More

    ಇನ್ನೂ ಮೂರು ರೈಲು ನಿಲುಗಡೆ

    ಕಮಲನಗರ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಸಮಗ್ರ ಭಾರತ ವಿಕಸಿತವೇ ಅವರ ಸಂಕಲ್ಪವಾಗಿದೆ. ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನ ಜತೆಗೆ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಬೀದರ್ ಲೋಕಸಭಾ ಕ್ಷೇತ್ರ ಮೊದಲನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
    ಪಟ್ಟಣದ ನಿಲ್ದಾಣದಲ್ಲಿ ಶನಿವಾರ ಸಂಜೆ ಲಾತೂರ್-ಯಶವಂತಪುರ ಎಕ್ಸ್​ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸಿದ ಅವರು, ಗಡಿಭಾಗದ ಏಕೈಕ ರೈಲ್ವೆ ನಿಲ್ದಾಣ ಕಮಲನಗರದಲ್ಲಿ ಇನ್ನೂ ಮೂರು ಎಕ್ಸ್​ಪ್ರೆಸ್ ಗಳ ನಿಲುಗಡೆಗೆ ಇಲಾಖೆ ಒಪ್ಪಿದೆ. ಅಲ್ಲದೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ, ಸ್ವಚ್ಛತೆ, ಪ್ಲಾಟ್‌ಫಾರ್ಮ್ ವಿಸ್ತರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಬೀದರ್‌ನಿಂದ ೧೩ ಹೊಸ ರೈಲು ಸಂಚಾರ, ೧೨ ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಹಂದಿಖೇರಾ ಗ್ರಾಮದಲ್ಲಿ ೩೦೦೦ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಗ್ರೇಡ್ ಪವರ್ ಸ್ಟೇಷನ್, ಹಂದಿಖೇರಾ ಕ್ರಾಸ್ ಬಳಿ ೨೦೦೦ ಮೆಗಾ ವಾಟ್ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಅನುಮೋದನೆ ಪಡೆಯಲಾಗಿದೆ. ೧೦ ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕಂಪನಿಗಳು ಮುಂದಾಗಿದ್ದು, ೧೫೦೦ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಪ್ರಮುಖರಾದ ಪ್ರಕಾಶ ಟೊಣ್ಣೆ, ಪ್ರೊ.ಎಸ್‌ಎನ್. ಶಿವಣಕರ, ಬಾಲಾಜಿ ತೇಲಂಗ, ಶ್ರೀರಂಗ ಪರಿಹಾರ, ನೀಲಕಂಠರಾವ ಕಾಂಬಳೆ, ರಾಜಹಂಸ ಶೆಟಕಾರ, ಅವಿನಾಶ ಶಿವಣಕರ, ದೇವಾನಂದ ಪಾಟೀಲ್, ಸುಭಾಷ ಗಾಯಕವಾಡ, ಪ್ರೊ.ಎಸ್.ಎಸ್. ರಾಂಪುರೆ, ಸೂರ್ಯಕಾಂತ ಧರಣೆ, ರಾಜಕುಮಾರ ಪಾಟೀಲ್, ಚಂದ್ರಕಾಂತ ಸಂಗಮೆ, ರವಿ ಮದನೂರ, ಶರಣು ಚಾಂಡೇಶ್ವರೆ, ಯಶವಂತ ಬಿರಾದಾರ, ವೈಜಿನಾಥ ಗುಡ್ಡಾ, ರವಿ ಕಾರಬಾರಿ, ಗುರು ಶಿವಣಕರ, ಸಂತೋಷ ಸುಲಾಕೆ, ವೆಂಕಟರಾವ ಡೊಂಬಾಳೆ, ಜ್ಞಾನೇಶ್ವರ ಪಾಟೀಲ್, ಮಲ್ಲಿಕಾರ್ಜುನ ಕುಂಬಾರ, ರೈಲ್ವೆ ಡಿಸಿಎಂ ಬಸವರಾಜ, ಮೋತಿಲಾಲ್ ನೈಜೋಡೆ ಇತರರಿದ್ದರು. ಎಡಿಆರ್‌ಎಂ ಗೋಪಾಲನ್ ಸ್ವಾಗತಿಸಿದರು. ಲಿಂಗಾನಂದ ನಿರೂಪಣೆ ಮಾಡಿದರು.

    ಅಗ್ರಗಣ್ಯ ನಾಯಕ ಮೋದಿ: ದೂರದೃಷ್ಟಿ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಅಗ್ರಗಣ್ಯ ನಾಯಕ ಎನಿಸಿದ್ದಾರೆ. ದೇಶದ ಸುಮಾರು ೨೫ ಕೋಟಿ ಜನರು ಕೇಂದ್ರ ಪುರಸ್ಕೃತ ಯೋಜನೆಗಳ ಲಾಭ ಪಡೆದಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೆÊಮಾಸಿಕದಲ್ಲಿ ದೇಶದ ಜಿಡಿಪಿ ನಿರೀಕ್ಷೆ ಮೀರಿ ಶೇ.೮.೪ ಜಿಗಿತ ಕಂಡಿದೆ ಎಂದು ಕೇಂದ್ರ ಸಚಿವ ಖೂಬಾ ಹೇಳಿದರು. ಕೆಟ್ಟ ರಣನೀತಿಗಳಿಂದಾಗಿಯೇ ೨೦೧೪ಕ್ಕೂ ಮುನ್ನ ದೇಶ ಹಿಂದುಳಿದಿತ್ತು. ಜಾತಿ-ಮತದ ಹೆಸರಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ ಹಿಂದಿನ ಸರ್ಕಾರಗಳು ಅಭಿವೃದ್ಧಿಯನ್ನೇ ಮರೆತಿದ್ದವು. ಮತಬ್ಯಾಂಕ್ ಕೇಂದ್ರಿತ ಯೋಜನೆಗಳನ್ನೇ ರೂಪಿಸಿ ಜಾರಿಗೊಳಿಸಿದ್ದವು. ಆದರೆ ನಮ್ಮ ಆದ್ಯತೆ ವೋಟ್ ಬ್ಯಾಂಕ್ ಅಲ್ಲ, ಸರ್ವಾಂಗೀಣ ವಿಕಾಸ. ಜನತೆಯ ಕಲ್ಯಾಣ ಹಾಗೂ ಪ್ರಗತಿ ಯೋಜನೆಗಳಿಗೆ ವೇಗ ನೀಡುವುದಾಗಿದೆ ಎಂದರು.

    ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ದ್ವೇಷಪಡುತ್ತಿರುವ ಪ್ರತಿಪಕ್ಷದವರು ಎಷ್ಟೇ ವಿರೋಧ ಮಾಡಿದರೂ ಜನಸೇವೆ, ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ವೇಗದಿಂದ ಮಾಡುವೆ.
    | ಭಗವಂತ ಖೂಬಾ ಕೇಂದ್ರ ಸಚಿವ

    ಎಲ್ಲ ರೈಲುಗಳು ನಿಲ್ಲಲಿ: ಕಮಲನಗರ ನಿಲ್ದಾಣದಲ್ಲಿ ಎಲ್ಲ ರೈಲುಗಳ ನಿಲುಗಡೆ ಆಗಬೇಕೆಂದು ಆಗ್ರಹಿಸಿ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ನೇತೃತ್ವದ ನಿಯೋಗ ಶನಿವಾರ ಸಿಕಿಂದರಾಬಾದ್ ಎಡಿಆರ್‌ಎಂ ಗೋಪಾಲನ್ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿತು. ಮುಂಬೈ ಸಿಎಸ್‌ಟಿ-ಬೀದರ್, ಔರಂಗಾಬಾದ್-ಹೈದರಾಬಾದ್, ಹಡಪ್ಸರ್-ಕಾಜಿಪೇಟ, ಸೊಲ್ಲಾಪುರ-ತಿರುಪತಿ, ಜಾಲನಾ-ತಿರುಪತಿ, ಲೋಕಮಾನ ತಿಲಕ್ ಟರ್ಮಿನಲ್ ಮುಂಬೈ- ಸೊಲ್ಲಾಪುರ ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶೀಘ್ರದಲ್ಲಿ ಔರಂಗಾಬಾದ್-ಹೈದರಾಬಾದ್ ಹಾಗೂ ಮುಂಬೈ ಸಿಎಸ್‌ಟಿ- ಬೀದರ್ ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts