More

    ನರೇಗಾದಲ್ಲಿ 382 ಬಾವಿ ನಿರ್ಮಾಣ

    ಪುತ್ತೂರು: ಪುತ್ತೂರು ಉಪವಿಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿ ನರೇಗಾ ಯೋಜನೆಯಿಂದ 382 ಬಾವಿ ನಿರ್ಮಿಸಲಾಗಿದೆ.

    ವರ್ಷದಿಂದ ವರ್ಷಕ್ಕೆ ನೀರಿನ ಬಳಕೆದಾರರ ಸಂಖ್ಯೆ ಹೆಚ್ಚಳ, ಮಳೆಯಾಗುವ ಕಾಲದ ವ್ಯತ್ಯಾಸ, ನೀರು ಮಿತ ಬಳಕೆಗೆ ಆದ್ಯತೆ ನೀಡದ ಕಾರಣ ಅಂತರ್ಜಲ ವರ್ಷದಿಂದ ವರ್ಷಕ್ಕೆ ಕುಸಿತ ಕಂಡಿದೆ ಎಂಬ ಜಿಲ್ಲಾ ಅಂತರ್ಜಲ ಕಚೇರಿಯ ಮೌಲ್ಯಮಾಪನ ಆಧಾರದಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬಾವಿ ನಿರ್ಮಾಣಕ್ಕೆ ನರೇಗಾದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಈವರೆಗೆ 759 ಬಾವಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಅದರಲ್ಲಿ 382 ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಸೇರಿದ್ದು. ಅಂತರ್ಜಲ ವೃದ್ಧಿಗೆ ಪೂರಕವಾಗಿ ತೆರೆದ ಬಾವಿ ನಿರ್ಮಾಣ ಕಾರ್ಯಕ್ಕೆ ನರೇಗಾದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲು ಗ್ರಾಪಂ ಮೂಲಕ ಆದ್ಯತೆ ನೀಡಲಾಗುತ್ತಿದೆ.

    ಅಚ್ಚರಿ ಮೂಡಿಸಿದ್ದ ನೀರಿನ ಕುಸಿತ: ಕಳೆದ ವರ್ಷ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಉಳಿದ ತಾಲೂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿತ್ತು. ಕೃಷಿ, ನದಿ ಪ್ರಧಾನ ತಾಲೂಕಿನಲ್ಲೇ ಅಂತರ್ಜಲ ಮಟ್ಟ ಕುಸಿದಿದ್ದು ಅಚ್ಚರಿಗೆ ಕಾರಣವಾಗಿತ್ತು. 2019ರ ಡಿಸೆಂಬರ್‌ನಲ್ಲಿ ಪುತ್ತೂರು ತಾಲೂಕಿನಲ್ಲಿ 9.29 ಮೀ.ನಲ್ಲಿದ್ದ ಅಂತರ್ಜಲ, 2020ರಲ್ಲಿ 10.33ಕ್ಕೆ ಇಳಿದಿತ್ತು. 2018ರಲ್ಲಿ ಅಂತರ್ಜಲ ನಿರ್ದೇಶನಾಲಯ ರಾಜ್ಯದೆಲ್ಲೆಡೆ ನಡೆಸಿದ ಸರ್ವೇ ಪ್ರಕಾರ ಅಂತರ್ಜಲ ಬಳಕೆಗೆ ಅಸುರಕ್ಷಿತ ಪಟ್ಟಿಯಲ್ಲಿ ಪುತ್ತೂರು (ಆಗ ಕಡಬ ಪುತ್ತೂರು ತಾಲೂಕಿಗೆ ಸೇರಿತ್ತು) ತಾಲೂಕನ್ನು ಗುರುತಿಸಿ ಕೊಳವೆ ಬಾವಿ ಕೊರೆತ ನಿಷೇಧಿತ ಪಟ್ಟಿಯಲ್ಲಿ ಸೇರಿಸಿತ್ತು.

    ಮಳೆಗಾಲ ಬಳಿಕವೂ ನಿರ್ಮಾಣ: 2021ರ ಏಪ್ರಿಲ್‌ನಿಂದ ನರೇಗಾ ಕಾಮಗಾರಿಯಲ್ಲಿ ಬಾವಿ ತೋಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮಳೆಗಾಲದಲ್ಲಿ ಬಾವಿ ಕೆಲಸ ಕಷ್ಟ. ಹಾಗಾಗಿ ಪ್ರಾರಂಭದಲ್ಲೇ ಬಾವಿ ತೆಗೆಯಲು ಒತ್ತು ನೀಡಲಾಗಿತ್ತು. ಈ ಮಧ್ಯೆ ಲಾಕ್‌ಡೌನ್‌ನಿಂದ ಕೂಲಿಯಾಳುಗಳ ಕೊರತೆಯಿದ್ದರೂ ವಿವಿಧೆಡೆ ಬಾವಿ ನಿರ್ಮಾಣದ ಕೆಲಸ ಶುರು ಮಾಡಲಾಗಿತ್ತು. ಸದ್ಯ ಕೆಲವು ಬಾವಿಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಮಳೆಗಾಲದ ಅನಂತರವೂ ಬಾವಿ ತೆಗೆಯಲು ಅವಕಾಶ ಇರುವ ಕಾರಣ ಸಂಖ್ಯೆಯಲ್ಲಿ ಏರಿಕೆ ಕಾಣಲಿದೆ ಎನ್ನುತ್ತಾರೆ ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು. ಮಂಗಳೂರಿನಲ್ಲಿ 177 ಬಾವಿಗಳು ನಿರ್ಮಾಣ ಹಂತದಲ್ಲಿದೆ. ಬಂಟ್ವಾಳ-135, ಬೆಳ್ತಂಗಡಿ- 112, ಕಡಬ-113, ಸುಳ್ಯ -97, ಮೂಡುಬಿದಿರೆ-65, ಪುತ್ತೂರು-60. ಈಗಿನ ಲೆಕ್ಕಾಚಾರದಲ್ಲಿ ಪುತ್ತೂರು ಕೊನೆಯ ಸ್ಥಾನದಲ್ಲಿದೆ.

    ಮಂಗಳೂರಿಗೆ ಪ್ರಥಮ ಸ್ಥಾನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕು ಈವರೆಗೆ 177 ತೆರೆದ ಬಾವಿ ನಿರ್ಮಾಣ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಮಂಗಳೂರು ತಾಲೂಕಿನಲ್ಲಿ ಜಲಶಕ್ತಿ ಅಭಿಯಾನದಡಿ ತೆರೆದ ಬಾವಿ ಕಾಮಗಾರಿಗೆ ಹೆಚ್ಚಿನ ಬೇಡಿಕೆಯಿದೆ. 2021-22ರಲ್ಲಿ ಮಂಗಳೂರು ತಾಲೂಕಿನಲ್ಲಿ ನರೇಗಾ ಯೋಜನೆಯಡಿ 40,076 ಮಾನವ ದಿನಗಳ ಕೆಲಸ ಮಾಡಲಾಗಿದೆ. ಜಿಲ್ಲಾ ಅಂತರ್ಜಲ ಟಾಸ್ಕ್‌ಫೋರ್ಸ್ ಮೂಲಕ ಪ್ರತಿವರ್ಷ ನಡೆಸುವ ಮೌಲ್ಯಮಾಪನದಲ್ಲಿ ಕಂಡುಕೊಂಡ ಅಂಶದಿಂದ ಕುಡಿಯುವ ನೀರಿನ ಬಳಕೆದಾರರು ಹೆಚ್ಚುತ್ತಿದ್ದಾರೆ. ಇದಕ್ಕಾಗಿ ಮಳೆ ನೀರು ಸಂರಕ್ಷಿಸಲು ಒತ್ತು ನೀಡಲಾಗುತ್ತಿದೆ.

    ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಬಾವಿ ತೋಡುವ ಕಾರ್ಯಕ್ಕೆ ನರೇಗಾದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. 15 ಅಡಿ ಆಳ, 8 ಅಡಿ ವ್ಯಾಸದ ಬಾವಿ ಕೊರೆದು ನಿಯಮಾನುಸಾರ ಕಾಮಗಾರಿ ಪೂರ್ಣಗೊಳಿಸಿದರೆ ನರೇಗಾ ಯೋಜನೆಯಡಿ 1.25 ಲಕ್ಷ ರೂ.ವರೆಗೆ ಹಣ ಪಾವತಿಸಲಾಗುತ್ತದೆ.
    ಕಿಶನ್ ರಾವ್
    ಸಹಾಯಕ ಕಾರ್ಯಕ್ರಮ ಸಂಯೋಜಕ ನರೇಗಾ ದ.ಕ ಜಿಲ್ಲೆ






    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts