More

    ಗ್ರಾಪಂ ವ್ಯವಹಾರಕ್ಕೆ ಬ್ರೇಕ್!

    ಬೆಳಗಾವಿ: ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸಿನ ವ್ಯವಹಾರ ಮತ್ತು ಸಭೆಗಳಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ನರೇಗಾ ಕಾರ್ಮಿಕರಿಗೆ ಕೂಲಿ, ಆಡಳಿತ ವೆಚ್ಚ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲು ಅಡ್ಡಿಯಾಗಲಿದೆ.

    ಜಿಲ್ಲೆಯ 506 ಗ್ರಾಮ ಪಂಚಾಯಿತಿಗಳ ಪೈಕಿ 477 ಗ್ರಾಪಂಗಳ ಐದು ವರ್ಷದ ಅವಧಿ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. ಅದರಲ್ಲಿ ರಾಯಬಾಗ ತಾಲೂಕಿನ ನಸ್ಲಾಪುರ ಗ್ರಾಪಂ, ಬೆಳಗಾವಿ ತಾಲೂಕಿನ ಕುಕಡೋಳಿ ಗ್ರಾಪಂಗಳ ಸದಸ್ಯರ ಅವಧಿ ಜೂನ್ 8ಕ್ಕೆ ಹಾಗೂ 466 ಗ್ರಾಪಂಗಳ ಸದಸ್ಯರ ಅವಧಿ ಜುಲೈ ಎರಡನೇ ವಾರದಲ್ಲಿ ಪೂರ್ಣಗೊಳ್ಳಲಿದೆ. ಇನ್ನುಳಿದ 9 ಗ್ರಾಪಂಗಳ ಸದಸ್ಯರ ಅವಧಿ ಆಗಸ್ಟ್ ಮೊದಲ ವಾರದಲ್ಲಿ ಮುಗಿಯಲಿದೆ.

    ಅಧಿಕಾರಿಯಿಂದ ಆದೇಶ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ನವೀನಕುಮಾರ ಅವಧಿ ಪೂರ್ಣಗೊಂಡಿರುವ ಗ್ರಾಪಂಗಳಲ್ಲಿ ಹಣಕಾಸಿನ ವ್ಯವಹಾರ ನಡೆಸುವಂತಿಲ್ಲ ಎಂದು ಜಿಪಂ ಸಿಇಒ, ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗಳಿಗೆ ಆದೇಶ ಹೊರಡಿಸಿದ್ದಾರೆ. ಆದರೆ, ಜೂ. 8ಕ್ಕೆ ಐದು ವರ್ಷ ಅವಧಿ ಪೂರ್ಣಗೊಳ್ಳುತ್ತಿರುವ ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳ ಹಣಕಾಸಿನ ವ್ಯವಹಾರಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಪರಿಣಾಮ ಆ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾರ್ಮಿಕರ ಕೂಲಿ, ಇನ್ನಿತರ ಆಡಳಿತ ವೆಚ್ಚ ಭರಿಸುವುದು ಕಷ್ಟವಾಗಲಿದೆ. ಹಾಗಾಗಿ ಸರ್ಕಾರದ ಮುಂದಿನ ನಿರ್ದೇಶನ ಬರುವವರೆಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಮಗಾರಿ ಆರಂಭ: 2019-20ನೇ ಸಾಲಿನ ಕ್ರಿಯಾ ಯೊಜನೆಗಳಿಗೆ ಸರ್ಕಾರವು 2020ರಲ್ಲಿ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳು ಮಾರ್ಚ್‌ನಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಲಾಕ್‌ಡೌನ್‌ದಿಂದ ಎರಡು ತಿಂಗಳು ಕಾಮಗಾರಿ ಸ್ಥಗಿತಗೊಂಡಿದ್ದವು. ಇದೀಗ ಮೇ ಕೊನೆಯ ವಾರದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆಲ್ಲ ಕೂಲಿ ಹಣ ಪಾವತಿ ಆಗಿಲ್ಲ.

    ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಳಂಬ ಮಾಡಿದ್ದರಿಂದ ನಮ್ಮ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಇದೀಗ ನಮ್ಮ ಅವಧಿ ಪೂರ್ಣಗೊಳ್ಳುತ್ತಿದ್ದರೂ ಕಾಮಗಾರಿಗಳು ಆರಂಭವಾಗಿಲ್ಲ ಎಂದು ಗ್ರಾಪಂಗಳ ಅಧ್ಯಕ್ಷರು ಹಾಗೂ ಸದಸ್ಯರು ದೂರಿದ್ದಾರೆ.

    2021ಕ್ಕೆ 29 ಗ್ರಾಮ ಪಂಚಾಯಿತಿಗಳ ಅವಧಿ ಪೂರ್ಣ

    ಬೆಳಗಾವಿ ತಾಲೂಕಿನ ಬಿಜಗರ್ಣಿ, ಬೆಳವಟ್ಟಿ, ಧರನಟ್ಟಿ, ಹುಕ್ಕೇರಿ ತಾಲೂಕಿನ ಮದಿಹಳ್ಳಿ, ನಿಡಸೋಸಿ, ನಿಪ್ಪಾಣಿ ತಾಲೂಕಿನ ಮಾಣಕಾಪುರ, ರಾಯಬಾಗ ತಾಲೂಕಿನ ಜಲಾಲಾಪುರ, ಸಿದ್ಧಾಪುರ, ಯಡ್ರಾಂವಿ, ಯಲ್ಫಾರಟ್ಟಿ, ಮಂಟೂರ, ಅಥಣಿ ತಾಲೂಕಿನ ತೆಲಸಂಗ, ಸವದಿ, ದರೂರ, ಮಹಿಷವಾಡಗಿ, ನಂದೇಶ್ವರ, ಬೈಲಹೊಂಗಲ ತಾಲೂಕಿನ ದೊಡವಾಡ, ಬೈಲವಾಡ, ಗೋಕಾಕ ತಾಲೂಕಿನ ತಳಕಟ್ಟನಾಳ, ಸವದತ್ತಿ ತಾಲೂಕಿನ ಮಾಡಮಗೇರಿ, ಹೊಸೂರು, ಮಲ್ಲೂರು (ಕಾಗಿಹಾಳ), ಬಡ್ಲಿ, ಯಕ್ಕುಂಡಿ, ರಾಮದುರ್ಗ ತಾಲೂಕಿನ ತೋರಣಗಟ್ಟಿ, ತುರನೂರ, ಹಲಗತ್ತಿ, ಮುದೇನೂರ ಹಾಗೂ ಒಂಬಳಾಪುರ ಸೇರಿದಂತೆ ಒಟ್ಟು 29 ಗ್ರಾಪಂಗಳ ಅವಧಿ 2021ರಲ್ಲಿ ಪೂರ್ಣಗೊಳ್ಳಲಿದೆ.

    ಸರ್ಕಾರವು ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸಿನ ವ್ಯವಹಾರ ನಡೆಸದಂತೆ ಆದೇಶ ಹೊರಡಿಸಿದೆ. ಆದರೆ, ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾರ್ಮಿಕರಿಗೆ ಕೂಲಿ ಪಾವತಿ ಮತ್ತು ಗ್ರಾಪಂ ಮಟ್ಟದಲ್ಲಿರುವ ಕರೊನಾ ಟಾಸ್ಕ್‌ಫೋರ್ಸ್ ಸಮಿತಿ ಕಾರ್ಯಚಟುವಟಿಕೆಗಳು, ಆಡಳಿತ ವೆಚ್ಚಗಳ ಪಾವತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತಾಗಿ ಸರ್ಕಾರದ ಗಮನ ಸೆಳೆಯಲಾಗಿದೆ.
    | ಡಾ.ಕೆ.ವಿ.ರಾಜೇಂದ್ರ ಜಿಲ್ಲಾ ಪಂಚಾಯಿತಿ ಸಿಇಒ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts