More

    ಮಹಿಳೆಯರಿಂದ ಎಲ್ಲ ರಂಗದಲ್ಲೂ ಶ್ರೇಷ್ಠ ಸಾಧನೆ

    ಚಿಕ್ಕಮಗಳೂರು: ಯಾವುದೇ ಸಮಾಜದ ಶಕ್ತಿ ಎಂದರೆ ಅದು ಸಂಘಟನೆ. ಸಂಘಟಿತರಾದಾಗ ಮಾತ್ರ ಒಂದು ಸಮಾಜ ಎಲ್ಲ ಕ್ಷೇತ್ರಗಳಲ್ಲೂ ನ್ಯಾಯ ಪಡೆಯಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದ 7ನೇ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಅವರು ಇಡೀ ದೇಶವನ್ನು ಮಹಿಳೆಯಾಗಿ ಹೇಗೆ ಮುನ್ನಡೆಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂದು ಅವರು ರೂಪಿಸಿದ ಯೋಜನೆಗಳು ಇಂದಿಗೂ ಜನಪರವಾಗಿವೆ. ಇನ್ನು ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಅತ್ಯುತ್ತಮ ಸೇವೆ ಒದಗಿಸಿದ್ದಾರೆ. ಕಲ್ಪನಾ ಚಾವ್ಲಾ ಅಂತರಿಕ್ಷ ಯಾನದ ಮೂಲಕ ಛಾಪು ಮೂಡಿಸಿದ್ದಾರೆ ಎಂದರು.
    ಮಕ್ಕಳು ಉತ್ತಮ ಅಂಕ ಗಳಿಸಿದಾಗ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ. ಇದರಿಂದ ಆ ವಿದ್ಯಾರ್ಥಿಗಳು ಮುಂದೆ ಸಮಾಜಮುಖಿಯಾಗಿ ಬೆಳೆಯುತ್ತಾರೆ. ಕುರುಹಿನ ಶೆಟ್ಟಿ ಮಹಿಳಾ ಸಂಘಕ್ಕೆ ನಿವೇಶನ ಕೊಡುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀಲಕಂಠೇಶ್ವರ ಸಂಘಕ್ಕೆ ನಿವೇಶನ ಮಂಜೂರಾಗಿದ್ದು, ಅದಕ್ಕೆ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
    ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮಹಿಳೆ ಅತ್ತೆಯಾಗಿ, ಮಗಳಾಗಿ, ಸೊಸೆಯಾಗಿ ಸಂಸಾರದ ಕಣ್ಣಾಗಿ ಕೆಲಸ ಮಾಡುತ್ತಾಳೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಇದ್ದಾರೆ ಎಂದರು.
    ಸಮಾಜ ಸೇವಕಿ ಪಲವಿ ಸಿ.ಟಿ. ರವಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಹೆಚ್ಚು ಪ್ರಾತಿನಿಧ್ಯ ಇದೆ. ಎಲ್ಲ ಕಷ್ಟವನ್ನು ಹೊರುವುದೇ ಹೆಣ್ಣು. ಹೀಗಾಗಿ ಭೂಮಿಯನ್ನು ತಾಯಿಗೆ ಹೋಲಿಸಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
    ಹಿರೇಮಗಳೂರು ಕಣ್ಣನ್ ಮಾತನಾಡಿ, ಶಾಸಕ ಎಚ್.ಡಿ.ತಮ್ಮಯ್ಯ ಅವರ ಕೈಯಲ್ಲೇ ಇಂದು ದೀಪ ಹಚ್ಚಿಸಿರುವುದಕ್ಕೆ ಕಾರಣವಿದೆ. ಸರ್ಕಾರ 5 ಗ್ಯಾರಂಟಿ ಕೊಟ್ಟಿದೆ. ಮಹಿಳಾ ಸಂಘಕ್ಕೆ 6ನೇ ಗ್ಯಾರಂಟಿಯಾಗಿ ಸಂಘದ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
    ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಪುರಸ್ಕರಿಸಲಾಯಿತು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಂಘದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್, ಕುರುಹಿನ ಶೆಟ್ಟಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾ ರಾಜೇಂದ್ರ, ತರೀಕೆರೆ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ದಾನಿ ಸೋಮಶೇಖರ್, ಸಂಘದ ಗೌರವಾಧ್ಯಕ್ಷೆ ಚಂದ್ರಾವತಿ ಶಂಕರ್, ಉಪಾಧ್ಯಕ್ಷೆ ಪದ್ಮಾ ಮಹೇಶ್, ಕಾರ್ಯದರ್ಶಿ ತನುಜಾ ಶಿವಶಂಕರ್, ಸಹಕಾರ್ಯದರ್ಶಿ ಪ್ರತಿಮಾ ವೆಂಕಟೇಶ್, ಖಜಾಂಚಿ ಪ್ರಿಯಾ ಪರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts