More

    2ನೇ ದಿನದ ಕರ್ಫ್ಯೂಗೂ ಉತ್ತಮ ಸ್ಪಂದನೆ

    ಹಾವೇರಿ: ಕರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿರುವುದನ್ನು ತಡೆಯಲು ಸರ್ಕಾರ ಜಾರಿಗೊಳಿಸಿದ್ದ ವಾರಾಂತ್ಯ ಕರ್ಫ್ಯೂನ 2ನೇ ದಿನವಾದ ಭಾನುವಾರವೂ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಪರಸ್ಪರ ಅಂತರ ಮರೆತು ಜನ ಅಗತ್ಯ ವಸ್ತು ಖರೀದಿಸಲು ಮುಗಿಬಿದ್ದ ದೃಶ್ಯವೂ ಕಂಡುಬಂತು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಹಾಕಿರುವ ತರಕಾರಿ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯ ಜನರು ಆಗಮಿಸಿದ್ದರು. ಪರಸ್ಪರ ಅಂತರಕ್ಕಾಗಿ ಮಾರ್ಕ್ ಮಾಡಿದ ಸ್ಥಳದಲ್ಲಿ ವ್ಯಾಪಾರಸ್ಥರು ಕುಳಿತಿದ್ದರು. ಆದರೆ, ಜನರು ಅಂತರ ಮರೆತು ತರಕಾರಿ ಖರೀದಿಗೆ ಮುಂದಾಗಿದ್ದರು. ಕೆಲವರಂತೂ ಮಾಸ್ಕ್ ಕೂಡ ಧರಿಸದೇ ಆಗಮಿಸಿದ್ದರು. ವಾರದ ಶನಿವಾರ ಹಾಗೂ ಭಾನುವಾರ ಇರುವ ಕರ್ಫ್ಯೂವನ್ನು ಸರ್ಕಾರ ಮುಂದುವರಿಸುತ್ತದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಜನರು ದಿನಸಿ ಖರೀದಿಗೆ ಮುಗಿಬಿದ್ದಿದ್ದರು. ಅಲ್ಲದೆ, ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸಿದರು.

    ಬೆಳಗ್ಗೆ 10 ಗಂಟೆಯಾಗುತ್ತಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು. ಅದಕ್ಕಿಂತ ಮುಂಚೆಯೇ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದವರನ್ನು ವಾಪಸ್ ಕಳುಹಿಸಿದರು. ವಾಹನಗಳಲ್ಲಿ ಎಲ್ಲ ರಸ್ತೆಗಳಲ್ಲಿ ಸಂಚರಿಸಿ ದಿನಸಿ ಅಂಗಡಿಗಳನ್ನು ಮುಚ್ಚಿಸಿದರು. ಆ ಬಳಿಕ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತು. ವಾಹನ ಮತ್ತು ಜನರ ಸಂಚಾರ ಏಕಾಏಕಿ ಬಂದ್ ಆಯಿತು. ಆಸ್ಪತ್ರೆ, ಔಷಧಕ್ಕಾಗಿ ನಡೆದು ಹೋಗುತ್ತಿದ್ದವರನ್ನು ಪೊಲೀಸರು ತಡೆದು ವಿಚಾರಿಸಿ ಅಗತ್ಯ ದಾಖಲೆ ಪರಿಶೀಲಿಸಿ ಬಿಡುತ್ತಿದ್ದರು. ವಿವಾಹ ಇನ್ನಿತರ ಸಮಾರಂಭಗಳಿಗೆ ಕಾರಿನಲ್ಲಿ ಹೋಗುತ್ತಿದ್ದವರ ದಾಖಲೆಗಳನ್ನು ಪರಿಶೀಲಿಸಿದರು. ಮಧ್ಯಾಹ್ನವಾಗುತ್ತಲೇ ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲದೇ ಭಣಗುಡುತ್ತಿದ್ದವು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಸ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿಲ್ಲ. ಪ್ರಮುಖ ಮಾರ್ಗಗಳಿಗೆ ನಾಲ್ಕಾರು ಬಸ್​ಗಳು ಸಂಚರಿಸಿದರೂ ಪ್ರಯಾಣಿಕರು ಇರಲಿಲ್ಲ.

    89 ಮದುವೆಗಳಿಗೆ ಅನುಮತಿ: ಭಾನುವಾರ ಜಿಲ್ಲೆಯಲ್ಲಿ 89 ಮದುವೆಗಳಿಗೆ ಪರವಾನಗಿ ನೀಡಲಾಗಿತ್ತು. ನಗರದ ಹಲವು ಕಲ್ಯಾಣಮಂಟಪಗಳಲ್ಲಿ ಮದುವೆ ಸಮಾರಂಭಗಳು ಕೋವಿಡ್ ಮಾರ್ಗಸೂಚಿ ಪ್ರಕಾರ ಸರಳವಾಗಿ ನಡೆದವು. ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂತು.

    58 ಸಾವಿರ ರೂ. ದಂಡ

    ಜಿಲ್ಲೆಯಲ್ಲೂ ಕರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಪೊಲೀಸರು ಅನಗತ್ಯ ಓಡಾಟ ಹಾಗೂ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಭಾನುವಾರ ಜಿಲ್ಲೆಯಲ್ಲಿ ಅನಗತ್ಯವಾಗಿ ಹೊರಬಂದ 99 ವಾಹನಗಳಿಂದ 33,100 ರೂ., ಮಾಸ್ಕ್ ಧರಿಸದೇ ಇದ್ದ 253 ಜನರಿಂದ 25,300 ರೂ. ದಂಡ ವಿಧಿಸಲಾಗಿದೆ. ಯಾವುದೇ ವಾಹನವನ್ನು ವಶಕ್ಕೆ ಪಡೆದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts