More

    ಗ್ರಾಪಂ ಸಿಬ್ಬಂದಿ, ನೀರುಗಂಟಿಗಳಿಂದ ಪ್ರತಿಭಟನೆ

    ಶನಿವಾರಸಂತೆ: ಸರ್ಕಾರ ನಿಗದಿ ಮಾಡಿ ಆದೇಶಿಸಿರುವಂತೆ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ನೀರುಗಂಟಿಗಳು ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಗ್ರಾಪಂ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ನೇತೃತ್ವದಲ್ಲಿ ನೀರುಗಂಟಿ ನೌಕರರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಹಿಂದಿನ ಸರ್ಕಾರ ನೀರುಗಂಟಿಗಳು, ಬಿಲ್‌ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಮತ್ತು ಸಿಬ್ಬಂದಿಗೆ ಕನಿಷ್ಟ 10ರಿಂದ 13,000 ರೂ ವೇತನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಿತ್ತು. ಆದರೂ ಕೆಲವು ಗ್ರಾಪಂಗಳಲ್ಲಿ ಈ ಆದೇಶ ಪಾಲನೆ ಆಗುತ್ತಿಲ್ಲ. ಅಲ್ಲದೆ ಗ್ರಾಪಂ ನೌಕರರನ್ನು ನಿಗದಿತ ಸಮಯಕ್ಕಿಂತ ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

    ಗ್ರಾಪಂ ಸಿಬ್ಬಂದಿಗೆ ಸೇವಾ ಪುಸ್ತಕ ತೆರೆಯುವುದು, ನಿವೃತ್ತಿಯಾದವರಿಗೆ ತಕ್ಷಣ ಉಪಧನ ನೀಡುವುದು, ಕಂಪ್ಯೂಟರ್ ಆಪರೇಟರ್ ಮತ್ತು ಎಸ್‌ಎಸ್‌ಎಲ್‌ಸಿ ಪಾಸ್ ಆಗಿರುವ ಸಿಬ್ಬಂದಿಗೆ ಬಡ್ತಿ ನೀಡುವುದು, ಪೆನ್ಷನ್ ಭವಿಷ್ಯ ನಿಧಿ, ಸರ್ಕಾರಿ ನೌಕರರಿಗೆ ಕೊಡುವ ಸೌಲಭ್ಯವನ್ನು ಗ್ರಾಪಂ ನೌಕರರಿಗೂ ಕೊಡುವುದು, ನೌಕರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡದಿರುವುದು ಸೇರಿದಂತೆ ಒಟ್ಟು 16 ಬೇಡಿಕೆಗಳ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

    ಆಲೂರು-ಸಿದ್ದಾಪುರ ಗ್ರಾಪಂನಲ್ಲಿ 16 ನೀರುಗಂಟಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಕೆಲವರು 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಕಡಿಮೆ ವೇತನ ನೀಡಲಗುತ್ತಿದೆ ಎಂದು ಸಂಘದ ಅಧ್ಯಕ್ಷ ಚನ್ನಬಸಪ್ಪ ದೂರಿದರು.

    ನೌಕರರ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದಲ್ಲಿ ಫೆ.24ರಂದು ಜಿಲ್ಲಾ ಕೇಂದ್ರದಲ್ಲಿ ನೌಕಕರು ಪ್ರತಿಭಟನೆ ಮಾಡಲಿದ್ದಾರೆ ಎಂದು ಜಿಲ್ಲಾ ಸಂಘಟನೆ ಅಧ್ಯಕ್ಷ ಭರತ್ ಎಚ್ಚರಿಸಿದ್ದಾರೆ. ಬಳಿಕ ಪಿಡಿಒ ಪೂರ್ಣಿಮಾ ಅವರಿಗೆ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts