More

    ಶೇಂಗಾ ಬೆಳೆಗಾರರಿಗೆ ತಪ್ಪದ ಸಂಕಷ್ಟ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಬೆಲೆ ಕುಸಿತದಿಂದ ಶೇಂಗಾ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನ 1,550 ಹೆಕ್ಟೇರ್ ಪ್ರದೇಶದಲ್ಲಿ ರೈತರು ಶೇಂಗಾ ಬೀಜ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಮಳೆ ಉತ್ತಮವಾಗಿದ್ದರಿಂದ ಶೇಂಗಾ ಉತ್ತಮವಾಗಿ ಕಾಯಿ ಕಟ್ಟಿದೆ. ಇದೀಗ ಶೇಂಗಾ ಬೆಳೆ ಕಿತ್ತು ಜಮೀನಿನಲ್ಲಿ ಒಣ ಹಾಕಲಾಗಿದೆ. ನಿತ್ಯ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ ಬೆಳೆ ನೀರಿನಲ್ಲಿ ನಿಂತು ಮೊಳಕೆಯೊಡುವ ಹಂತಕ್ಕೆ ತಲುಪಿದೆ. ಹೀಗಾಗಿ, ರೈತರು ಮಳೆಯಿಂದ ತೋಯ್ದ ಬೆಳೆ ರಕ್ಷಿಸಿಕೊಳ್ಳಲಾಗದೆ ಗೋಳಾಡುತ್ತಿದ್ದಾರೆ.

    ಬೆಲೆ ಕುಸಿತ: ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕೈದು ತಿಂಗಳ ಹಿಂದೆ ಶೇಂಗಾ 1 ಕ್ವಿಂಟಾಲ್​ಗೆ 6,500 ರೂಪಾಯಿಗೂ ಅಧಿಕ ದರವಿತ್ತು. ಈಗ 2,500 ರೂ. ನಿಂದ 4,500 ಸಾವಿರ ರೂಪಾಯಿಗೆ ಕುಸಿದಿದೆ. ಸಂಪೂರ್ಣ ಒಣಗಿದ ಶೇಂಗಾಗೆ ಮಾತ್ರ 4,500 ಸಾವಿರ ರೂ. ವರೆಗೆ ಬೆಲೆ ದೊರೆಯುತ್ತಿದೆ.

    ಮಾಡಿದ ವೆಚ್ಚದಷ್ಟು ಹಣವೂ ಬರುತ್ತಿಲ್ಲ: ಒಂದು ಎಕರೆ ಶೇಂಗಾ ಬೆಳೆಯಲು 50 ಕೆಜಿ ಬೀಜ, ಔಷಧ, ಗೊಬ್ಬರ ಹಾಗೂ ಕೂಲಿ ಕಾರ್ವಿುಕರ ಸಂಬಳ ಸೇರಿ 22ರಿಂದ 24 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಉತ್ತಮ ಇಳುವರಿ ಬಂದರೂ ಎಕರೆಗೆ 25 ರಿಂದ 30 ಚೀಲದಷ್ಟು ಶೇಂಗಾ ಬರುತ್ತದೆ. ಒಂದು ಚೀಲ 30 ಕೆಜಿ ತೂಕ ಇರುತ್ತದೆ. ಸದ್ಯದ ಬೆಲೆಗೆ ಶೇಂಗಾ ಮಾರಾಟ ಮಾಡಿದರೆ, ಬಿತ್ತನೆಗೆ ಮಾಡಿದ ಖರ್ಚು ಮರಳದಂಥ ಸ್ಥಿತಿಯಿದೆ.

    ಕಣ್ಣೀರಿಡುತ್ತಿರುವ ಬೆಳೆಗಾರರು: ಹಲವು ರೈತರ ಜಮೀನಿನಲ್ಲಿ ಶೇಂಗಾ ಬೆಳೆ ನಿರಂತರ ಮಳೆಯಿಂದ ನೀರಿನಲ್ಲಿ ನಿಂತಿದೆ. ಕೆಲವರು ಕಷ್ಟಪಟ್ಟು ಉಳಿಸಿಕೊಂಡಿದ್ದು, ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಜಮೀನಿನಲ್ಲಿಯೇ ಬೆಳೆ ಬಿಟ್ಟರೆ ಮೊಳಕೆಯೊಡೆದು ಸಂಪೂರ್ಣ ಹಾಳಾಗುತ್ತದೆ. ಹೀಗಾಗಿ, ಏನು ಮಾಡಬೇಕು ಎಂದು ತೋಚದೆ ಶೇಂಗಾ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.

    ಮಳೆಯಿಂದಾಗಿ ಶೇಂಗಾ ಬೆಳೆ ಸಂರಕ್ಷಣೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಈಗಾಗಲೇ ಮಳೆಯಿಂದ ಹಾನಿಯಾದ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಶೇಂಗಾ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಅಲ್ಲದೆ, ಶೇಂಗಾ ಬೆಳೆಗೆ ಕನಿಷ್ಠ 6 ಸಾವಿರ ರೂ. ಬೆಂಬಲ ಬೆಲೆ ಘೊಷಿಸಬೇಕು.

    | ಮಹೇಶ ಪಾಟೀಲ ಶೇಂಗಾ ಬೆಳೆಗಾರ

    ಮಾರುಕಟ್ಟೆಗೆ ಹಸಿ ಶೇಂಗಾ ಹೆಚ್ಚಾಗಿ ಬರುತ್ತಿರುವ ಕಾರಣ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಒಣಗಿದ ಹಾಗೂ ಗುಣಮಟ್ಟದ ಶೇಂಗಾ ಫಸಲಿಗೆ 4,500 ರೂ. ವರೆಗೂ ಬೆಲೆಯಿದೆ. ರೈತರು ಮಳೆ ನಿಂತ ಬಳಿಕ ಬೆಳೆ ಒಣಗಿಸಿ ಮಾರುಕಟ್ಟೆಗೆ ತಂದರೆ, ಕೊಂಚ ಉತ್ತಮ ಬೆಲೆ ದೊರೆಯಲಿದೆ.

    | ಪರಮೇಶ ನಾಯ್ಕ ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts