More

    ಸಾಮೂಹಿಕ ರಾಜೀನಾಮೆ ನೀಡಲು ಒತ್ತಾಯ

    ಮೂಡಿಗೆರೆ: ಕಸ್ತೂರಿ ರಂಗನ್ ವರದಿ ಜಾರಿಗೆ ಸುಪ್ರೀಂ ಕೋರ್ಟ್ ಡಿ.31 ಗಡುವು ನೀಡಿರುವುದರಿಂದ ಮಲೆನಾಡು ಭಾಗದಲ್ಲಿ ಬೆಳೆಗಾರರ ಆಕ್ರೋಶ ತೀವ್ರವಾಗಿದೆ. ಮೊದಲು ಗ್ರಾಪಂ ಚುನಾವಣೆ ಬಹಿಷ್ಕರಿಸುವ ಅಸ್ತ್ರ ಪ್ರಯೋಗಿಸಲಾಗಿತ್ತು. ಇದೀಗ ವಿವಿಧ ರಾಜಕೀಯ ಪಕ್ಷಗಳು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ರಾಜೀನಾಮೆ ನೀಡುವ ಮೂಲಕ ಬೆಳೆಗಾರರ ಹೋರಾಟ ಬೆಂಬಲಿಸುವಂತೆ ಒತ್ತಾಯ ಕೇಳಿಬರುತ್ತಿದೆ.

    ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರದಲ್ಲಿ ಹೋರಾಟ ನಡೆದಾಗ ಅಂದಿನ ಮಂಡ್ಯ ಸಂಸದ ಜಿ.ಮಾದೇಗೌಡ, ಕೇಂದ್ರ ಸಚಿವ ಅಂಬರೀಶ್ ರಾಜೀನಾಮೆ ನೀಡಿ ರೈತರ ಪರ ಹೋರಾಟಕ್ಕೆ ನಿಂತಿದ್ದರು. ಅದರಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕು ಎಂದು ಮಲೆನಾಡಿಗರು ಆಗ್ರಹಿಸುತ್ತಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ, ಐವರು ಶಾಸಕರು, ಉಪ ಸಭಾಪತಿ, ಇಬ್ಬರು ವಿಧಾನಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಎಲ್ಲ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ರಾಜಕೀಯ ಹುದ್ದೆಗಳಿಗೂ ರಾಜೀನಾಮೆ ನೀಡಬೇಕು. ಈ ರೀತಿಯ ಗಂಭೀರ ಹೋರಾಟದಿಂದ ರಾಜಕಾರಣಿಗಳಿಗೆ ಮೌಲ್ಯ ಸಿಗುತ್ತದೆ ಎಂಬ ಅಭಿಪ್ರಾಯ ರೈತರದು.

    ಕಸ್ತೂರಿ ರಂಗನ್ ವರದಿ ಜತೆಗೆ ಪರಿಸರ ಸೂಕ್ಷ್ಮವಲಯ, ಹುಲಿ ಯೋಜನೆ, ಆನೆ ಕಾರಿಡಾರ್,ಡೀಮ್್ಡ ಫಾರೆಸ್ಟ್ ಮೀಸಲು ಅರಣ್ಯ, ಭದ್ರ ಅಭಯಾರಣ್ಯ, ಕಾಡು ಪ್ರಾಣಿ ಹಾವಳಿ, ರೈತರ ಆತ್ಮಹತ್ಯೆ, ಸ್ಮಶಾನ, ಜಾನುವಾರು ಮೇಯಲು ಗೋಮಾಳ, ಗ್ರಾಮೀಣ ರಸ್ತೆ, ವಿದ್ಯುತ್, ಕುಡಿಯುವ ನೀರು ಹೀಗೆ ದಿನಕ್ಕೊಂದರಂತೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇದೆ. ಜಿಲ್ಲೆಯ ಜನರ ಹೋರಾಟ ಅರಣ್ಯರೋದನವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕಿಳಿಯಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts