮರ್ಪಿಸಿದರು. ಗೃಹಲಕ್ಷ್ಮೀ ಯೋಜನೆಯ ಮೊದಲ ಹಣವನ್ನು ದೇವರಿಗೆ ಅರ್ಪಿಸುತ್ತಿರುವುದಾಗಿ ಡಿ.ಕೆ. ಶಿವಕುಮಾರ್ ಎರಡು ಸಾವಿರ ರೂ.ಗಳನ್ನು ಸಲ್ಲಿಸಿದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಣ ನೀಡಿ ದೇವರ ಆರತಿ ತಟ್ಟೆಗೆ ಹಾಕಿಸಿದರು. ಬಳಿಕ ದೇವಸ್ಥಾನದ ಮುಂದೆ ಈಡುಗಾಯಿ ಒಡೆದರು.

    ನಾನು, ಡಿಕೆಶಿ ಹತ್ತಿರ: ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ವಿರೋಧ ಪಕ್ಷದವರು ಎಷ್ಟೇ ಆರೋಪ ಮಾಡಿ, ದೂರ ಮಾಡಲು ಯತ್ನಿಸಿದರೂ ನಾವು ದಿನದಿಂದ ದಿನಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದೇವೆ. ಹೀಗಾಗಿ ಪ್ರತಿಪಕ್ಷಗಳು ವ್ಯರ್ಥಪ್ರಯತ್ನ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಮಾತಿಗೆ ಧ್ವನಿಗೂಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷಗಳು ನಮ್ಮ ಸಂಬಂಧ ಹಾಗೂ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಸದಾ ಒಟ್ಟಿಗೆ ಇರುವುದನ್ನು ಮಾಧ್ಯಮದವರು ನೋಡುತ್ತಲೇ ಇರುತ್ತೀರಿ ಎಂದರು.

    100 ದಿನಗಳ ಸಾಧನೆಯ ಕಿರುಹೊತ್ತಗೆ

    ಬೆಂಗಳೂರು: ರಾಜ್ಯ ಸರ್ಕಾರಕ್ಕೆ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾಧನೆಗಳ ಕಿರುಹೊತ್ತಗೆ ‘ಕರ್ನಾಟಕ ಮಾದರಿ 100 ದಿನಗಳು ನುಡಿದಂತೆ ನಡೆಯುತ್ತಿದ್ದೇವೆ’ ಬುಧವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.

    ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳ ವಿವರಗಳು ಮಾತ್ರವಲ್ಲದೇ ಎಲ್ಲ ಇಲಾಖೆಗಳಲ್ಲಿ ನೂರು ದಿನಗಳಲ್ಲಿ ಆಗಿರುವ ಪ್ರಗತಿಯ ನೋಟವನ್ನು ನೀಡಲಾಗಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಬಿಡುಗಡೆ ಮಾಡಿರುವ ಚಾರ್ಜ್​ಶೀಟ್​ಗೆ ಉತ್ತರ ನೀಡುವ ರೀತಿಯಲ್ಲಿ ಸಾಧನೆಗಳ ಪುಸ್ತಕ ಸಿದ್ಧವಾಗಿದೆ. ಪ್ರತಿ ಪುಟದಲ್ಲಿಯೂ ಸರ್ಕಾರದ ಸಾಧನೆಯನ್ನು ಬಿಂಬಿಸುವ ಪೋಟೋಗಳ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಗೂ ‘ನುಡಿದಂತೆ ನಡೆಯುತ್ತಿದ್ದೇವೆ’ ಎಂಬ ಸಾಲು ಗಮನ ಸೆಳೆಯುತ್ತದೆ. ಒಟ್ಟು 100ಕ್ಕೂ ಹೆಚ್ಚು ಪುಟಗಳಿದ್ದು, ವಿವಿಧ ತಜ್ಞರು ಸರ್ಕಾರದ ಗ್ಯಾರಂಟಿಗಳ ಬಗ್ಗೆ ಹೇಳಿರುವ ಸಾಲುಗಳನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ, ಸಾಮಾಜಿಕ ಅಭಿವೃದ್ಧಿಯ ಜತೆಗೆ ಭೌತಿಕ ಅಭಿವೃದ್ಧಿ ಸಾಧಿಸಲು ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚಿನ ಬಂಡವಾಳ ವೆಚ್ಚ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

    ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts