More

    ಸಮರ್ಥವಾಗಿ ಉಸ್ತುವಾರಿ ನಿರ್ವಹಣೆ ; ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ

    ಬೆಂಗಳೂರು ಗ್ರಾಮಾಂತರ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

    ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಪುರ, ಸೊಣ್ಣದೇನಹಳ್ಳಿಯಲ್ಲಿ 200 ಕುಟುಂಬಗಳಿಗೆ ಮಂಗಳವಾರ ದಿನಸಿಕಿಟ್ ವಿತರಿಸಿ ಮಾತನಾಡಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಆ ಜವಾಬ್ದಾರಿ ನೀಡಿದ್ದಾರೆ. ಮುಖ್ಯವಾಗಿ ಜಿಲ್ಲೆಯನ್ನು ಕಾಡುತ್ತಿರುವ ನೀರಿನ ಸಮಸ್ಯೆ ಹಾಗೂ ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಹೊಸಕೋಟೆ ಕರ್ಮಭೂಮಿ: ಹೊಸಕೋಟೆ ನನ್ನ ಕರ್ಮ ಭೂಮಿ. ಇಲ್ಲಿನ ಜನ ಮೂರು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಚುನಾವಣೆ ವೇಳೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವತ್ತ ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ಜತೆಗೆ ಜಿಲ್ಲೆಯ ಇನ್ನೂ ಮೂರು ತಾಲೂಕುಗಳ ಆಮೂಲಾಗ್ರ ಅಭಿವೃದ್ಧಿಗೆ ಮುಂದಾಗಿದ್ದೇನೆ. ಇದಕ್ಕೆ ರಾಜ್ಯ ಸರ್ಕಾರ ಒತ್ತಾಸೆಯಾಗಿ ನಿಂತಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಎಂಟಿಬಿ ನಾಗರಾಜ್ ಹೇಳಿದರು.

    ಅಕ್ರಮ ಒತ್ತುವರಿಗೆ ಅವಕಾಶವಿಲ್ಲ: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ನಿಶ್ಚಿತ. ಇದಕ್ಕೆ ಸಹಕಾರ ನೀಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಕ್ಷೇತ್ರ ಸೇರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಾಗುತ್ತಿದೆ. ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲೇ ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

    ಕರೊನಾ ನಿಯಂತ್ರಣಕ್ಕೆ ಎಲ್ಲ ಕ್ರಮ: ಪ್ರಸ್ತುತ ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಸೋಂಕಿನ 3ನೇ ಅಲೆ ಆತಂಕವಿದೆ. ಆದ್ದರಿಂದ, ಜಿಲ್ಲೆಯಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಜತೆ ಸರಣಿ ಸಭೆಗಳನ್ನು ನಡೆಸಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಪಾಲಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಎಂಟಿಬಿ ನಾಗರಅಜ್ ಹೇಳಿದರು,.

    ಸಂಕಷ್ಟಕ್ಕೆ ನೆರವು: ಸರ್ಕಾರ ಲಾಕ್‌ಡೌನ್ ಘೋಷಿಸಿದ ಬಳಿಕ ಹೊಸಕೋಟೆ ಕ್ಷೇತ್ರದಾದ್ಯಂತ ನಿರಂತರವಾಗಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರು ಸೇರಿ ಇತರರಿಗೆ ದಿನಸಿಕಿಟ್ ವಿತರಣೆ ಹಾಗೂ ಅನ್ನದಾಸೋಹ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಮುಖಂಡರು ಅಭಿನಂದನಾರ್ಹರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts