More

    ಬೇಸಿಗೆಗೂ ಮುನ್ನವೇ ಅಂತರ್ಜಲ ಕುಸಿತ

    ಸುಭಾಸ ಧೂಪದಹೊಂಡ ಕಾರವಾರ
    ಕಳೆದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಹದವಾಗಿ ಮಳೆಯಾಗಿದೆ. ಮೇಲಾಗಿ ಇತ್ತೀಚೆಗೆ ಹಿಂಗಾರಿನಲ್ಲೂ ಒಂದೆರಡು ಬಾರಿ ಮಳೆ ಬಿದ್ದಿದೆ. ಆದರೂ ಅಂತರ್ಜಲ ಮಟ್ಟ ಏರಿದಂತಿಲ್ಲ. ಬೇಸಿಗೆ ಆರಂಭಕ್ಕೂ ಮುಂಚೆಯೇ ತಾಲೂಕಿನ ಕೆಲ ಬಾವಿಗಳು ನೀರು ಆರಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಈಗಲೇ ಬಾವಿಯ ನೀರು ಬತ್ತಿ ಹೋದರೆ ಇನ್ನು ಮೂರು ತಿಂಗಳ ಬಿರು ಬೇಸಿಗೆಯ ಕತೆಯೇನು ಎಂಬ ಭಯ ಜನರದ್ದಾಗಿದೆ.

    ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಗೌಡಾವಾಡ ಕೋಣಮಕ್ಕಿಯಲ್ಲಿ ಸುಮಾರು 20 ಮನೆಗಳಿವೆ. 10 ರಷ್ಟು ಬಾವಿಗಳಿವೆ. ಕೆಲ ಬೋರ್​ವೆಲ್​ಗಳೂ ಇವೆ. ಗ್ರಾಮದ ನಾಲ್ಕೈದು ಬಾವಿಗಳು ಈಗಾಗಲೇ ಬತ್ತಿವೆ. ಸದ್ಯ ಗ್ರಾಮಸ್ಥರು ಅಕ್ಕಪಕ್ಕದ ಮನೆಯ ಬಾವಿಯಿಂದ ನೀರು ತಂದು ದೈನಂದಿನ ಕಾರ್ಯ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಗ್ರಾಪಂನಿಂದ ನೀರಿನ ಪೂರೈಕೆ ವ್ಯವಸ್ಥೆ ಇದ್ದರೂ ಮನೆ ಮನೆಗೆ ನಲ್ಲಿ ನೀರು ಮುಟ್ಟಿಲ್ಲ. ಕೆರವಡಿ ಬಹು ಗ್ರಾಮ ಕುಡಿಯುವ ನೀರಿನ ಪೈಪ್​ಲೈನ್ ಮಾಡುವ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ. ಇನ್ನು ಮಾರ್ಚ್, ಏಪ್ರಿಲ್ ಹೊತ್ತಿಗೆ ಉಳಿದ ಬಾವಿಗಳ ನೀರೂ ಬತ್ತಿದರೆ ನಮ್ಮ ಕತೆಯೇನು ಎಂಬುದು ಆ ಭಾಗದ ಜನರ ಆತಂಕ.

    ಗ್ರಾಮದಲ್ಲಿ ಮೊದಲಿನಿಂದಲೂ ಬೇಸಿಗೆಯಲ್ಲಿ ಬಾವಿಗಳ ನೀರು ಬತ್ತುತ್ತದೆ. ಆದರೆ, ಸಾಮಾನ್ಯವಾಗಿ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ನೀರಿನ ಬಾವಿಗಳು ಒಣಗುತ್ತಿದ್ದವು. ಈ ಬಾರಿ ಫೆಬ್ರವರಿ ಅಂತ್ಯಕ್ಕೇ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ಇದು ಮುಂದೆ ಭಾರಿ ನೀರಿನ ಸಮಸ್ಯೆ ಉಂಟಾಗುವ ಮುನ್ಸೂಚನೆಯೇ ಎಂಬ ಆತಂಕ ಶುರುವಾಗಿದೆ.
    | ಗಿರಿಯಾ ಗೌಡ ಸ್ಥಳೀಯ

    ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಈಗಾಗಲೇ ದರಪಟ್ಟಿ ಆಹ್ವಾನಿಸಲಾಗಿದೆ.
    | ರಾಮಚಂದ್ರ ಕಟ್ಟಿ ತಹಸೀಲ್ದಾರ್ ಕಾರವಾರ

    ತೊಂದರೆ ಸಾಧ್ಯತೆ
    ಜಿಲ್ಲೆಯಲ್ಲಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಕಳೆದ ವರ್ಷ ಟ್ಯಾಂಕರ್ ಮೂಲಕ ನೀರೊದಗಿಸಿದ ಗ್ರಾಮಗಳನ್ನು ಪಟ್ಟಿ ಮಾಡಿ, ಅಲ್ಲಿ ನೀರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲು ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಲಾಗಿದೆ. ಅಷ್ಟಾಗಿಯೂ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಿದ್ಧತೆ ನಡೆಸಿದ್ದು, ಟೆಂಡರ್ ಕರೆದು ಅಗತ್ಯವಿದ್ದಲ್ಲಿ ತಕ್ಷಣ ಪೂರೈಕೆಗೆ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯ 234 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಅಂಕೋಲಾದಲ್ಲಿ 55, ಭಟ್ಕಳದಲ್ಲಿ 21, ಹಳಿಯಾಳದಲ್ಲಿ 34, ಜೊಯಿಡಾದಲ್ಲಿ 8, ಕಾರವಾರದಲ್ಲಿ 13, ಕುಮಟಾದಲ್ಲಿ 31, ಮುಂಡಗೋಡಿನಲ್ಲಿ 4, ಸಿದ್ದಾಪುರದಲ್ಲಿ 20 ಶಿರಸಿಯಲ್ಲಿ 9 ಯಲ್ಲಾಪುರದ 5 ಗ್ರಾಮಗಳಿಗೆ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts