More

    ರೋಗಕ್ಕೆ ನೆಲಕಚ್ಚಿದ ನೆಲಗಡಲೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಬೈಂದೂರು ತಾಲೂಕು ಕಾಲ್ತೋಡು ಗ್ರಾಮ ಕುರ್ಸಿ ಪ್ರದೇಶದಲ್ಲಿ ನೆಲಗಡಲೆ ಬೆಳೆಗೆ ನೌವಟ್ ರೋಗಬಾಧೆ ಕಾಡುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಕೀಟಗಳು ಮುಂಜಾನೆ, ರಾತ್ರಿ ದಾಳಿ ಮಾಡಿ ಗಿಡಗಳನ್ನು ತಿಂದು, ಹಸಿರು ಭೂಮಿಯನ್ನು ಕೆಂಪಾಗಿಸುತ್ತಿವೆ. ಕುರ್ಸಿಯಲ್ಲಿ ಹಿಂದಿನಿಂದಲೂ ನೆಲಗಡಲೆ ಕೃಷಿ ಮಾಡುತ್ತಿದ್ದು, 60 ಎಕ್ರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದಿಂದ ಹೈಬ್ರಿಡ್ ನೆಲಗಡಲೆ ಬೀಜ ಖರೀದಿಸಿ, ಬೀಜೋಪಚಾರ ನಂತರ ಕೃಷಿ ಮಾಡಿದ, 45 ದಿನಕ್ಕೆ ರೋಗಬಾಧೆ ಕಾಣಿಸಿಕೊಂಡಿದೆ. ನೆಲಗಡಲೆ ಬೆಳೆಗೆ ನೌವಟ್ ರೋಗ ಬಾಧೆ ಸಾಧಾರಣ ಕಂಡುಬರುತ್ತದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೆ ಕಟಾವು ಸಮಯದಲ್ಲಿ ಸಣ್ಣ ಪ್ರಮಾಣದ ನೌವಟ್ ರೋಗ ಕಾಣಿಸಿಕೊಳ್ಳುತ್ತಿತ್ತು. ಪ್ರಸಕ್ತ ನೆಲಗಡಲೆ ಕೃಷಿ ಮಾಡಿ 45 ದಿನದಲ್ಲೇ ರೋಗ ಕಾಣಿಸಿಕೊಂಡಿದೆ ಎಂದು ಕೃಷಿಕರು ಹೇಳಿದ್ದಾರೆ. ಬೆಳಗ್ಗೆ ನೆಲಗಡಲೆ ಹೊಲದಲ್ಲಿ ಒಂದೇ ಒಂದು ಹುಳ ಕಾಣಿಸದೆ, ಸುರಳಿ ಸುತ್ತಿದೆ ಎಲೆ, ಸುರಳಿ ಒಳಗೆ ಕೂತ ಮೊಟ್ಟೆ ಹಾಗೂ ಹಿಕ್ಕೆ ಕಾಣಿಸುತ್ತದೆ. ದಾಳಿ ಮಾಡಿದ ಕೀಟ ಎಲೆ ತಿಂದು ದಂಟು ಮಾತ್ರ ಉಳಿಸುತ್ತಿದೆ. ಗಿಡದಲ್ಲಿ ಎಲೆ ಇಲ್ಲದೆ ದ್ಯುತಿ ಸಂಶ್ಲೇಷಣಾ ಕ್ರಿಯೆ ನಿಂತು ಗಿಡ ಸಾಯುತ್ತದೆ. ನೆಲಗಡಲೆ ಬೀಜ ಕಟ್ಟದೆ ಸಾಯುತ್ತಿದ್ದು, ಇಳುವರಿ ಕಡಿತಗೊಳ್ಳಲಿದೆ.

    ಎಲ್ಲೆಲ್ಲಿ ನೆಲಗಡಲೆ ಕೃಷಿ ಇದೆ?: ಉಡುಪಿ ಜಿಲ್ಲೆಯಲ್ಲಿ ಸುಗ್ಗಿ ಅನಂತರ 200 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಕೃಷಿ ಮಾಡಲಾಗುತ್ತಿದೆ. ಬೈಂದೂರು ತಾಲೂಕಿನಲ್ಲಿ ಅತಿ ಹೆಚ್ಚು ನೆಲಗಡೆಲೆ ಕೃಷಿ ಇದೆ. ಕಾಲ್ತೋಡು, ಕುರ್ಸಿ, ಬೈಂದೂರು, ಬಿಜೂರು, ಉಪ್ಪುಂದ, ಕೆರ್ಗಾಲ್, ಕಂಬದಕೋಣೆ, ನಾಗೂರು, ಅಲ್ಸಾಡಿ, ಹಳಗೇರಿ, ಹೊಸ್ಕೋಟೆ, ತಕ್ಕಟ್ಟೆ, ಮಣೂರು, ಸಾಲಿಗ್ರಾಮ, ಪಾಂಡೇಶ್ವರ ಪ್ರದೇಶದಲ್ಲಿ ಬೆಳೆಯುತ್ತಾರೆ. ನೆಲಗಡಲೆ 110 ದಿನದ ಬೆಳೆಯಾಗಿದ್ದು, 45 ದಿನದಲ್ಲಿ ರೋಗ ಬಾಧೆಗೆ ಸಿಲುಕಿದ್ದರಿಂದ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ವೇಳೆಯಲ್ಲೇ ಕೀಟ ಬಾಧೆ ಇರುವುದರಿಂದ ರೋಗ ನಿಯಂತ್ರಣ ಕೂಡ ಕಷ್ಟ. ಹುಳಗಳು ಮಣ್ಣಿನ ಅಡಿ ಸೇರುವುದರಿಂದ ಔಷಧವೂ ನಾಟುತ್ತಿಲ್ಲ. ಈ ಸಮಸ್ಯೆ ಪರಿಹರಿಸುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ರೈತರಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಬೈಂದೂರು ಕೃಷಿ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಗಾಯತ್ರಿದೇವಿ ತಿಳಿಸಿದ್ದಾರೆ.

    ಹಿಂದಿನಿಂದಲೂ ನೆಲಗಡಲೆ ಕೃಷಿ ನಂಬಿಕೊಂಡಿದ್ದು, ಇದು ವಾಣಿಜ್ಯ ಬೆಳೆಯಾಗಿದೆ. ಸುಗ್ಗಿ ಗದ್ದೆ ಕೊಯ್ಲು ಮುಗಿದ ಅನಂತರ ನೆಲೆಗಡಲೆ, ಉದ್ದು, ಹುರುಳಿ ಬೆಳೆಯುತ್ತಿದ್ದು, ಹೆಚ್ಚು ಪ್ರದೇಶದಲ್ಲಿ ನೆಲಗಡಲೆ ಇದೆ. ದುಬಾರಿ ಕೃಷಿ ಕೂಲಿ, ಬೀಜೋಪಚಾರ, ಬೆಳೆ ನಿರ್ವಹಣೆಗೆ ಸಾವಿರಾರು ರೂ. ಖರ್ಚು ಮಾಡಿದರೆ, ಎಕ್ರೆಗೆ ಗರಿಷ್ಠ 15 ಕ್ವಿಂಟಾಲ್ ಬೆಳೆ ಸಿಗುತ್ತದೆ. ಕೃಷಿ ಇಲಾಖೆ ನೆಲಗಡಲೆ ರೋಗಕ್ಕೆ ಪರಿಹಾರ ಸೂಚಿಸಿದರೆ ಉತ್ತಮ.
    ಸದಾಶಿವ ಆಚಾರ್, ಕುರ್ಸಿಯಲ್ಲಿ ನೆಲಗಡಲೆ ಬೆಳೆದ ಕೃಷಿಕ

    ಹಿಂದೆಲ್ಲ ಕಟಾವು ಸಮಯ ನೌವಟ್ ಕೀಟ ಬಾಧೆ ಕಾಣಿಸಿಕೊಳ್ಳುತ್ತಿದ್ದರೆ, ಈ ಬಾರಿ ನಾಟಿ ಮಾಡಿ 45 ದಿನಕ್ಕೆ ರೋಗ ಕಾಣಿಸಿಕೊಂಡಿದೆ. ಹೈಬ್ರಿಡ್ ನೆಲಗಡಲೆ ಕೃಷಿ ಮಾಡಿದ್ದು, ಎಕ್ರೆಗೆ 60 ಕೆಜಿ ಬೀಜ ಬೇಕಿದ್ದು, 63 ರೂ. ಬೆಲೆಯಲ್ಲಿ ಇಲಾಖೆಯೇ ಪೂರೈಸಿದೆ. ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರೋಗ ನಿಯಂತ್ರಣಕ್ಕೆ ಪರಿಹಾರ ಮಾರ್ಗ ಸೂಚಿಸಿದರೆ ಇರುವ ಬೆಳೆಯಾದರೂ ರಕ್ಷಿಸಿಕೊಳ್ಳಬಹುದು. ಸರ್ಕಾರ ನಷ್ಟ ಪರಿಹಾರ ನೀಡಬೇಕು.
    ರಾಮಯ್ಯ ಶೆಟ್ಟಿ, ನೆಲಗಡಲೆ ಕೃಷಿಕ ಕುರ್ಸಿ

    ನೆಲಗಡಲೆ ಕೃಷಿಗೆ ಸ್ಕೋಡಪ್ಸ್ (ನೌವಟ್) ಬಾಧೆ ಲಕ್ಷಣವಿದ್ದು, ಬೆಳಗ್ಗೆ ಮತ್ತು ರಾತ್ರಿ ದಾಳಿ ಮಾಡಿ, ಗಿಡದಲ್ಲಿ ಮೊಟ್ಟೆಯಿಟ್ಟು, ಗಿಡಗಳು ಒತ್ತೊತ್ತಿಗೆ ಇದ್ದರೆ ಅಕ್ರಮಣ ಪ್ರಮಾಣ ಜಾಸ್ತಿಯಾಗುತ್ತದೆ. ರಾತ್ರಿ ಸಮಯ ಮೊನೋಪೊಟೋಪಾಸ್ ಅಥವಾ ಕೀಟ ನಿಯಂತ್ರಣಕ್ಕೆ ಸಿದ್ಧಪಡಿಸಿದ ಔಷಧ ಸಿಂಪಡಿಸುವ ಮೂಲಕ ರೋಗ ಸ್ವಲ್ಪಮಟ್ಟಗೆ ನಿಯಂತ್ರಣ ಸಾಧ್ಯ.
    ಗಾಯತ್ರಿದೇವಿ, ಕೃಷಿ ಅಧಿಕಾರಿ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts