More

    ಮಹಿಳಾ ಪ್ರಾತಿನಿಧ್ಯಕ್ಕೆ ಬೇಕು ಹೆಚ್ಚಿನ ಅವಕಾಶ | ‘ಸುದ್ದಿಮನೆ ಹಾಗೂ ಮಹಿಳೆಯರು’ ವಿಚಾರ ಗೋಷ್ಠಿ ಸವಾಲು, ಸಮಸ್ಯೆ, ಪರಿಹಾರ ಕುರಿತು ಚಿಂತನೆ

    ವಿಜಯವಾಣಿ ಸುದ್ದಿಜಾಲ ವಿಜಯಪುರ: ಪತ್ರಿಕಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಸಮಸ್ಯೆ, ಸವಾಲುಗಳಿದ್ದು ಅವೆಲ್ಲವನ್ನೂ ದಿಟ್ಟವಾಗಿ ಎದುರಿಸಿ ನಿಂತು ವರದಿಗಾರಿಕೆ ಮಾಡುವ ಎದೆಗಾರಿಕೆಯನ್ನು ಇಂದಿನ ಮಹಿಳೆಯರು ಪಡೆದುಕೊಂಡಿದ್ದಾರೆ. ಆದರೂ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಅವಕಾಶಗಳು ತೀರ ಕಡಿಮೆ ಎಂದು ಕಸ್ತೂರಿ ಸಂಪಾದಕಿ ಶಾಂತಲಾ ಧರ್ಮರಾಜ್ ಅಭಿಪ್ರಾಯಿಸಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯನಿರತ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನದಲ್ಲಿ ‘ಸುದ್ದಿಮನೆ ಹಾಗೂ ಮಹಿಳೆಯರು’ ವಿಚಾರ ಗೋಷ್ಠಿಯಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.

    ಸುದ್ದಿಮನೆಯಲ್ಲಿ 2015ರಲ್ಲಿ ಶೇ. 43ರಷ್ಟಿದ್ದ ಮಹಿಳಾ ಪತ್ರಕರ್ತೆಯರ ಸ್ಥಾನ ಸದ್ಯ ಶೇ. 13ಕ್ಕೆ ಇಳಿದಿರುವುದು ಆತಂಕಕಾರಿ. ಮಹಿಳೆ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲ್ಯಗಳನ್ನು ಉನ್ನತೀಕರಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ಅಸ್ತಿತ್ವ ಕಾಯ್ದುಕೊಳ್ಳಲು ಸಾಧ್ಯ ಎಂದರು.

    ಕೋವಿಡ್ ನಂತರದ ಕಾಲಘಟ್ಟದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ಮದುವೆ, ಹೆರಿಗೆ ಮೊದಲಾದ ವಿಷಯಕ್ಕೆ ರಜೆ ಕೊಡಬೇಕಲ್ಲ ಎಂಬ ಮನೋಭಾವದಿಂದ ಅನೇಕ ಸಂಸ್ಥೆಗಳು ಮಹಿಳೆಯರಿಗೆ ಉದ್ಯೋಗಕ್ಕೆ ಸೇರ್ಪಡೆ ಮಾಡಿಕೊಳ್ಳುವುದೇ ಕಡಿಮೆ, ಸುದ್ದಿಮನೆ ಸಹ ಇದಕ್ಕೆ ಹೊರತಾಗಿಲ್ಲ ಎಂದರು.

    ಕೇವಲ ಡೆಸ್ಕ್‌ನಲ್ಲಿ ಟೈಪ್ ಮಾಡುವ, ಮೈಕ್ ಹಿಡಿಯುವ ಕಾರ್ಯಕ್ಕೆ ಸೀಮಿತವಾದರೆ ಅಸ್ತಿತ್ವಕ್ಕೆ ಖಂಡಿತವಾಗಿಯೂ ಧಕ್ಕೆ ಬರುತ್ತದೆ. ಪತ್ರಕರ್ತರ ಸ್ಥಾನವನ್ನು ಮೌನವಾಗಿಯೇ ಯುಟ್ಯೂಬರ್‌ಗಳು ಆಕ್ರಮಿಸಿಕೊಂಡಾಗಿದೆ. ಈ ಹಿನ್ನೆಲೆಯಲ್ಲಿ ಕೌಶಲ ವೃದ್ಧಿಯೇ ಒಂದು ದಿವ್ಯ ಹೆಜ್ಜೆಯಾಗಿದೆ ಎಂದರು.

    ಬೆಂಗಳೂರು ಆಕಾಶವಾಣಿಯ ಬಿ.ಕೆ. ಸುಮತಿ ಮಾತನಾಡಿ, ಆಂಗ್ಲ ಪತ್ರಿಕೋದ್ಯಮದಲ್ಲಿ ಮಹಿಳೆ ಉನ್ನತ ಸ್ಥಾನ ಅಲಂಕರಿಸಿದ್ದಾಳೆ. ಆದರೆ ಕನ್ನಡ ಪತ್ರಿಕೋದ್ಯಮದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಉನ್ನತ ಸ್ಥಾನವನ್ನು ಅಲಂಕರಿಸಿ ಮಿಂಚಿ ಮಾಯವಾಗಿದ್ದಾರೆ. ಆಂಗ್ಲ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನದಲ್ಲಿ ಮಹಿಳೆಯರ ಸ್ಥಾನಮಾನ ಸಾಧ್ಯವಾಗಿರುವಾಗ ಕನ್ನಡ ಪತ್ರಿಕೋದ್ಯಮದಲ್ಲಿ ಏಕೆ ಸಾಧ್ಯವಾಗಿಲ್ಲ? ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬ್ಯೂರೋ ಮುಖ್ಯಸ್ಥರು, ಜಿಲ್ಲಾ ವರದಿಗಾರ ಸ್ಥಾನದಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ತೀರಾ ಕಡಿಮೆ ಎಂದೇ ಹೇಳಬಹುದಾಗಿದೆ ಎಂದು ವಿಶ್ಲೇಷಿಸಿದರು.

    ಪ್ರತಿಕ್ರಿಯೆ ನೀಡಿದ ಕೆ.ಬಿ. ಶುಭಾ, ಯಾವ ರಂಗದಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ಶೇ. 50 ದಾಟಿಲ್ಲ. ಮಹಿಳೆ ಕಾರ್ಯನಿಷ್ಠೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವವರು ಮಹಿಳೆಯರೇ. ಆದರೆ ಕೌಟುಂಬಿಕ ಜವಾಬ್ದಾರಿ ಮುನ್ನಡೆಸುವ ಹೊಣೆಗಾರಿಕೆಯೂ ಅವಳ ಮೇಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಅಪರಾಧ, ರಾಜಕೀಯದಲ್ಲಿ ಮಹಿಳೆಯರು ಆಸಕ್ತಿ ತೋರುವುದು ಕಡಿಮೆ, ಹೀಗಾಗಿ ಈ ವಲಯಗಳ ವರದಿಗಾರಿಕೆ ಸಂದರ್ಭದಲ್ಲಿ ಮಹಿಳೆ 100 ರಷ್ಟು ಕಾರ್ಯದಕ್ಷತೆ ತೋರಲು ಕಷ್ಟ ಸಾಧ್ಯ ಎಂದು ವಿಶ್ಲೇಷಿಸಿದರು.

    ಪತ್ರಕರ್ತೆ ಸವಿತಾ ರೈ ಪ್ರತಿಕ್ರಿಯೆ ನೀಡುತ್ತಾ, ಮಹಿಳೆ ಧೈರ್ಯ, ಸ್ಥೈರ್ಯ ಬೆಳೆಸಿಕೊಂಡಾಗ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂದರು. ಸುಧಾರಾಣಿ ಅವರು, ಮಹಿಳಾ ಸಂಪಾದಕಿಯರ ಸಂಘ ಅಸ್ತಿತ್ವಕ್ಕೆ ಬಂದು ಈಗಾಗಲೇ ಹಲವು ವರ್ಷಗಳೇ ಕಳೆದಿದ್ದು, ಪತ್ರಿಕೋದ್ಯಮದಲ್ಲಿ ಮಹಿಳಾ ಮಾಲೀಕತ್ವದ ಪ್ರಬಲ ಧ್ವನಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಸರ್ಕಾರ, ಪುರುಷ ಸಮಾಜ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದರು.

    ಎಂ.ಆರ್. ಸತ್ಯನಾರಾಯಣ ಮಾತನಾಡಿ, ಮದುವೆಯಾದ ನಂತರ ಮಹಿಳೆಯರು ಕೆಲಸ ಬಿಡುತ್ತಾರೆ ಎನ್ನುವ ಮನೋಭಾವ ಎಲ್ಲ ಸುದ್ದಿ ಸಂಸ್ಥೆಗಳಲ್ಲಿದೆ. ಈ ಮನೋಭಾವ ಬದಲಿಸುವ ಪ್ರಯತ್ನದಲ್ಲಿ ಮಹಿಳೆ ತೊಡಗಿಸಿಕೊಳ್ಳಬೇಕಿದೆ ಎಂದರು.

    ಪ್ರೊ. ಡಾ. ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಶೀಲಾ ಪ್ರತಾಪಸಿಂಹ್ ತಿವಾರಿ, ಐಯುಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮತ್ತಿತರರಿದ್ದರು.

    ಪತ್ರಕರ್ತರ ಸಮಸ್ತ ಬೇಡಿಕೆಗಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿಯಾಗುವೆ, ಪತ್ರಕರ್ತರ ಶ್ರೇಯೋಭಿವೃದ್ಧಿ ಕಾರ್ಯಕ್ಕೆ ನಾನು ಸದಾ ಸಹಕಾರ ನೀಡುವೆ, ಪತ್ರಕರ್ತರು ಸಮಾಜದ ಶಕ್ತಿ.

    ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts