More

    ಟಿಎಂಸಿ ಆಡಳಿತ ವಿರೋಧಿ ಅಲೆಗೆ ಹತ್ತು ಕಾರಣ

    | ರಾಘವ ಶರ್ಮ ನಿಡ್ಲೆ ಕೊಲ್ಕತ್ತಾ (ಪ.ಬಂಗಾಳ)

    ಪಶ್ಚಿಮ ಬಂಗಾಳದಲ್ಲಿ 1977ರಿಂದ 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ದಬ್ಬಾಳಿಕೆ ಹಾಗೂ ದುರಾಡಳಿತದಿಂದ ಕಂಗೆಟ್ಟಿದ್ದ ಪಶ್ಚಿಮ ಬಂಗಾಳದ ಜನರು 2011ರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರಲ್ಲಿ ಭರವಸೆಯ ಬೆಳ್ಳಿಕಿರಣ ಕಂಡಿದ್ದರು. ಆದರೆ, 10 ವರ್ಷಗಳ ಆಡಳಿತದಲ್ಲಿ ಜನರ ನಿರೀಕ್ಷೆಗಳನ್ನು ಈಡೇರಿಸಲು ಟಿಎಂಸಿ ವಿಫಲವಾಗಿರುವುದರಿಂದ ಜನ ಪೊರಿಬೊರ್ತನ್ (ಪರಿವರ್ತನೆ) ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಭಾವನೆ ಬಳಸಿಕೊಂಡು ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸಿರುವ ಬಿಜೆಪಿ ಮಮತಾಗೆ ಸವಾಲೊಡ್ಡಿದೆ. ಮೊದಲ ಬಾರಿಗೆ ಬಹುಪಾಲು ಕ್ಷೇತ್ರಗಳಲ್ಲಿ ಹಿಂದೂ-ಮುಸ್ಲಿಂ ರಾಜಕೀಯ ವಿಭಜನೆ ಕಂಡುಬರುತ್ತಿದೆ. ಟಿಎಂಸಿಯ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಆಯ್ದ ಪತ್ರಕರ್ತರೊಂದಿಗೆ ನಡೆಸಿದ ಅನೌಪಚಾರಿಕ ಮಾತುಕತೆಯಲ್ಲಿ ಮೋದಿ ಜನಪ್ರಿಯತೆ ಒಪ್ಪಿಕೊಂಡಿರುವುದು ಬಿಜೆಪಿ ಬಲವರ್ಧನೆಗೆ ಸಾಕ್ಷಿ. ಹಾಗಂತ, ಬಿಜೆಪಿ ಅಧಿಕಾರಕ್ಕೆ ಬಂದೇಬಿಡುತ್ತದೆ ಎಂದಲ್ಲ. ಒಂದೊಮ್ಮೆ ರಾಜ್ಯದಲ್ಲಿ ಅಪ್ರಸ್ತುತ ಎನಿಸಿದ್ದ ಬಿಜೆಪಿ, ಈಗ ಬೆಳೆದು ನಿಲ್ಲಲು ಮಮತಾ ಆಡಳಿತವೇ ಹೇಗೆ ಕಾರಣವಾಯ್ತು ಎನ್ನುವ ಅವಲೋಕನ ಇಲ್ಲಿದೆ.

    1. ಭ್ರಷ್ಟಾಚಾರ

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವೈಯಕ್ತಿಕ ಭ್ರಷ್ಟಾಚಾರದ ಆರೋಪ ಇಲ್ಲ. ಆದರೆ, ಸ್ಥಳೀಯ ಮಟ್ಟದ ಭ್ರಷ್ಟಾಚಾರದ ಬಗ್ಗೆ ಗ್ರಾಮೀಣ ಜನರಲ್ಲಿ ವಿಪರೀತ ಆಕ್ರೋಶವಿದೆ. ಜನಕಲ್ಯಾಣ ಯೋಜನೆಗಳ ಅನುದಾನಗಳನ್ನು ಟಿಎಂಸಿಯ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ‘ತಿಮಿಂಗಿಲ’ಗಳಂತೆ ನುಂಗುತ್ತಿರುವುದರ ಬಗ್ಗೆ ಹತಾಶೆ ಎದ್ದುಕಾಣುತ್ತಿದೆ. ಅಂಫಾನ್ ಚಂಡಮಾರುತಕ್ಕೆ ಸಿಲುಕಿ ಮನೆ, ಕೃಷಿ ನಷ್ಟ ಅನುಭವಿಸಿದ ರೈತರ ಹಣವನ್ನೂ ಬಿಟ್ಟಿಲ್ಲ. ‘ವಿಜಯವಾಣಿ’ ಜತೆ ಮಾತನಾಡಿದ ಅನೇಕ ಹಳ್ಳಿಗರು, ‘ಸ್ಥಳೀಯ ಕಾರ್ಯಕರ್ತರು ಬೆದರಿಕೆ ಹಾಕಿ ಹಣ ಕೀಳುತ್ತಾರೆ. ಹಣ ಕೊಡದಿದ್ದರೆ ನಾವಿಲ್ಲಿ ಬದುಕಲು ಸಾಧ್ಯವೇ ಇಲ್ಲ. ಮನೆ ಮೇಲೆ ದಾಳಿ ಅಥವಾ ಕುಟುಂಬಸ್ಥರ ಮೇಲೆ ಹಲ್ಲೆ ನಡೆಯುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

    2. ಕುಡಿಯುವ ನೀರಿನ ಸಮಸ್ಯೆ

    ಬಂಗಾಳದ ಬಹುಪಾಲು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಅನೇಕ ಹಳ್ಳಿಗಳಲ್ಲಿ ಜನರು ಮನೆ ಹಾಗೂ ಸುತ್ತಮುತ್ತಲಿನ ಪರಿಸರಗಳಲ್ಲಿ ಸಣ್ಣಸಣ್ಣ ಕೃತಕ ಕೆರೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮಳೆ ನೀರಿನಿಂದ ಇದನ್ನು ತುಂಬಿಸಲಾಗುತ್ತದೆ. ಇದು ಮೀನುಗಾರಿಕೆಗೆ ಬಳಕೆಯಾಗುವುದಲ್ಲದೆ, ಕುಡಿಯುವ ನೀರಿನ ಅಭಾವವಿದ್ದಾಗ ಇದನ್ನೇ ಕುಡಿಯಲು ಬಳಸಲಾಗುತ್ತದೆ ಎಂದೂ ಜನ ಹೇಳುತ್ತಾರೆ. ಮಮತಾ ಹೋರಾಟ ನಡೆಸಿದ ನಂದಿಗ್ರಾಮ, ಸಿಂಗೂರಿನಲ್ಲೂ ಇಂಥದ್ದೇ ದೃಶ್ಯಗಳು ಕಾಣಸಿಗುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಆಕ್ರೋಶ ಹಲವೆಡೆ ಟಿಎಂಸಿವಿರೋಧಿ ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

    3. ಹಿಂಸಾಚಾರ, ದುರಾಡಳಿತ

    ಬೆದರಿಕೆ, ಹತ್ಯೆ, ಗಲಭೆಗಳ ಕಾರಣಕ್ಕಾಗಿ ಬಂಗಾಳದ ಜನತೆ ಕಮ್ಯುನಿಸ್ಟ್ ಸರ್ಕಾರ ಬಡಿದಟ್ಟಿದರು. ಆದರೆ, ಟಿಎಂಸಿ ಸರ್ಕಾರವೂ ಕಮ್ಯುನಿಸ್ಟರ ಹೆಜ್ಜೆಗುರುತನ್ನೇ ಅನುಸರಿಸಿ, ಹಿಂಸಾಚಾರ ಮುಂದುವರಿಸಿತು. ರಾಜ್ಯದಲ್ಲಿ ಬಿಜೆಪಿ ಬಗ್ಗೆ ಒಲವು ಹೆಚ್ಚಲು ಇದು ಕೂಡ ಪ್ರಮುಖ ಕಾರಣ. ಟಿಎಂಸಿ ಕಾರ್ಯಕರ್ತರಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಿರುವ ಬಿಜೆಪಿ ಕಾರ್ಯಕರ್ತರು ಕಳೆದ 2-3 ವರ್ಷಗಳಿಂದ ‘ಹಿಂಸಾಚಾರಮುಕ್ತ’ ಬಂಗಾಳಕ್ಕೆ ಬಿಜೆಪಿಯೇ ಸೂಕ್ತ ಎಂಬ ಅಭಿಯಾನ ನಡೆಸುತ್ತಿರುವುದೂ ಪಕ್ಷದ ಸಂಘಟನಾತ್ಮಕ ವಿಸ್ತರಣೆಗೆ ಪ್ರೇರಣೆಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 18 ಸೀಟು ಗೆದ್ದ ಬಳಿಕ ಸುಮ್ಮನೆ ಕೂರದ ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರವಾಸ ಮಾಡಿ 2021ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದರು. ಈಗಲೂ ಆರೆಸ್ಸೆಸ್ ಮತ್ತು ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆ ರಾಜ್ಯದ ವಿವಿಧ ಭಾಗಗಳಲ್ಲಿ ಬೀಡುಬಿಟ್ಟಿದೆ. ‘ನಮಗೆ ಗಲಾಟೆ, ಗದ್ದಲ ಬೇಕಾಗಿಲ್ಲ. ಅಭಿವೃದ್ಧಿ, ಉದ್ಯೋಗ, ಮೂಲಸೌಕರ್ಯ ವೃದ್ಧಿಯಾಗಬೇಕಿದೆ’ ಎಂಬ ಭಾವನೆ ತಳಮಟ್ಟದಲ್ಲಿ ಎದ್ದುಕಾಣುತ್ತಿದೆ.

    4. ಮೋದಿ ಜನಪ್ರಿಯತೆ

    ತೈಲ ಬೆಲೆಏರಿಕೆ, ವಿವಾದಿತ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಗುರಿ ಮಾಡಿದ್ದರೂ, ಮೋದಿ ‘ಹೊರಗಿನವರು’ ಎಂದು ಮಮತಾ ಗುಡುಗಿದರೂ, ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಗ್ರಾಫ್ ಕೆಳಗಿಳಿದಿಲ್ಲ. ‘ಬಂಗಾಳದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಕೇಂದ್ರದಲ್ಲೂ ಇದ್ದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ, ಬಿಜೆಪಿಗೂ ಒಂದು ಅವಕಾಶವೇಕೆ ನೀಡಬಾರದು’ ಎಂದು ಪ್ರಶ್ನಿಸುತ್ತಾರೆ ಕೊಲ್ಕತ್ತದ ಸ್ಥಳೀಯ ವ್ಯಾಪಾರಿ ಜೈದೀಪ್. ಬಂಗಾಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿಲ್ಲದಿದ್ದರೂ, ಜನ ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.

    5. ನಿರುದ್ಯೋಗದ ಬರೆ

    9.5 ಕೋಟಿ ಜನಸಂಖ್ಯೆಯಿರುವ ರಾಜ್ಯದಲ್ಲಿ ನಿರುದ್ಯೋಗ ಚುನಾವಣಾ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ವಿದ್ಯಾವಂತ ಯುವಕರು ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಹೋಗುತ್ತಿದ್ದಾರೆ, ಬಂಗಾಳದಲ್ಲಿ ಕೆಲಸ ಸಿಗುತ್ತಿಲ್ಲ ಎಂಬ ಹತಾಶೆಯನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ‘ಕೆಲಸಕ್ಕಾಗಿ ಮುಂಬೈಗೆ ಹೋದೆ. ಆದರೆ ಕರೊನಾದಿಂದಾಗಿ ಕೆಲಸ ಕಳೆದುಕೊಂಡು ಹಳ್ಳಿಗೆ ಬಂದು ಈಗ ಅಕ್ಕ-ಭಾವನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ರಾಜ್ಯದಲ್ಲೇ ಕೆಲಸ ಸಿಗುತ್ತಿದ್ದರೆ ಮುಂಬೈಗೆ ಏಕೆ ಹೋಗುತ್ತಿದ್ದೆ? ಇಲ್ಲಿ ಕೈಗಾರಿಕೆಗಳು ಬಂದರೆ ಯುವಕರಿಗೆ ನೌಕರಿ ಸಿಕ್ಕಿ ಬದುಕಿಗೆ ಹಾದಿಯಾಗಬಹುದು’ ಎನ್ನುತ್ತಾರೆ ನದಿಯಾ ಜಿಲ್ಲೆಯ ಮಜ್ದಿಯಾ ಪಟ್ಟಣದ ನಿವಾಸಿ ಅನೂಪ್ ದಾಸ್. ಜಮೀನು ಸ್ವಾಧೀನ ವಿರೋಧಿಸಿ ಆಂದೋಲನದಲ್ಲಿ ಭಾಗಿಯಾಗಿದ್ದ ನಂದಿಗ್ರಾಮ, ಸಿಂಗೂರಿನಲ್ಲೂ ಕೈಗಾರಿಕೆಗಳು ರಾಜ್ಯಕ್ಕೆ ಬರಬೇಕು ಎಂಬ ಮಾತುಗಳು ಹೆಚ್ಚುತ್ತಿವೆ. ‘ಕೃಷಿ ಭೂಮಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಕೈಗಾರಿಕೆಗಳಿಗೆ ಅವಕಾಶ ನೀಡಿದರೆ, ನಮ್ಮ ಮಕ್ಕಳು ಬೇರೆ ರಾಜ್ಯಕ್ಕೆ ಹೋಗುವುದು ತಪು್ಪತ್ತದೆ’ ಎನ್ನುವುದು ಸಿಂಗೂರು ನಿವಾಸಿ ಅಶೋಕಕುಮಾರ್ ದಾಸ್ ಅಭಿಪ್ರಾಯ.

    6. ಮುಸ್ಲಿಂ ಓಲೈಕೆ

    ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ರಾಜ್ಯದ ಮುಸಲ್ಮಾನರು ನಿರ್ಧರಿಸುತ್ತಾರೆ ಎಂಬ ಧೋರಣೆ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಟಿಎಂಸಿಗಳದ್ದು. ಹಿಂದೂ ಮತಗಳ ಕ್ರೋಡೀಕರಣದಿಂದಲೇ ಅನೇಕ ರಾಜ್ಯಗಳನ್ನು ಗೆದ್ದಿರುವ ಬಿಜೆಪಿಗೆ ಬಂಗಾಳದಲ್ಲೂ ಎದುರಾಳಿಗಳ ಮುಸ್ಲಿಂ ಓಲೈಕೆ ರಾಜಕಾರಣ ‘ಸಂಘಟನೆ ವಿಸ್ತರಣೆ’ಗೆ ನೆರವಾಗಿದೆ. ಇದಕ್ಕೆ ಕಳಶವಿಟ್ಟಂತೆ, ಬಿಜೆಪಿಯ ‘ಜೈ ಶ್ರೀರಾಮ್ ಘೋಷಣೆಗೆ ಮಮತಾ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಿಂದ ಹೊರನಡೆದ ಘಟನೆ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವುದು ಜನರ ಮಾತುಗಳಲ್ಲೇ ವ್ಯಕ್ತವಾಗಿದೆ. ‘ಬಂಗಾಳದಲ್ಲಿ ಹಿಂದೂ-ಮುಸ್ಲಿಂ ವಿಭಜನೆ ಇರಲಿಲ್ಲ.

    7. ಕೇಂದ್ರದ ಯೋಜನೆ ಬಗ್ಗೆ ಅಸಡ್ಡೆ

    ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯನ್ನು ಟಿಎಂಸಿ ಸರ್ಕಾರ ರಾಜ್ಯದಲ್ಲಿ ಜಾರಿ ಮಾಡದಿರುವ ಬಗ್ಗೆ ಕೃಷಿಕರಲ್ಲಿ ಅಸಮಾಧಾನವಿದೆ. ‘ರಾಜಕೀಯ ವಿರೋಧವೇನೋ ಸರಿ. ಆದರೆ, ಜನಹಿತ ಯೋಜನೆಗಳನ್ನೂ ಬೇಡವೆನ್ನುವುದು ಎಷ್ಟರಮಟ್ಟಿಗೆ ಸರಿ’ ಎಂಬ ಪ್ರಶ್ನೆ ಹಲವೆಡೆ ಕೇಳಿಬಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಪ್ರತಿಯೊಬ್ಬ ಅರ್ಹ ಕೃಷಿಕನ ಖಾತೆಗೆ ಮೂರು ವರ್ಷಗಳ -ಠಿ; 18000 ಹಣ ಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಷಾ ಪ್ರತಿ ರ್ಯಾಲಿಯಲ್ಲೂ ತಿಳಿಸುತ್ತಿದ್ದಾರೆ. ಸ್ವಚ್ಛ ಭಾರತ್ ಯೋಜನೆ ಜಾರಿಯಲ್ಲೂ ರಾಜ್ಯ ಹಿಂದೆ ಬಿದ್ದಿದೆ. ಹಲವಾರು ಹಳ್ಳಿಗಳಲ್ಲಿ ಜನ ಈಗಲೂ ಬಯಲು ಶೌಚಗೃಹಗಳನ್ನೇ ಬಳಸುತ್ತಿರುವುದು ಇದಕ್ಕೆ ನಿದರ್ಶನ.

    8. ಟಿಎಂಸಿ ಕೇಡರ್ ಶಿಫ್ಟ್

    ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಟಿಎಂಸಿಯಿಂದ ಅಪಾರ ಪ್ರಮಾಣದ ನಾಯಕರು, ಕಾರ್ಯಕರ್ತರು ಮತ್ತವರ ಬೆಂಬಲಿಗರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇದು ಮತದಾರರನ್ನೂ ಬಿಜೆಪಿ ಕಡೆ ವಾಲಿಸಿದೆ. ಹೆಚ್ಚುಕಡಿಮೆ ಶೇಕಡ 20ರಷ್ಟು ಸಂಘಟನೆಯೇ ಬಿಜೆಪಿ ಸೇರಿಕೊಂಡಿರುವುದರಿಂದ ‘ಗ್ರೌಂಡ್ ಲೆವೆಲ್’ನಲ್ಲಿ ಮಮತಾ ಏಕಾಂಗಿ ಹೋರಾಟ ನಡೆಸುವಂತಾಗಿದೆ.

    9. ಕೇಸರಿ ಕಾರ್ಯಕರ್ತರಲ್ಲಿ ಹುರುಪು

    ಕಳೆದ 2-3 ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಚಹರೆಯೇ ಬದಲಾಗಿದೆ ಮತ್ತು ತಳಮಟ್ಟದ ಕಾರ್ಯಕರ್ತರಲ್ಲಿ ಇದು ಹೊಸ ಶಕ್ತಿ ತಂದಿದೆ. ‘ಆಡಳಿತ ಪಕ್ಷದ ಬಿಗಿಹಿಡಿತದಲ್ಲಿದ್ದ ಪೊಲೀಸರಿಗೆ ಟಿಎಂಸಿ ಗೂಂಡಾಗಿರಿ ಬಗ್ಗೆ ದೂರು ನೀಡಿದರೆ, ಉಲ್ಟಾ ನಮ್ಮ ಮೇಲೆಯೇ ಕೇಸ್ ಹಾಕುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ಹಾಗಾಗುತ್ತಿಲ್ಲ. ಬಿಜೆಪಿ ಪ್ರಭಾವದ ಬಗ್ಗೆ ಪೊಲೀಸರಿಗೂ ಗೊತ್ತಾಗಿದೆ. ಬೂತ್ ಹಂತದ ನಾಯಕರು ಫೋನ್ ಮಾಡಿದರೂ ಸ್ಪಂದಿಸಲು ಶುರುಮಾಡಿದ್ದಾರೆ’ ಎನ್ನುತ್ತಾರೆ ಕೃಷ್ಣಗಂಜ್ ವಿಧಾನಸಭೆ ಬಿಜೆಪಿ ಮುಖಂಡ ಸೊಮೆನ್ ಘೋಷ್.

    10. ಸಿಂಡಿಕೇಟ್ ರಾಜ್​ನಿಂದ ಜನರು ಕಂಗಾಲು

    ಬಂಗಾಳದಲ್ಲಿ ‘ಸಿಂಡಿಕೇಟ್ ರಾಜ್’ ಬಗ್ಗೆ ಆಕ್ರೋಶ ಕುದಿಯುತ್ತಿದೆ. ಕೈಗಾರಿಕಾ ಸಂಸ್ಥೆ, ಸಿನಿಮಾ ಕ್ಷೇತ್ರ ಅಥವಾ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಣ್ಣಪುಟ್ಟ ಉದ್ಯಮಿಗಳೇ ಇರಬಹುದು. ಪ್ರತಿಯೊಬ್ಬ ರಿಂದಲೂ ಒತ್ತಾಯಪೂರ್ವಕವಾಗಿ ‘ಪರ್ಸೆಂಟೇಜ್ ಹಣ’ ಪಡೆಯುವ ಪ್ರಭಾವಿ ದಲ್ಲಾಳಿಗಳ ‘ವ್ಯವಹಾರ’ ಇಲ್ಲಿ ಸಿಂಡಿಕೇಟ್ ರಾಜ್ ಎಂದೇ ಕುಖ್ಯಾತಿಯಾಗಿದೆ. ಆಡಳಿತಾರೂಢ ಪಕ್ಷದ ಮುಖಂಡರೇ ಇದನ್ನು ನಿರ್ವಹಿಸುತ್ತಾರೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಮಮತಾ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಇದರ ಅತಿ ದೊಡ್ಡ ಫಲಾನುಭವಿ ಎಂದು ಬಿಜೆಪಿ ಆರೋಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts