More

    ದ್ರಾಕ್ಷಿ ಬೆಳೆಗೆ ರೋಗ, ಬೆಳೆಗಾರರು ಕಂಗಾಲು

    ಅರಟಾಳ: ಹವಾಮಾನ ವೈಪರೀತ್ಯದಿಂದಾಗಿ ಶೀತ ವಾತಾವರಣ ಉಂಟಾಗಿ ದ್ರಾಕ್ಷಿ ಬೆಳೆಗೆ ಬೂಜು ತುಪ್ಪಟ ರೋಗ ತಗುಲಿ ದ್ರಾಕ್ಷಿ ಬೆಳೆಗಳು ನಾಶವಾಗುತ್ತಿವೆ.ಅಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿದ ದ್ರಾಕ್ಷಿ ಬೆಳೆದ ಬೆಳೆಗಾರರು ಇದೀಗ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
    ಅತಿವೃಷ್ಟಿ ಮತ್ತು ಕೋವಿಡ್-19 ಲಾಕ್‌ಡೌನ್ ಇನ್ನಿತರ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ಇದೀಗ ದ್ರಾಕ್ಷಿ ಬೆಳೆಗೆ ಬೂಜು ತುಪ್ಪಟ ರೋಗ ತಗುಲಿದ್ದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ.

    ಅಥಣಿ ತಾಲೂಕಿನ 4.5 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿನ ಬೆಳೆಗಾರರು ಸೆಪ್ಟೆಂಬರ್‌ನಿಂದ ಅಕ್ಟೋಬರ್‌ನಲ್ಲಿ ಚಾಟನಿ ಮಾಡಿ ಕಾಯಿ ಹಿಡಿಯುತ್ತಾರೆ. ಅಲ್ಲದೆ ಚಾಟನಿ ಮಾಡಿದ 10 ರಿಂದ 15 ದಿನಗಳಲ್ಲಿ ದ್ರಾಕ್ಷಿಯ ಸಣ್ಣ ಗೊಂಚಲು ಚಿಗುರು ಒಡೆಯುತ್ತದೆ. ಈ ಸಮಯದಲ್ಲಿ ಉತ್ತಮ ಹವಾಮಾನವಿದ್ದರೆ ಮಾತ್ರ ದ್ರಾಕ್ಷಿ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಈ ರೋಗ ಶೀತ ವಾತಾವರಣದಲಿ ಉತ್ಪತ್ತಿಯಗುವ ಶಿಲೀಂಧ್ರ ಬರುತ್ತದೆ. ಈ ರೋಗ ಬಳ್ಳಿಯಿಂದ ಬಳ್ಳಿಗೆ ಬಹುಬೇಗ ಹರಡುತ್ತಿದೆ.

    ಔಷಧ ವಿತರಣೆಗೆ ರೈತರ ಒತ್ತಾಯ

    ನಾಲ್ಕೈದು ತಿಂಗಳುಗಳಿಂದೆ ಧಾರಾಕಾರ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿತ್ತು. ಇದೀಗ ಬೂಜು ತುಪ್ಪಟ ರೋಗದಿಂದ ದ್ರಾಕ್ಷಿ ಬೆಳೆ ಸಂಪೂರ್ಣ ರೋಗಕ್ಕೆ ತುತ್ತಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಔಷಧಿಗಳನ್ನು ಸಿಂಪಡಿಸಿದರು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯದ ಪರಿಸ್ಥಿತಿ ಮುಂದುವರಿದರೆ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಲಿದೆ. ಹಾಗಾಗಿ ತೋಟಗಾರಿಕೆ ಇಲಾಖೆಯು ಕೂಡಲೇ ರೋಗ ನಿಯಂತ್ರಣಕ್ಕೆ ಔಷಧಿಗಳನ್ನು ವಿತರಣೆ ಮಾಡಬೇಕು. ಜತೆಗೆ ದ್ರಾಕ್ಷಿ ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

    ರೋಗಗಕ್ಕೆ ತುತ್ತಾಗಿರುವ ದ್ರಾಕ್ಷಿ ಬೆಳೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ವಿಜ್ಞಾನಿಗಳು ಬಂದು ದ್ರಾಕ್ಷಿ ಬೆಳೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆದರೆ, ರೋಗಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿ ಅರ್ಥವಾಗಿಲ್ಲ. ಹಾನಿಯಾದ ರೈತರಿಗೆ ಪರಿಹಾರ ನೀಡಲಾಗಿದ್ದು, ಬಾಕಿ ಉಳಿದಿರುವ ರೈತರಿಗೆ ಶೀಘ್ರದಲ್ಲಿ ಪರಿಹಾರ ನೀಡಲಾಗುವುದು.
    | ಅಕ್ಷಯಕುಮಾರ ಉಪಾಧ್ಯಾಯ ಅಥಣಿ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿ

    ದ್ರಾಕ್ಷಿ ಬೆಳೆಗೆ ದಿನದಿಂದ ದಿನಕ್ಕೆ ರೋಗ ಹೆಚ್ಚುತ್ತಿದ್ದು, ಔಷಧಿ ಸಿಂಪಡಿಸಿದರು ಹತೋಟಿಗೆ ಬರುತ್ತಿಲ್ಲ. ಮತ್ತೊಂದೆಡೆ ಔಷಧಿಗಳ ಬೆಲೆ ಗಗನಕ್ಕೆ ಏರಿಕೆ ಕಂಡಿದೆ. ಸರ್ಕಾರ ಕೂಡಲೇ ದ್ರಾಕ್ಷಿ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು.
    | ಮಲ್ಲಿಕಾರ್ಜುನ ಬೆಟಗೇರಿ ದ್ರಾಕ್ಷಿ ಬೆಳೆಗಾರ

    | ಶ್ರೀಶೈಲ ಮಾಳಿ ಅರಟಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts